ಬೆಂಗಳೂರು: ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಮೂರು ದಿನಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮೇಯರ್ ಆರ್.ಸಂಪತ್‌ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಬಿಬಿಎಂಪಿ, ಜಲಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಪುಲಿಕೇಶಿನಗರದ ಏಳು ವಾರ್ಡ್‌ಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾದ ಅನುದಾನ, ಆಗಬೇಕಿರುವ ಕೆಲಸಗಳು ಕುರಿತು ಕ್ರಿಯಾ ಯೋಜನೆ ಸಲ್ಲಿಸುವಂತೆ ತಿಳಿಸಿದರು.
ಜಲಮಂಡಳಿ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ಅಭಿವೃದ್ಧಿ ಆಗಬೇಕಾಗಿರುವ ಕಾರ್ಯಗಳ ಪಟ್ಟಿಯನ್ನು ಮತ್ತು ಕೆಲಸ ಸ್ಥಗಿತಕೊಂಡಿರುವ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಜತೆಗೆ ಈ ಎಲ್ಲಾ ಕಾರ್ಯಗಳಿಗೆ ಒಟ್ಟು ವೆಚ್ಚದ ಬಗ್ಗೆ ಮಾಹಿತಿಯನ್ನು ನೀಡಬೇಕು. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳು ಹಾಗೂ ನೂತನ ಯೋಜನೆಯ ಬಗ್ಗೆ ವರದಿಯನ್ನು ತಯಾರಿಸಿ ಸಲ್ಲಿಸಬೇಕೆಂದು ಸೂಚಿಸಿದರು.
ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್‌ಗಳ ಸ್ವತ್ಛತಾ ವಾಹನದ ಸುಸ್ಥಿತಿ ಬಗ್ಗೆ ವರದಿ ಸಲ್ಲಿಸುವಂತೆ ಹಾಗೂ ಎಲ್ಲ ವಾಹನಗಳು ಕಾರ್ಯ ನಿರ್ವಹಿಸುವ ಬಗ್ಗೆ ಸ್ಥಳದಲ್ಲೇ ತಪಾಸಣೆ ನಡೆಸುತ್ತೇನೆ. ಕ್ಷೇತ್ರ ಮೇಲುಸ್ತುವಾರಿ ನಿರ್ವಾಹಣಾ ಅಧಿಕಾರಿಗಳು ಬೆಳಿಗ್ಗೆ 8 ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ ಕ್ಷೇತ್ರದಲ್ಲಿರಬೇಕು ಎಂದು ತಾಕೀತು ಮಾಡಿದರು.
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ಬಳ್ಳಾರಿ ರಸ್ತೆಯ ಗಂಗೇನಹಳ್ಳಿ ಮಾರುಕಟ್ಟೆ ಸುತ್ತಮುತ್ತ ಸ್ವತ್ಛತೆ ಕಾರ್ಯ ಪರಿಶೀಲಿಸಿದ ಮೇಯರ್, ಹಬ್ಬ ಮುಗಿದು ಎರಡು ದಿನವಾದರೂ ಸರಿಯಾಗಿ ಸ್ವತ್ಛತೆ ನಿರ್ವಹಿಸದೆ ಇರುವುದನ್ನು ಕಂಡು ಸಿಡಿಮಿಡಿಗೊಂಡರು. ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯ ತೆರವುಗೊಳಿಸಲು ಸೂಚಿಸಿದರು.