ಬೆಂಗಳೂರು: ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಮಾಜಿ ಸಚಿವ ಎಂಬಿ ಪಾಟೀಲ್ ಜತೆ ಡಿಸಿಎಂ ಪರಮೇಶ್ವರ್ ಹಾಗೂ ಕಾಂಗ್ರೆಸ್ ಮುಖಂಡರಾದ ಡಿಕೆಶಿ, ಆರ್ ವಿ ದೇಶಪಾಂಡೆ ಮನವೊಲಿಕೆಯ ಕಸರತ್ತು ನಡೆಸಿದರೂ ಕೂಡಾ ಅದು ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಎಂಬಿ ಪಾಟೀಲ್ ಸುಮಾರು 20 ಅತೃಪ್ತ ಶಾಸಕರ ಜತೆಗೂಡಿ ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ಏತನ್ಮಧ್ಯೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಎಂಬಿ ಪಾಟೀಲ್ ನಿವಾಸಕ್ಕೆ ಆಗಮಿಸಿದ್ದರು. ಆದರೆ ಎಂಬಿ ಪಾಟೀಲ್ ಇದ್ಯಾವುದಕ್ಕೂ ಬಗ್ಗಲಿಲ್ಲವಾಗಿತ್ತು. ಇದು ನನಗೆ ಸೇರಿದ ವಿಷಯವಲ್ಲ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಕುಮಾರಸ್ವಾಮಿ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಎಂಬಿ ಪಾಟೀಲ್ ನೇತೃತ್ವದಲ್ಲಿ ರಚನೆಯಾಯ್ತು 20 ಶಾಸಕರ ಟೀಮ್?:
ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಎಂಬಿ ಪಾಟೀಲ್ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಸುಮಾರು 20 ಶಾಸಕರನ್ನು ಸಂಪರ್ಕಿಸಿದ್ದು, ಅವರೊಂದಿಗೆ ಚರ್ಚಿಸಿ ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
Related Articles
ಯಾವೆಲ್ಲ ಶಾಸಕರು ಎಂಬಿ ಪಾಟೀಲ್ ಜತೆಗಿದ್ದಾರೆ?
ಎಂಟಿಬಿ ನಾಗರಾಜ್, ಡಾ.ಕೆ ಸುಧಾಕರ್, ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ರಘಮೂರ್ತಿ, ರೋಷನ್ ಬೇಗ್, ಬಿಕೆ ಸಂಗಮೇಶ್, ಬಿ ನಾಗೇಂದ್ರ, ಭೀಮಾ ನಾಯ್ಕ್, ಸತೀಶ್ ಜಾರಕಿಹೊಳಿ ಹ್ಯಾರಿಸ್, ಬಿಸಿ ಪಾಟೀಲ್, ಸಿಎಸ್ ಶಿವಳ್ಳಿ, ಹೆಚ್ ಎಂ ರೇವಣ್ಣ, ತುಕಾರಾಂ. ಪಿಟಿ ಪರಮೇಶ್ವರ್ ನಾಯ್ಕ್, ವಿ.ಮುನಿಯಪ್ಪ, ಶಿವರಾಮ್ ಹೆಬ್ಬಾರ್, ಬಿ.ನಾರಾಯಣ.
ಕೊಟ್ಟರೆ ಡಿಸಿಎಂ ಹುದ್ದೆ ಕೊಡಿ:
ನನಗೆ ನಿಷ್ಠೆ, ಹಿರಿತನಕ್ಕೆ ಹಾಗೂ ಉತ್ತರ ಕರ್ನಾಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನನಗೆ ಡಿಸಿಎಂ ಹುದ್ದೆ ಕೊಡಬೇಕೆಂದು ಈಗ ಎಂಬಿ ಪಾಟೀಲ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 2ನೇ, 3ನೇ ಹಂತದಲ್ಲಿ ನನಗೆ ಯಾವ ಸ್ಥಾನವೂ ಬೇಡ. ನನಗೆ ಮೊದಲ ಪಟ್ಟಿಯಲ್ಲಿಯೇ ಸಚಿವ ಸ್ಥಾನ ಕೊಡಬೇಕಿತ್ತು ಎಂದು ಪಾಟೀಲ್ ಕಾಂಗ್ರೆಸ್ ನಾಯಕರಲ್ಲಿ ಅಲವತ್ತುಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.