ವಿಜಯಪುರ : ಬಿಜೆಪಿ ನಾಯಕರು ವಿವಾದಿತ ಸಾವರ್ಕರ್ ಮೆರವಣಿಗೆ, ಗಣೇಶ ಉತ್ಸವದಲ್ಲಿ ಭಾವಚಿತ್ರ ವಿತರಿಸಿದರೆ, ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ನಾಡಿನ ಪ್ರಾಮಾಣಿಕ ಹೋರಾಟಗಾರರಾದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ವೆಂಕಟಪ್ಪ ನಾಯಕರಂತ ದೇಶಪ್ರೇಮಿ ವೀರ ಹೋರಾಟಗಾರರ ರಥಯಾತ್ರೆ ನಡೆಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಲು ಮುಂದಾಗಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಅವರು ವಿವಾದಿತ ಸಾವರ್ಕರ್ ಯಾತ್ರೆಗೆ ಚಾಲನೆ ನೀಡಿದ್ದಾರೆ. ಬದಲಾಗಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಅವರ ಫೋಟೋ ಹಾಗೂ ಮೆರವಣಿಗೆ ಮಾಡಬೇಕು. ಈಗಲೂ ಅವರು ಕನ್ನಡ ನಾಡಿನ ಇಂಥ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮರ ಫೋಟೋ ಮೆರವಣಿಗೆ, ರಥಯಾತ್ರೆ ಮಾಡಿದರೆ ನಾವೇ ಅವರೊಂದಿಗೆ ಕೈ ಜೋಡಿಸುತ್ತೇವೆ. ಬದಲಾಗಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್ ಫೋಟೋ ಇರಿಸಿ ಮಾಡುತ್ತಿರುವ ಮೆರವಣಿಗೆ ಯಡಿಯೂರಪ್ಪ ಅವರಂಥ ನಾಯಕನಿಗೆ ಶೋಭೆ ತರುವುದಿಲ್ಲ. ಹೀಗಾಗಿ ಕೂಡಲೇ ಇಂಥ ಮೆರವಣಿಗೆ ನಿಲ್ಲಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರಿಗೆ ಎಂದೂ ದೇಶಪ್ರೇಮಿ, ಪ್ರಾಮಾಣಿಕ ಹೋರಾಟಗಾರರು ಬೇಕಿಲ್ಲ. ಬದಲಾಗಿ ವಿವಾದಿತ ವ್ಯಕ್ತಿಗಳನ್ನು ವೈಭವಿಕರಿಸಿ ಗೊಂದಲ ಸೃಷ್ಟಿಸುವುದು, ಭಾವನಾತ್ಮಕವಾಗಿ ಕೆರಳಿಸಿ ಸಮಾಜದಲ್ಲಿ ಶಾಂತಿಕದಡುವುದೇ ಮೂಲ ಉದ್ದೇಶ ಹಾಗೂ ಆದ್ಯತೆ ವಿಷಯ ಎಂದು ಕುಟುಕಿದರು.
ಹೀಗಾಗಿ ನಾವು ಕನ್ನಡ ನಾಡಿನ ಸ್ವಾತಂತ್ರ್ಯದ ಕ್ರಾಂತಿ ವೀರರ, ಬಸವಣ್ಣನಂಥ ಮಹಾನ್ ಮಾನವತಾವಾದಿ, ಮೈಸೂರು ಮಹಾರಾಜರ ಅವರಂಥ ಮಹಾತ್ಮರ ಫೋಟೋ ಸಮೇತ ರಥಯಾತ್ರೆ ಮಾಡುತ್ತೇವೆ. ಶೀಘ್ರವೇ ಈ ಬಗ್ಗೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಇದನ್ನೂ ಓದಿ : ಚಾಮರಾಜಪೇಟೆ : ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಕಂದಾಯ ಸಚಿವರು ಹೇಳಿದ್ದೇನು?