Advertisement

ಮೇಯರ್‌ ಪಟ್ಟಕ್ಕೆ ಮೂವರ ಪಟ್ಟು

12:11 PM Sep 27, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೂಂದು ಅವಧಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದರೂ, ಮೇಯರ್‌ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಗಣಿಮಿಸಿದೆ.

Advertisement

ಬಿಬಿಎಂಪಿ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ಶುಕ್ರವಾರ (ಸೆ.28) ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ
ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ಅದರಂತೆ ಜಯನಗರ ವಾರ್ಡ್‌ನ ಗಂಗಾಬಿಕೆ ಮಲ್ಲಿಕಾರ್ಜುನ್‌, ಶಾಂತಿನಗರ ವಾರ್ಡ್‌ನ ಸೌಮ್ಯಾ ಶಿವಕುಮಾರ್‌ ಹಾಗೂ ಲಿಂಗರಾಜಪುರ ವಾರ್ಡ್‌ನ ಲಾವಣ್ಯ ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ತೀವ್ರ ಪೈಪೋಟಿ ಉಂಟಾಗಿದೆ.

ಬುಧವಾರ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಪಕ್ಷೇತರ ಅಭ್ಯರ್ಥಿಗಳೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ವೇಳೆ ಮೇಯರ್‌ ಸ್ಥಾನದ ಆಕಾಂಕ್ಷಿಗಳಾದ ಗಂಗಾಂಬಿಕೆ, ಸೌಮ್ಯಾ ಹಾಗೂ ಲಾವಣ್ಯ ಅವರ ಪತಿ ಹಾಜರಿದ್ದರು. ಈ ವೇಳೆ ಪಕ್ಷೇತರರು ನೀವು ಯಾರು ಬೇಕಾದರೂ ಮೇಯರ್‌ ಆಗಿ ಆದರೆ ಪಕ್ಷೇತರರಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ರಾಮಲಿಂಗಾರೆಡ್ಡಿ ಅವರು ಗಂಗಾಂಬಿಕೆ ಅವರಿಗೆ ಮೇಯರ್‌ ಸ್ಥಾನ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಗಂಗಾಂಬಿಕೆ
ಮೇಯರ್‌ ಆಗಲು ಬೆಂಬಲ ನೀಡುವಂತೆ ಪಕ್ಷೇತರರನ್ನು ಕೋರಲು ಸಭೆ ಕರೆದಿದ್ದರು. ಆದರೆ, ಅಚ್ಚರಿ ಎಂಬಂತೆ ಸೌಮ್ಯಾ ಸಹ ಸಭೆಗೆ ಹಾಜರಾಗುವ ಮೂಲಕ ತಾವೂ ಸಹ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸೌಮ್ಯಾ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಬೆಂಬಲ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಅವರ ಅಭ್ಯರ್ಥಿ ಗಂಗಾಂಬಿಕೆಗೆ ಮೇಯರ್‌ ಸ್ಥಾನ ಸಿಕ್ಕರೆ ನಗರದಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಸೌಮ್ಯಾ ಅವರನ್ನೇ ಮೇಯರ್‌ ಮಾಡಲು ಡಿಸಿಎಂ ಪ್ರಯತ್ನಿಸುತ್ತಿದ್ದಾರೆ. ಜತೆಗೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಸೌಮ್ಯಾಗೆ ಮೇಯರ್‌ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

ಈ ಮಧ್ಯೆ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಲಿಂಗರಾಜಪುರ ವಾರ್ಡ್‌ ಸದಸ್ಯೆ ಲಾವಣ್ಯ ಅವರಿಗೆ ಮೇಯರ್‌ ಸ್ಥಾನ ಕೊಡಿಸಲು ಸಚಿವ ಕೆ.ಜೆ.ಜಾರ್ಜ್‌ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಬುಧವಾರದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌ ಖಾನ್‌, ಜಯಮಾಲಾ, ಕೃಷ್ಣ ಬೈರೇಗೌಡ, ಶಾಸಕರಾದ ರಾಮಲಿಂಗಾರೆಡ್ಡಿ, ಎನ್‌.ಎ.ಹ್ಯಾರಿಸ್‌, ಎಸ್‌.ಟಿ.ಸೋಮಶೇಖರ್‌ ಹಾಜರಿದ್ದರು.

ಮೇಯರ್‌ ಅಭ್ಯರ್ಥಿ ಇಂದು ತೀರ್ಮಾನ ಬಿಬಿಎಂಪಿ ಮೇಯರ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬುಧವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ನೇತೃತ್ವದಲ್ಲಿ ಬೆಂಗಳೂರಿನ ಶಾಸಕರು, 2018ರ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಸಂಸದರು, 2015ರ ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿಗಳು, ವಿಧಾನಪರಿಷತ್‌ ಸದಸ್ಯರೊಂದಿಗೆ ಖಾಸಗಿ
ಹೋಟೆಲ್‌ನಲ್ಲಿ ಸಭೆ ನಡೆಸಲಾಯಿತು. ಮೇಯರ್‌ ಚುನಾವಣೆಗೆ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಬೇಕೆಂದು ನಗರ ಶಾಸಕರು ಹಾಗೂ ಸಂಸದರ ಅಭಿಪ್ರಾಯ ಪಡೆಯಲಾಗಿದೆ. ಅದರಂತೆ ಶಾಸಕರ ಹಾಗೂ ಸಂಸದರ ಅಭಿಪ್ರಾಯ ಪಡೆದು ಮೇಯರ್‌ ಅಭ್ಯರ್ಥಿ ಯಾರಗಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು ಗುರುವಾರ ಅಂತಿಮಗೊಳಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್‌ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಕಳೆದ ಬಾರಿ ಹಿರಿಯ ಸದಸ್ಯರು ಸ್ಪರ್ಧೆಯಲ್ಲಿದ್ದ ಕಾರಣ ಅವಕಾಶ ತಪ್ಪಿತ್ತು. ಈ ಬಾರಿ ನಾನೂ ಪ್ರಬಲ ಆಕಾಂಕ್ಷಿ.  
ಸೌಮ್ಯಾ ಶಿವಕುಮಾರ್‌, ಮೇಯರ್‌ ಆಕಾಂಕ್ಷಿ 

ಮೇಯರ್‌ ಸ್ಥಾನಕ್ಕೆ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಲಿಂಗಾಯತ ಸಮುದಾಯದ ಸದಸ್ಯರಿಗೆ ಹಲವು ವರ್ಷಗಳಿಂದ ಪಾಲಿಕೆಯಲ್ಲಿ ಮೇಯರ್‌ ಸ್ಥಾನ ದೊರೆತಿಲ್ಲ. ವರಿಷ್ಠರ ತೀರ್ಮಾನಕ್ಕೆ ಬದ್ಧ. 
  ಗಂಗಾಂಬಿಕೆ, ಮೇಯರ್‌ ಆಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next