ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ಬಳಿಕ ಹಿರಿತೆರೆಯಲ್ಲೂ ನಾಯಕಿಯಾಗಿ ನಟಿಸಿದ ಮಯೂರಿ ಆ ಬಳಿಕ ಮದುವೆಯಾಗಿ ಬಣ್ಣದ ಲೋಕದಿಂದ ದೂರವಿದ್ದಿದ್ದು ಗೊತ್ತೇ ಇದೆ. ಈಗ ಮಯೂರಿ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಈ ಬಾರಿ ಅವರು ನಂಬಿರೋದು ದೇವ್ರವನ್ನು!
ಹೌದು, ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. “ನನ್ನ ದೇವ್ರು’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ.
ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ.
ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ ಎಂಬುದು ಕುತೂಹಲವಂತೆ. ಶ್ರುತಿ ನಾಯ್ಡು “ನನ್ನ ದೇವ್ರು’ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಬೆಳ್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ “ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಅವಿನಾಶ್ ದಿವಾಕರ್ ಧಾರಾವಾಹಿಯ ನಾಯಕ. ಜುಲೈ 8ರಿಂದ ಸಂಜೆ ಆರೂವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ ಮೇಲೆ ಮಯೂರಿ ವಿಶ್ವಾಸವಿಟ್ಟಿದ್ದಾರೆ.