ಹೃದಯವೇನೋ ಭಾರವಾಗಿದೆ ನಿಜ; ತಾಳಿಕೊಳ್ಳದಷ್ಟೇನಲ್ಲ. ಆ ನಿನ್ನ ಕಪಟ ಪ್ರೀತಿಯ ಕಪ್ಪು ಕುರುಹುಗಳು ಮನಸಿನ ಮೂಲೆಯಲ್ಲಿ ಕೆಲಸವಿಲ್ಲದೇ ಕುಳಿತಿವೆ. ಈಗ ಅವುಗಳಿಗೆಲ್ಲ ಅರ್ಥವಿಲ್ಲ.
ಹಾಯ್ ರಜಿನಿ,
ನನ್ನ ಜೊತೆಗಿದ್ದ ದಿನಗಳಿಗಿಂತ ಈಗ ನೀನು ಚೆನ್ನಾಗಿರುವಿ ಎಂದುಕೊಂಡಿದ್ದೇನೆ. ಇದು ಕೊನೆಯ ಮಾತೆಂದು ಹೇಳಬೇಕಾದ್ದೆಲ್ಲವನ್ನು ಹೇಳಿದ ಮೇಲೂ, ಮತ್ತೇನು ಎಂದು ನಿನ್ನ ಮನಸ್ಸು ಪ್ರಶ್ನಿಸಬಹುದಲ್ಲವೇ? ಹೌದು. ಇನ್ನೂ ಏನೋ ಹೇಳಲು ಒಂದಿಷ್ಟು ಉಳಿದುಕೊಂಡಿದೆ. ನನ್ನಂತರಾಳದ ಭಾವನೆಯ ಒತ್ತಡ, ತಾನಾಗಿಯೇ ಕೈ ಹಿಡಿದು ಬರೆಸುತ್ತಿದೆ; ಬಿಸಾಕುವ ಮುನ್ನ ಒಮ್ಮೆ ಕಣ್ಣಾಡಿಸುತ್ತೀಯ ಎಂಬ ಭರವಸೆ ಇನ್ನೂ ಬದುಕಿದೆ. ಆದರೆ, ಮತ್ತೇ ಪ್ರಿತಿಸು ಎಂದು ನಿನ್ನನ್ನು ಇನ್ನೊಮ್ಮೆ ಮನವೊಲಿಸುವ ವ್ಯರ್ಥ ಮತ್ತು ಮೂರ್ಖ ಪ್ರಯತ್ನ ಇದಲ್ಲ.
ಹೃದಯವೇನೋ ಭಾರವಾಗಿದೆ ನಿಜ; ತಾಳಿಕೊಳ್ಳದಷ್ಟೇನಲ್ಲ. ಆ ನಿನ್ನ ಕಪಟ ಪ್ರೀತಿಯ ಕಪ್ಪು ಕುರುಹುಗಳು ಮನಸಿನ ಮೂಲೆಯಲ್ಲಿ ಕೆಲಸವಿಲ್ಲದೇ ಕುಳಿತಿವೆ. ಈಗ ಅವುಗಳಿಗೆಲ್ಲ ಅರ್ಥವಿಲ್ಲ. ಅವುಗಳನ್ನು ಒಂದೊಂದಾಗಿ ಕಿತ್ತು ಕಿಚ್ಚಿಗೆ ನೂಕುತ್ತಿದ್ದೇನೆ. ಹೊಸ ಕನಸುಗಳಿಗೆ ಜಾಗ ಬೇಕಲ್ಲವೇ? ಪ್ರೀತಿಯ ಕೂಗಿಗೆ ದನಿಗೊಟ್ಟು, ಜಾತಿ ಗೋಡೆಯನ್ನೂ ಕೆಡವಿ ನೀ ನನ್ನ ಕೈ ಹಿಡಿಯಲು ನಿರ್ಧರಿಸಿದ ಪರಿಗೆ ಅದೆಷ್ಟೋ ಬಾರಿ ನನ್ನಷ್ಟಕ್ಕೆ ನಾನೇ ಪುಳಕಗೊಂಡಿದ್ದೆ. ಬಿಟ್ಟಿರಲಾಗದೇ ನೀ ಬಂದು ಬಾಚಿ ತಬ್ಬಿಕೊಂಡಾಗ ಜಗತ್ತನ್ನೇ ನನ್ನ ಅಂಗೈಯೊಳಗೆ ಹಿಡಿದುಕೊಂಡ ಅನುಭವ ಆಗಿತ್ತು. ನಿನ್ನ ಹಣೆಗೆ ಮುತ್ತಿಟ್ಟು ಕಂಬನಿ ಒರೆಸಿದ ಘಳಿಗೆಯಂತೂ ಮನಸ್ಸಿನೊಳಗೆ ಅಚ್ಚೊತ್ತಿದಂತೆ ಕುಳಿತಿದೆ. ನೂರಾರು ಭರವಸೆಗಳ ಗರಿ ತಂದು ಕನಸುಗಳ ಕಲ್ಪನೆಯಲ್ಲಿ ಸುಂದರ ನಾಳೆಗಳ ಗೂಡನ್ನು ಕಟ್ಟಿದ್ದೆ. ಆದರೆ, ನಿನ ಚಂಚಲತೆಯ ಕಿಚ್ಚನ್ನು ಬಳಸಿ ನೀ ಅದನ್ನು ಸುಟ್ಟು ಹಾಕುವ ಮೂಲಕ ಆ ಗೂಡಿನಲ್ಲಿ ನನ್ನೊಡನೆ ಹೆಜ್ಜೆಯಿಡುವ ಭಾಗ್ಯವನ್ನು ನೀನಾಗಿಯೇ ಕಳೆದುಕೊಂಡೆ. ಅದಕ್ಕೆ ನನಗೇನೂ ಪಾಪಪ್ರಜ್ಞೆ ಇಲ್ಲ. ಇದು ನಿನ್ನ ಸ್ವಯಂಕೃತ ಅಪರಾಧವಷ್ಟೇ.
ಕಪಟ ಭಾವನೆಗಳಿಗೆ ನಗುವಿನ ಕೃತಕ ಮುಲಾಮು ಲೇಪಿಸಿ ನೀನು ನನ್ನೊಂದಿಗೆ ಕಳೆದ ಘಳಿಗೆಗಳು ನನ್ನ ಪಾಲಿಗೆ ಕೇವಲ ಕನಸೆಂದು ಮರೆತು ಹೊಸ ಭರವಸೆಯತ್ತ ಹೆಜ್ಜೆಯನ್ನಿಟ್ಟು ಸಾಗುತ್ತೇನೆ. ಆದರೆ, ಪ್ರೀತಿಸಿ ಕೈ ಕೊಟ್ಟವಳು ಎಂದು ನಿನ್ನನ್ನು ಜರಿಯುವ ಸಣ್ಣತನಕ್ಕೆ ನಾನು ಯಾವತ್ತೂ ಇಳಿಯಲಾರೆ. ನೀನು, ಅಭದ್ರ ಕಲ್ಪನೆ ಹಾಗೂ ಅಪನಂಬಿಕೆಯಿಂದಾಗಿ ನೀನಾಗಿಯೇ ದೂರ ಸರಿದವಳು. ಅದಕ್ಕೆಂದು ಯಾವುದೇ ಪ್ರತೀಕಾರ ತೀರಿಸಲು ಹೊರಟರೆ ನಾನು ನಿಜವಾದ ಪ್ರೇಮಿಯಾಗಲು ಸಾಧ್ಯವೇ ಹೇಳು? ಅದಕ್ಕೆ ನನ್ನ ಮುಂದಿನ ಬದುಕೇ ನಿನಗೆ ಉತ್ತರ ಹೇಳಲಿದೆ. ಹೊಸಭರವಸೆಗಳ ಬೆನ್ನೇರಿ ಸಾಗುವೆನು. ಅಂದಹಾಗೆ, ನಿನ್ನ ಬದುಕಿನ ಪಯಣದ ದಾರಿಯ ತುಂಬೆಲ್ಲ ಸುಖಸುಮಗಳು ಚೆಲ್ಲಿರಲಿ ಎಂದು ಹಾರೈಸುತ್ತೇನೆ.
– ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ