Advertisement

ವ್ಯಾಜ್ಯ ಮುಕ್ತ ಸಮಾಜದ ಗುರಿ ಸಾಧನೆಯಾಗಲಿ

12:21 AM Oct 21, 2023 | Team Udayavani |

ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಗುರಿಯೊಂದಿಗೆ ಮತ್ತು ನ್ಯಾಯ ಅಪೇಕ್ಷಿತ ಯಾವೊಬ್ಬನೂ ಅದರಿಂದ ವಂಚಿತನಾಗಬಾರದು ಎಂಬ ಧ್ಯೇಯದೊಂದಿಗೆ ಅಶಕ್ತರು ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಹೋಗುವ ಬದಲು ಖುದ್ದು ನ್ಯಾಯಾಲಯಗಳೇ ಅವರ ಬಳಿಗೆ ಬರುವಂತೆ ಮಾಡುವ ಸದುದ್ದೇಶದ ಸರಕಾರದ ಈ ಕ್ರಮ ಸಾಕಾರಗೊಳ್ಳಲಿ.

Advertisement

ರಾಜ್ಯ ಪ್ರಗತಿ ಪಥದಲ್ಲಿ ಸಾಗಬೇಕಾದರೆ ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ಮುಖ್ಯ. ಗ್ರಾಮೀಣ ಕೇಂದ್ರಿತ ನಮ್ಮ ಭೌಗೋಳಿಕ ವ್ಯವಸ್ಥೆಯಲ್ಲಿ ಹಳ್ಳಿಗಳೇ ನಾಡಿನ ಜೀವಾಳಗಳು. ಹಾಗಾಗಿ ಶಾಂತಿ, ನ್ಯಾಯ ಗ್ರಾಮೀಣ ಭಾಗದಲ್ಲಿ ಸಾಕಾರಗೊಂಡರೆ ಅದು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ದಿಕ್ಸೂಚಿ ಆಗಲಿದೆ. ಶಾಂತಿ-ನ್ಯಾಯ ಮತ್ತು ಅಭಿವೃದ್ಧಿ ಇವುಗಳು ಪರಸ್ಪರ ಅವಲಂಬಿತ ಹಾಗೂ ಅಂತರ್‌ಸಂಬಂಧ ಹೊಂದಿವೆ.

ಕೇಂದ್ರದಲ್ಲಿ ಹಿಂದಿನ ಯುಪಿಎ ಸರಕಾರ ಪರಿಚಯಿಸಿದ “ಗ್ರಾಮ ನ್ಯಾಯಾಲಯ ಕಾಯ್ದೆ-2008′ ಪ್ರಕಾರ ಸುಪ್ರೀಂ ಕೋರ್ಟ್‌ ನಿರ್ದೇಶನ ಗಳಂತೆ ಆಯಾ ರಾಜ್ಯ ಸರಕಾರಗಳು ಅಲ್ಲಿನ ಹೈಕೋರ್ಟ್‌ ಜತೆ ಸಮಾಲೋಚನೆ ನಡೆಸಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತ್ವರಿತಗತಿಯಲ್ಲಿ ಗುಣಮಟ್ಟದ ನ್ಯಾಯ ಸಿಗಬೇಕು ಎಂಬ ಭಾರತದ ಕಾನೂನು ಆಯೋಗದ ಸಲಹೆಯಂತೆ ಈ ಕಾಯ್ದೆ ಜಾರಿಗೆ ಬಂದಿದೆ.

“ಸುಸ್ಥಿರ ಅಭಿವೃದ್ಧಿ ಗುರಿಗಳು: 2030″ರಡಿ 16ನೇ ಗುರಿಯಾಗಿರುವ ಶಾಂತಿ, ನ್ಯಾಯ ಮತ್ತು ಸದೃಢ ಸಂಸ್ಥೆಗಳ ಗುರಿಯಡಿ ಗ್ರಾಮ ನ್ಯಾಯಾಲಯಗಳ ಉಲ್ಲೇಖವಿದೆ. ಈ ಗುರಿ ಸಾಧನೆಯ ಸೂಚ್ಯಂಕದಲ್ಲಿ ಕರ್ನಾಟಕ 74 ಅಂಕ ಪಡೆದಿದೆ. ಕಾಯ್ದೆ ಪ್ರಕಾರ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಬಹುದು.

ಅದರಂತೆ ರಾಜ್ಯದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 400 ಗ್ರಾಮ ನ್ಯಾಯಾಲಯ ಸ್ಥಾಪಿಸುವ ಯೋಜನೆ ರಾಜ್ಯ ಸರಕಾರ ಹಾಕಿಕೊಂಡಿದ್ದು, ಮೊದಲ ಹಂತವಾಗಿ 100 ನ್ಯಾಯಾಲಯ ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲೂಕುಗಳಲ್ಲಿ 2 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇವುಗಳು ಮುಂದಿನ ನ್ಯಾಯಾಲಯಗಳ ಸ್ಥಾಪನೆಗೆ “ಆಕರ’ಗಳಾಗಲಿವೆ. ಸಾಧಕ-ಬಾಧಕಗಳನ್ನು ವಜ್ರಖಚಿತ ರೀತಿಯಲ್ಲಿ ಪರಾಮರ್ಶೆಗೊಳಪಡಿಸಿ ಸರಕಾರ ಮುಂದಿನ ಹೆಜ್ಜೆ ಇಡಬೇಕಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಹೈಕೋರ್ಟ್‌ನಲ್ಲಿ 27 ಸಾವಿರ, ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ 18 ಲಕ್ಷ ಪ್ರಕರಣಗಳು ಬಾಕಿ ಇವೆ. ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣದ ಗುರಿ ಸಾಧಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಲೋಕ್‌ ಅದಾಲತ್‌ಗಳನ್ನು ನಡೆಸುತ್ತಿದೆ. ಈಗ ಗ್ರಾಮ ನ್ಯಾಯಾಲಯಗಳು ತ್ವರಿತ, ಗುಣಮಟ್ಟದ ನ್ಯಾಯದಾನ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬಲಿವೆ.

Advertisement

ವ್ಯವಸ್ಥೆಗಳನ್ನು ತರುವುದು ಸುಲಭ. ಆದರೆ ಅದರಲ್ಲಿ ಪರಿಣಾಮಕಾರಿತನ, ನಿರಂತರತೆ, ಪಾರದರ್ಶಕತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದು ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಮತ್ತು ನಿರ್ವಹಣೆಗೂ ಅನ್ವಯವಾಗುತ್ತದೆ. ಇವು ಒಂದು ರೀತಿ ಸಂಚಾರಿ ನ್ಯಾಯಾಲಯವಾಗಿರಲಿವೆ. ಈ ನ್ಯಾಯಾಲಯಗಳು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಸಂಘರ್ಷ, ಕಲಹಗಳಿಗೆ ದಾರಿ ಮಾಡಿಕೊಡದೆ, ವ್ಯಾಜ್ಯ ಮುಕ್ತ ಸಮಾಜದ ಗುರಿಯಡೆಗೆ ಸಾಗಲಿ ಎಂದು ಆಶಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next