ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಬಿಎಸ್‌ಪಿ ಬಿಂಬಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಇಂದು ಶನಿವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಪ್ರಕೃತ ಲೋಕಸಭೆಯಲ್ಲಿ ಬಿಎಸ್‌ಪಿ ಯಾವುದೇ ಸದಸ್ಯನನ್ನು ಹೊಂದಿಲ್ಲ.
ಬಿಜೆಪಿ ಆಡಳಿತೆ ಇರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳು ಈ ವರ್ಷಾಂತ್ಯ ನಡೆಯಲಿದ್ದು ಅವುಗಳಲ್ಲಿ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಕೂಡ ಬಿಎಸ್‌ಪಿ ತನ್ನ ಈ ಕಾರ್ಯಕಾರಿಣಿಸಭೆಯಲ್ಲಿ ಚರ್ಚಿಸಲಿದೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕಳೆದೊಂದು ವಾರದಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ರಣತಂತ್ರ ರೂಪಿಸುವ ಮತ್ತು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಎಸ್‌ಪಿ ಪ್ರಕೃತ ಉತ್ತರ ಪ್ರದೇಶದಿಂದ ಹೊರಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮತ್ತು ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪನ್ನು ಕಾಣಿಸುವ ಪ್ರಯತ್ನದಲ್ಲಿ ತೊಡಗಿರುವುದಾಗಿ ವರದಿಗಳು ತಿಳಿಸಿವೆ.