Advertisement

ಮೇಯರ್‌ ಕಪ್‌ ಪಂದ್ಯಾವಳಿಗೆ ಬಾರದ ಶಾಸಕ ಸುರೇಶ್‌ ಮೇಲೆ ಮೇಯರ್‌ ಗರಂ

12:29 PM Aug 04, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಶಾಸಕ ಎಸ್‌.ಸುರೇಶ್‌ಕುಮಾರ್‌ ಪಾಲಿಕೆಯ ಪ್ರತಿ ಕಾರ್ಯಕ್ರಮಗಳನ್ನು ವಿರೋಧಿಸಿ, ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೇಯರ್‌ ಜಿ.ಪದ್ಮಾವತಿ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಚಿವರಾಗಿ, ಶಾಸಕರಾಗಿ ರಾಜಾಜಿನಗರ ಕ್ಷೇತ್ರದ
ಅಭಿವೃದ್ಧಿಗೆ ಅವರು ಏನು ಕೆಲಸ ಮಾಡಿಲ್ಲ. ಇದೇ ಮೊದಲ ಬಾರಿಗೆ ಪಾಲಿಕೆಯಿಂದ ರಾಜಾಜಿನಗರ ಕ್ಷೇತ್ರದಲ್ಲಿ ಆಯೋಜಿಸಿದ್ದ ಮೇಯರ್‌ ಕಪ್‌ ವಾಲಿಬಾಲ್‌ ಪಂದ್ಯಾವಳಿಯ ಅಧ್ಯಕ್ಷತೆ ವಹಿಸುವಂತೆ ಖುದ್ದು ನಾನೇ ಮನವಿ ಮಾಡಿದ್ದೆ. ಆದರೆ, ಪ್ರತಿಯೊಂದನ್ನು ವಿರೋ ಧಿಸುವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸದೆ ಗೈರಾಗುವ ಮೂಲಕ ತಾವು ಕ್ರೀಡೆಯ ಬಗ್ಗೆ ಹೊಂದಿರುವ ಅಭಿರುಚಿಯೇನು ಎಂಬುದು ತೋರಿಸಿದ್ದಾರೆ,’ ಎಂದು ದೂರಿದರು.

Advertisement

ಪ್ರತಿ ವರ್ಷ ಮೇಯರ್‌ಕಪ್‌ ವಾಲಿಬಾಲ್‌ ಪಂದ್ಯಾವಳಿಯನ್ನು ಮೇಯರ್‌ರ ವಾರ್ಡ್‌ನಲ್ಲಿ ಆಯೋಜಿಸುವುದು ವಾಡಿಕೆ. ಅದರಂತೆ ರಾಜಾಜಿನಗರ ಶ್ರೀರಾಮಮಂದಿರ ಮೈದಾನದಲ್ಲಿ ಪಂದ್ಯಾವಳಿ ನಡೆಸಲಾಗಿದೆ. ನಾನೇ ಖುದ್ದಾಗಿ ಕರೆ ಮಾಡಿ ಅಧ್ಯಕ್ಷತೆ ವಹಿಸುವಂತೆ ಹಾಗೂ ಪಂದ್ಯಾವಳಿಯ ಬಗ್ಗೆ ಸಲಹೆ ನೀಡುವಂತೆ ಕೋರಿದ್ದೇನೆ. ಜತೆಗೆ ಕಾರ್ಯಕ್ರಮಕ್ಕೆ ಬರುವಂತೆ ಪತ್ರಗಳನ್ನು ಬರೆದಿದ್ದೇನೆ. ಇಷ್ಟಾದರೂ ಸುರೇಶ್‌ಕುಮಾರ್‌ ತಮಗೆ ಆಹ್ವಾನ ನೀಡಿಲ್ಲ ಹಾಗೂ ಮೇಯರ್‌, ರಾಹುಲ್‌ ಗಾಂಧಿ ಅವರ ಫೋಟೋ ಮಾತ್ರ ಪ್ರದರ್ಶಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಗೈರಾಗಿದ್ದು ಸರಿಯಲ್ಲ ಎಂದರು. ಶಾಸಕರಾಗಿ ಕ್ಷೇತ್ರದ ಜನತೆಗಾಗಿ ಒಳ್ಳೆಯ ಕೆಲಸಗಳನ್ನು ಮಾಡದ ಅವರು, ಒಳ್ಳೆಯ ಕೆಲಸ ಮಾಡುವವರ ಮೇಲೂ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಶಿಷ್ಟಾಚಾರ ಉಲ್ಲಂಘನೆ ಅಗಿಲ್ಲ:
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಸಭಾ ವೇದಿಕೆಯ ಅಧಿಕೃತ ಬ್ಯಾನರ್‌ನಲ್ಲಿ ಶಿಷ್ಟಾಚಾರ ಪಾಲಿಸಲಾಗಿದೆ. ಕ್ಷೇತ್ರದ ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರು, ಪಾಲಿಕೆ ಸದಸ್ಯರ ಒಂದೇ ಗಾತ್ರದ ಫೋಟೋಗಳನ್ನು ಹಾಕಿದ್ದೇವೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಆದರೂ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಮೇಯರ್‌ ಅಸಮಾಧಾನ ವ್ಯಕ್ತಪಡಿಸಿದರು.

ನಾವು ಹೊಣೆಯಲ್ಲ: ಮೈದಾನದ ಒಳಭಾಗ ದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಯಾವುದೇ ನಾಯಕರ ಫೋಟೋಗಳನ್ನು ಹಾಕಿಲ್ಲ. ಮೈದಾನದ ಹೊರ ಭಾಗದಲ್ಲಿ ಅಭಿಮಾನಿಗಳು ರಾಹುಲ್‌ಗಾಂಧಿ, ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಫೋಟೋ ಹಾಕಿರಬಹುದು. ಅದಕ್ಕೆ ನಮ್ಮನ್ನು ಹೊಣೆ ಮಾಡುವುದು ಸರಿಯಲ್ಲ. ಎಲ್ಲೋ ರಾಹುಲ್‌ ಗಾಂಧಿ, ವೇಣುಗೋಪಾಲ್‌ ಅವರುಗಳ ಫೋಟೋ ಹಾಕಿದ್ದರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ಗೈರಾಗಿರುವುದು ಅವರ ವ್ಯಕ್ತಿತ್ವವೇನು ಎಂಬುದನ್ನು ತೋರುತ್ತದೆ ಎಂದು ಮೇಯರ್‌ ಟೀಕಿಸಿದರು. 

ಪಂದ್ಯದ ಹೆಸರಲ್ಲಿ ಹಣದ ಅವ್ಯವಹಾರ
ಮೇಯರ್‌ ಪದ್ಮಾವತಿ ಅವರು ಮೇಯರ್‌ ಕಪ್‌ ಪಂದ್ಯಾವಳಿಯನ್ನು ಆಯೋಜನೆ ಮಾಡುವ ಭರದಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ನಿಯಮಾವಳಿ ಪ್ರಕಾರ 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಕೆಲಸಗಳಿಗೆ ಟೆಂಡರ್‌ ಆಹ್ವಾನಿಸಬೇಕು. ಆದರೆ, ಮೇಯರ್‌
ಕಪ್‌ ಪಂದ್ಯಾವಳಿಯಲ್ಲಿ ಯಾವುದೇ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. ಇಂತಹ ಪಂದ್ಯಾವಳಿ ಆಯೋಜಿಸುವಾಗ ಸಮಿತಿಗಳನ್ನು ರಚನೆ ಮಾಡಬೇಕಾಗುತ್ತದೆ. ಆದರೆ, ಮೇಯರ್‌ ಅವರು ಆಯುಕ್ತರಿಗೆ ಒತ್ತಡ ತಂದು 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿಕೊಂಡು ಆ ಹಣವನ್ನು ಖರ್ಚು ಮಾಡಲು ಸಂಬಂಧಪಟ್ಟ ಎಂಜಿನಿಯರ್‌ಗೆ ಅವಕಾಶ ನೀಡಿರುವುದು ಕಾನೂನು ಬಾಹಿರವಾಗಿದೆ. ಪಂದ್ಯಾವಳಿಗೆ ವೆಚ್ಚ ಮಾಡುತ್ತಿರುವ ಹಣದ ವೆಚ್ಚದ ಕುರಿತು ಜನರಿಗೆ ಮೇಯರ್‌ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next