Advertisement

ಮೇಯರ್‌ ಫೋನ್‌ ಇನ್‌ ಕಾರ್ಯಕ್ರಮ

10:32 AM Nov 24, 2017 | Team Udayavani |

ಲಾಲ್‌ಬಾಗ್‌ : ಕುಡಿಯುವ ನೀರಿನ ಬಿಲ್‌ ಪಾವತಿಸಲು ಆನ್‌ಲೈನ್‌ ಹಾಗೂ ಪಾಲಿಕೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ನಗರ ವ್ಯಾಪ್ತಿಯ ಕೆಲವು ಬ್ಯಾಂಕ್‌ಗಳಲ್ಲಿ ನೀರಿನ ಶುಲ್ಕ ಪಡೆಯಲು ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಂಬಂಧಪಟ್ಟ ಬ್ಯಾಂಕ್‌ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು. ಪಾಲಿಕೆಯಲ್ಲಿ ಗುರುವಾರ ಜರಗಿದ ಮೇಯರ್‌ ಫೋನ್‌ ಇನ್‌ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

Advertisement

ಅಬ್ದುಲ್‌ ರೆಹಮಾನ್‌ ಕರೆ ಮಾಡಿ, ಬ್ಯಾಂಕ್‌ಗಳಲ್ಲಿ ಸಾಫ್ಟ್ವೇರ್‌ನ ಸಮಸ್ಯೆ ನೆಪವೊಡ್ಡಿ ನೀರಿನ ಶುಲ್ಕ ಪಡೆಯಲು ಹಿಂದೇಟು ಹಾಕಲಾಗುತ್ತಿದ್ದು, ಸಾರ್ವಜನಿಕರು ಪಾಲಿಕೆ ಕಟ್ಟಡದಲ್ಲಿರುವ ಕಾರ್ಪೊರೇಶನ್‌ ಬ್ಯಾಂಕ್‌ ಶಾಖೆಗೆ ಬರಬೇಕಾಗಿದೆ. ಜಪ್ಪುವಿನ ಕೆಲವು ಬ್ಯಾಂಕ್‌ಗಳಲ್ಲೂ ನೀರಿನ ಶುಲ್ಕ ಪಡೆಯದ ಕಾರಣ ಅಲ್ಲಿಂದ ಲಾಲ್‌ಬಾಗ್‌ವರೆಗೆ ನಾಲ್ಕೈದು ಕಿ.ಮೀ. ಕ್ರಮಿಸಿ ಬರಬೇಕಾಗುತ್ತದೆ ಎಂದು ದೂರಿದರು.

ಕೃಷ್ಣಾಪುರದಿಂದ ಪ್ರವೀಣ್‌ ಕರೆ ಮಾಡಿ, ತಣ್ಣೀರುಬಾವಿ ರಸ್ತೆಯಲ್ಲಿ ಮರಳುಗಾರಿಕೆಯಿಂದಾಗಿ ನಡೆದಾಡಲು ಕಷ್ಟವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಾದುರಸ್ತಿಯಲ್ಲಿವೆ ಎಂದು ದೂರಿದಾಗ, ಮರಳುಗಾರಿಕೆ ಸಮಸ್ಯೆ ತಮ್ಮ ವ್ಯಾಪ್ತಿಗೆ ಒಳಪಡದಿದ್ದರೂ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ರಾ.ಹೆ. ಸಮಸ್ಯೆ ಬಗ್ಗೆ ಬಹಳಷ್ಟು ದೂರುಗಳು ಬಂದಿದ್ದು, ಇದನ್ನು ಸಂಸದರು ಹಾಗೂ ರಾ.ಹೆ.ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮೇಯರ್‌ ಹೇಳಿದರು.

ರಸ್ತೆ ಸಮಸ್ಯೆ ಸರಿಪಡಿಸಿ; ಆಗ್ರಹ
ವಿಕ್ಟರ್‌ ಮೆಂಡೋನ್ಸಾ ಕರೆ ಮಾಡಿ, ಕೋಟೆಕಣಿ ರಸ್ತೆಯ ಕಾಂಕ್ರೀಟ್‌ ಕಾಮಗಾರಿ 2015ರಲ್ಲಿ ಆಗಿದ್ದು, ಇದು ಅಲ್ಲಲ್ಲಿ ಕಿತ್ತುಹೋಗಿದೆ. ಮುಂದಿನ ತಾರ್‌ ರಸ್ತೆ ಕೂಡ ಕೆಟ್ಟಿದೆ ಎಂದು ದೂರಿದರು. ದೈಹಿಕ ಶಿಕ್ಷಕ ನಾರಾಯಣ್‌ ಕರೆ ಮಾಡಿ, ಬೆಂದೂರ್‌ವೆಲ್‌ನ ಸೈಂಟ್‌ ಆ್ಯಗ್ನೆಸ್‌ ವಿಶೇಷ ಶಾಲೆಯ ಬಳಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಅಲ್ಲಿನ ಮಕ್ಕಳಿಗೆ ರಸ್ತೆ ದಾಟಲು, ನಡೆದಾಡಲು ಸಮಸ್ಯೆಯಾಗುತ್ತಿದೆ ಎಂದು ದೂರಿದಾಗ, ರಸ್ತೆ ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂದರ್ಭ ಕೆಲವು ಅಡೆತಡೆಗಳು ಸಹಜ. ಸಾರ್ವಜನಿಕರು ಸಹಕರಿಸಬೇಕು. ಆದರೆ ವಿಶೇಷ ಮಕ್ಕಳಿಗೆ ರಸ್ತೆ ಕಾಮಗಾರಿಯಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಮೇಯರ್‌ ತಿಳಿಸಿದರು.

ಒಂದೂವರೆ ವರ್ಷದಿಂದ ಚೇಂಬರ್‌ನಿಂದ ನೀರು ಪೋಲು
ಸಾರ್ವಜನಿಕರೊಬ್ಬರು ಕರೆ ಮಾಡಿ, ಕುಲಶೇಖರ ಕಲ್ಪನೆ ಬಳಿ ದೊಡ್ಡ ನೀರಿನ ಚೇಂಬರ್‌ನಲ್ಲಿ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಸ್ಥಳೀಯ ವಾಲ್‌ಮೆನ್‌ಗೆ ತಿಳಿಸಿದರೆ, ಅವರು ಒಂದೂವರೆ ವರ್ಷದಿಂದಲೂ ಅದು ಹರಿದು ಹೋಗುತ್ತಿದೆ ಎನ್ನುತ್ತಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಮೇಯರ್‌, ಸಂಬಂಧಪಟ್ಟ ವಾಲ್‌ಮೆನ್‌ರನ್ನು ಕರೆಯಿಸಿ ಸಮಸ್ಯೆ ಬಗೆಹರಿಸಬೇಕು. ಮಾತ್ರವಲ್ಲದೆ ಒಂದೂವರೆ ವರ್ಷದಿಂದ ಸಮಸ್ಯೆ ಇದ್ದಾಗ ಅವರೇನು ಮಾಡುತ್ತಿದ್ದಾರೆಂಬುದನ್ನು ವಿಚಾರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ವಾಮಂಜೂರಿನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ ಎಂಬ ಪ್ರವೀಣ್‌ ಅವರ ದೂರಿಗೆ ಸ್ಪಂದಿಸಿದ ಮೇಯರ್‌, ಎಡಿಬಿ 2ನೆ ಹಂತದ ಕಾಮಗಾರಿಯಲ್ಲಿ ಆ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಆಗಲಿದೆ ಎಂದರು. ಮಳೆ ನೀರು ಹರಿಯುವ ಚರಂಡಿಗೆ ಒಳಚರಂಡಿ ನೀರು, ಸಿಟಿ ಬಸ್‌ಗಳ ಕರ್ಕಶ ಹಾರ್ನ್ ಸಮಸ್ಯೆ, ಖಾಲಿ ನಿವೇಶನದಲ್ಲಿ ಪೊದೆಗಳ ಸಮಸ್ಯೆ ಮುಂತಾದ ದೂರುಗಳು ಕೇಳಿ ಬಂದವು. ಉಪ ಮೇಯರ್‌ ರಜನೀಶ್‌, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್‌ ಉಪಸ್ಥಿತರಿದ್ದರು. 

ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ; ಶಾಶ್ವತ ಪರಿಹಾರ
ನೇಮು ಕೊಟ್ಟಾರಿ ಕರೆ ಮಾಡಿ, ಗುಜ್ಜರಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅಲ್ಲಿನ ಒಳಚರಂಡಿಗಳ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಚುನಾವಣೆ ಘೋಷಣೆ ಆದರೆ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಗುಜ್ಜರೆಕೆರೆ ಅಭಿವೃದ್ಧಿ ಸಂಬಂಧಿಸಿ ಅಲ್ಲಿನ ಒಳಚರಂಡಿಗೆ ವ್ಯವಸ್ಥೆ ಕಲ್ಪಿಸಲು 3.50 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡಿದೆ. ಆರಂಭಗೊಂಡ ಕಾಮಗಾರಿಗೆ ಚುನಾವಣೆ ಘೋಷಣೆಯಿಂದ ಸಮಸ್ಯೆಯಿಲ್ಲ. ಕಾಮಗಾರಿ ಪೂರ್ಣಗೊಂಡಾಗ ಗುಜ್ಜರಕೆರೆಯ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು.

ಸಂಚಾರ ಸಮಸ್ಯೆ
ಮಹಾಕಾಳಿಪಡ್ಪು  ರೈಲ್ವೇ ಗೇಟ್‌ ಬಿದ್ದಾಗ, ಅಲ್ಲಿ ದ್ವಿಚಕ್ರ ವಾಹನ ಸವಾರರು ಸಹಿತ ವಾಹನಗಳನ್ನು ಇಬ್ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಗೇಟ್‌ ತೆರೆಯುವ ವೇಳೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ವಿದ್ಯಾ ಅವರ ದೂರಿಗೆ ಪ್ರತಿಕ್ರಿಯಿಸಿದ ಮೇಯರ್‌, ಈ ಬಗ್ಗೆ ಟ್ರಾಫಿಕ್‌ ಪೊಲೀಸರಿಗೆ ತಿಳಿಸಿ, ಅಲ್ಲಿ ಸಿಬಂದಿ ನಿಯೋಜಿಸಲು ಮನವಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next