ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಗ್ಗೆ ಮಾತನಾಡಲು ಮಹಾನಗರ ಪಾಲಿಕೆ ಮೇಯರ್ ಅವರಿಗೆ ನೈತಿಕತೆ ಇಲ್ಲ ಎಂದು ನಗರಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಮೇಯರ್ ಯಾರು ಆಗಿದ್ದಾರೆ ಅಂತಾನೇ ಗೊತ್ತಾಗುತ್ತಿಲ್ಲ. ಜಯಮ್ಮ ಗೋಪಿನಾಯ್ಕ ಅವರಂತೂ ಏನೇ ಕೇಳಿದರೂ ಬೇರೆಯವರ ಬಳಿ ಮಾತನಾಡಿ ಅಂತಾರೆ. ಅಂತಹವರು ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವರಾಗಿ ಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಎಂಸಿಸಿ ಬಿ ಬ್ಲಾಕ್‌ನ ಅನುದಾನ ಕೇಳಲು ಕರೆ ಮಾಡಿದರೆ ಮೇಯರ್ ಪತಿ ಗೋಪಿನಾಯ್ಕ ಸ್ವೀಕರಿಸುತ್ತಾರೆ. ಅವರಿಗೆ ಕೇಳಿದರೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಅವರ ಬಳಿ ಕೇಳಿ ಹೇಳುತ್ತೇನೆ ಎನ್ನುತ್ತಾರೆ. ಹಾಗಿದ್ದರೆ ಮೇಯರ್ ಆಗಿರುವುದು ಯಾರು ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಮೇಯರ್ ಅವರು ಮೊದಲು ತಮ್ಮ ಜವಾಬ್ದಾರಿ ಅರಿತು ಮಾತನಾಡಲಿ. ಮಲ್ಲಿಕಾರ್ಜುನ್ ಅವರು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯ್ತು. ಜಯಮ್ಮ ಅವರು ಮೇಯರ್ ಆಗಿದ್ದು ಈಗಷ್ಟೇ. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಯಾವೆಲ್ಲ ಅಭಿವೃದ್ಧಿ ಕೆಲಸ ಆಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಎಸ್.ಟಿ. ವೀರೇಶ್ ಮೇಯರ್ ಆಗಿದ್ದಾಗ 34 ಸಾವಿರ ಗಿಡಗಳನ್ನು ನೆಟ್ಟಿದ್ದೇವೆ ಎಂದಿದ್ದರು. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸ್ಥಾಯಿ ಸಮಿತಿ ಸದಸ್ಯರ ಜೊತೆ ಪರಿಶೀಲನೆಗೆ ಹೋಗೋಣ ಎಂದು ಮೇಯರ್ ಜಯಮ್ಮ ಹೇಳಿದ್ದರೂ ಇದುವರೆಗೆ ಆಗಿಲ್ಲ. ನಾಲ್ಕು ಬಾರಿ ಗಮನಕ್ಕೆ ತಂದರೂ ಮುಂದೂಡುತ್ತಲೇ ಇದ್ದಾರೆ. ಇದನ್ನು ನೋಡಿದರೆ ಭ್ರಷ್ಟಾಚಾರ ನಡೆದಿದೆ ಎಂಬುದು ಗೊತ್ತಾಗುತ್ತದೆ. ಮಲ್ಲಣ್ಣನವರ ಬಗ್ಗೆ ಮಾತನಾಡಿದರೆ ಮುಂದೆ ಶಾಸಕರಾಗಬಹುದು ಎಂಬ ಭ್ರಮೆಯಲ್ಲಿ ಎಸ್.ಟಿ. ವೀರೇಶ್ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಿ.ಬಿ. ರಸ್ತೆ, ಎಲೆಬೇತೂರು ರಸ್ತೆ, ರಿಂಗ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಲ್ಲಿಕಾರ್ಜುನ್ ಅವರ ಸಂಬಂಧಿಕರು ಮಾತ್ರ ಓಡಾಡುತ್ತಾರಾ, ಬೇರೆ ಜನರು ಓಡಾಡುತ್ತಿಲ್ಲವೆ, ಕುಂದುವಾಡ ಕೆರೆಯ ನೀರನ್ನು ಮಲ್ಲಣ್ಣನವರ ಸಂಬಂಧಿಕರು ಮಾತ್ರ ಕುಡಿಯುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಮಹಾನಗರ ಪಾಲಿಕೆಯ 28, 37 ನೇ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಆಮಿಷಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋದವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಪಾಲಿಕೆಯಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.