Advertisement
ಒಂದು ಕಾಲವಿತ್ತು. ಗ್ರಾಮೀಣ ಸೊಗಡಿನ ಚಿತ್ರವೆಂದರೆ ಹಚ್ಚ ಹಸಿರು, ಅಲ್ಲಿನ ಜನಜೀವನ, ಹಿರಿಯ ಜೀವಗಳ ಬುದ್ಧಿವಾದ, ಅಲ್ಲಿನ ಸೊಗಸಾದ ಭಾಷೆ, ಬದುಕುವ ಶೈಲಿ, ಜೊತೆಗೊಂದು ಸಂದೇಶ … ಈ ಅಂಶಗಳ ಜೊತೆಗೆ ಒಂದು ನೀಟಾದ ಸಿನಿಮಾ ಕಟ್ಟಿಕೊಡುತ್ತಿದ್ದರು. ನಿಜಕ್ಕೂ ಆಗಿನ ಸಿನಿಮಾಗಳಲ್ಲಿ ಹಳ್ಳಿಗಾಡಿನ ಸೊಗಸು ತುಂಬಿರುತ್ತಿತ್ತು. ಒಂದು ಜೀವನ ಶೈಲಿಯ ಪರಿಚಯ, ಅಲ್ಲಿನ ಸಂಸ್ಕೃತಿಯನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಡುವ ಮೂಲಕ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿದ್ದವು. ಆದರೆ, ಈಗ ಬರುತ್ತಿರುವ ಒಂದಷ್ಟು ಹಳ್ಳಿ ಹಿನ್ನೆಲೆಯ ಚಿತ್ರಗಳನ್ನು ನೋಡಿದರೆ ಹಳ್ಳಿಗರ ಬಗ್ಗೆಯೇ ಅನುಮಾನ ಮೂಡುವಂತೆ ಸಿನಿಮಾಗಳನ್ನು ಚಿತ್ರೀಕರಿಸುತ್ತಿದ್ದಾರೆ.
Related Articles
Advertisement
ಬಹುತೇಕ ಹಳ್ಳಿ ಸಿನಿಮಾಗಳಲ್ಲಿ ರಿಪೀಟ್ ಆಗೋದು ಒಂದೇ ಕಾನ್ಸೆಪ್ಟ್. ಊರ ಗೌಡ, ಒಂದಷ್ಟು ಪುಂಡ ಯುವಕರು, ಯಾರಧ್ದೋ ಒಂದು ಅಕ್ರಮ ಸಂಬಂಧ, ಅದನ್ನು ಬಯಲಿಗೆಳೆಯುವ ಒಂದು ತಂಡ, ಹಳ್ಳಿಗೆ ಸಿಟಿಯಿಂದ ಎಂಟ್ರಿ ಕೊಡುವ ಸ್ಟೈಲಿಶ್ ಸಿಟಿ ಹುಡುಗಿ, ಆಕೆಯ ಹಿಂದೆ ಬೀಳುವ ಪಡ್ಡೆಗಳು … ಇವಿಷ್ಟೇ “ಗ್ರಾಮೀಣ ಸೊಗಡಿನ’ ಸಿನಿಮಾಗಳ ಸರಕಾಗಿಟ್ಟಿವೆ. ಹಳ್ಳಿ ಸಿನಿಮಾಗಳಲ್ಲಿ ಅತಿಯಾದ ಡಬಲ್ ಮೀನಿಂಗ್ ಇದ್ದರೆ, ಅದರಲ್ಲೂ ಅದನ್ನು ಹಿರಿಯ ಜೀವಗಳಿಂದ ಹೇಳಿಸಿದರೆ ಸಿನಿಮಾ ಓಡುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದಾನೋ ಗೊತ್ತಿಲ್ಲ, ಬಹುತೇಕ ಹಳ್ಳಿ ಸೊಗಡಿನ ಚಿತ್ರಗಳು ಡಬಲ್ ಮೀನಿಂಗ್‌ನಿಂದ ತುಂಬಿ ತುಳುಕುತ್ತಿರುತ್ತವೆ. ಹಾಗಂತ ಅಷ್ಟೊಂದು ಡಬಲ್ ಮೀನಿಂಗ್ ಮೂಲಕ ಪಡ್ಡೆಗಳನ್ನು ಮೋಡಿ ಮಾಡಲು ಹೊರಟರೂ ಆ ತರಹದ ಯಾವ ಚಿತ್ರವೂ ಹಿಟ್ ಆದ ಉದಾಹರಣೆಯಂತೂ ಇಲ್ಲ. ಇತ್ತೀಚೆಗೆ ಬಂದ “ತರೆಲ ವಿಲೇಜ್’, “ಹಳ್ಳಿ ಪಂಚಾಯ್ತಿ’, “ನಮ್ಮೂರ ಹೈಕ್ಳು’, “ತಾತನ್ ತಿಥಿ ಮೊಮ್ಮಗನ್ ಪ್ರಸ್ಥ’ … ಇವೆಲ್ಲಾ ಅದೇ ಸಾಲಿಗೆ ಸೇರುವಂತಹ ಚಿತ್ರಗಳು.
ಇತ್ತೀಚೆಗೆ ಸತತವಾಗಿ ಒಂದು ಚೌಕಟ್ಟು ಹಾಕಿಕೊಂಡು ಹಳ್ಳಿ ಸೊಗಡಿನ ಚಿತ್ರವೆಂದರೆ ಇಷ್ಟೇ ಎಂಬ ಮಿತಿಯಲ್ಲಿ ಸಿನಿಮಾಗಳು ಬರುತ್ತಿರುವುದರಿಂದ ಹೊಸದಾಗಿ ಆ ತರಹದ ಸಿನಿಮಾಗಳನ್ನು ನೋಡಿದವರಿಗೆ “ಏನಪ್ಪಾ ಹಳ್ಳಿ ಜನ ಹಿಂಗೇನಾ’ ಎಂಬ ಅನುಮಾನ ಮೂಡಿದರೂ ಅಚ್ಚರಿಯಿಲ್ಲ. ಸಿನಿಮಾವೊಂದು ಕಲ್ಪನೆ ನಿಜ. ಆ ಕಲ್ಪನೆ ರಿಯಾಲಿಟಿಗೆ ಹತ್ತಿರವಾಗಿದ್ದರೆ ಚೆಂದ. ಅದರಲ್ಲೂ ಈಗಂತೂ ಸಿನಿಮಾವನ್ನು ನೈಜವಾಗಿ ಕಟ್ಟಿಕೊಡುವ ಟ್ರೆಂಡ್ ಹೆಚ್ಚುತ್ತಿದೆ.
ಹಳ್ಳಿಯಲ್ಲೂ ಸಾಕಷ್ಟು ಸಮಸ್ಯೆಗಳಿರುತ್ತವೆ, ಜೊತೆಗೆ ಅಲ್ಲಿನ ಜನಜೀವನದಲ್ಲೊಂದು ವಿಶೇಷತೆ ಇರುತ್ತದೆ, ಹಳ್ಳಿಯಲ್ಲಿ ಅರಳುವ ಲವ್‌ಸ್ಟೋರಿಗಳು ಕೂಡಾ ವಿಶಿಷ್ಟವಾಗಿರುತ್ತವೆ. ಅವುಗಳಿಗೆ ಸಿನಿಮಾ ಟಚ್ ಕೊಟ್ಟು ಸುಂದರವಾಗಿ ಕಟ್ಟಿಕೊಡಬಹುದು. ಆದರೆ, ಅದರ ಗೋಜಿಗೆ ಯಾರೂ ಹೋಗುವಂತೆ ಕಾಣುತ್ತಿಲ್ಲ. ಸಿಂಪಲ್ಲಾಗಿ ಏನೋ ಒಂದು ಸುತ್ತಿಕೊಟ್ಟರೆ ಸಾಕು ಎಂಬ ನಿರ್ಧಾರಕ್ಕೆ ಬಂದ ಪರಿಣಾಮವೇ “ಹಳ್ಳಿ ಸೊಗಡಿನ ಸಿನಿಮಾ’ ಎಂದರೆ ಜನ ಬೆನ್ನು ತಿರುಗಿಸುವಂತಾಗಿದೆ.
ಇತ್ತೀಚೆಗೆ ಬಂದ “ಒಂದು ಮೊಟ್ಟೆಯ ಕಥೆ’, “ಹೊಂಬಣ್ಣ’ ಕೂಡಾ ಒಂದು ಪ್ರಾದೇಶಿಕತೆಯನ್ನು ಇಟ್ಟುಕೊಂಡೇ ಬಂದ ಸಿನಿಮಾಗಳು. ಅದರಲ್ಲೂ “ಹೊಂಬಣ್ಣ’ ಮಲೆನಾಡಿನ ಸುಂದರ ಪರಿಸರದ ಜೊತೆಗೆ ಅಲ್ಲಿನ ಸಮಸ್ಯೆಯತ್ತ ಕೂಡಾ ಬೆಳಕು ಚೆಲ್ಲಿತ್ತು. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚೆಚ್ಚು ಆದರೆ, ಹಳ್ಳಿ ಸೊಗಡಿನ ಚಿತ್ರಗಳಿಗೂ ಒಂದು ಮಾನ್ಯತೆ ಬಂದಂತಾಗುತ್ತವೆ. ಹಳ್ಳಿ ಸೊಗಡಿನ ಚಿತ್ರಗಳನ್ನು ಕಡಿಮೆ ಬಜೆಟ್‌ನಲ್ಲಿ ಕಟ್ಟಿಕೊಟ್ಟಾರಾಯ್ತು, ಗ್ಯಾಪಲ್ಲಿ ಸಿನಿಮಾ ಹಿಟ್ ಆದರೆ ಬೇಜಾನ್ ಕಾಸು ಎಂಬ ಉಡಾಫೆಯಿಂದಲೋ ಅಥವಾ ಏನೋ ಒಂದು ಸಿನಿಮಾ ಮಾಡಿದ್ದೀವಿ
ಎಂದು ಹೇಳಿಕೊಳ್ಳಬೇಕೆಂಬ ಜಂಭಕ್ಕೋ, ಹಳ್ಳಿ ಹಿನ್ನೆಲೆಯ ಸಿನಿಮಾಗಳು ಸ್ವಾಧ ಕಳೆದುಕೊಳ್ಳುತ್ತಿರುವುದಂತೂ ಸುಳ್ಳಲ್ಲ. – ರವಿಪ್ರಕಾಶ್ ರೈ