ಬೀದರ: ಸ್ವತಃ ತಾವು ದೃಷ್ಟಿಹೀನರಾಗಿದ್ದರೂ ಸಹಸ್ರಾರು ಅಂಧರಿಗೆ ಸಂಗೀತ ಧಾರೆ ಎರೆದು ಜ್ಞಾನದ ಬೆಳಕಾಗಿದ್ದ ಪಂ| ಗಾನಯೋಗಿ ಪುಟ್ಟರಾಜ ಗವಾಯಿಗಳ ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಿಸಿ ಗೌರವ ಸಲ್ಲಿಸಬೇಕು ಎಂದು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಆಗ್ರಹಿಸಿದರು.
ಬಾವಗಿ ಗ್ರಾಮದ ಶ್ರೀ ಭದ್ರೇಶ್ವರ ದೇವಸ್ಥಾನ ಅವರಣದಲ್ಲಿ ಡಾ| ಪಂ| ಶಿವಯೋಗಿ ಪುಟ್ಟರಾಜ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಘ ಹಮ್ಮಿಕೊಂಡಿದ್ದ ಪಂ| ಪುಟ್ಟರಾಜ ಕವಿ ಗವಾಯಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಂಗೀತ ಪ್ರತಿಭೆಗಳು ಬೆಳಕಿಗೆ ಬರಬೇಕಿದ್ದು, ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಸಂಗೀತ ಪಾಠ ಶಾಲೆ ಆರಂಭ ಆಗಬೇಕು. ಈ ಕಾರ್ಯಕ್ಕೆ ಗ್ರಾಮಸ್ಥರು ಪ್ರೋತ್ಸಾಹ ನೀಡಬೇಕು. ಅಲ್ಲಿ ತಮ್ಮ ಮಕ್ಕಳಿಗೆ ಸಂಗೀತ ಕಲಿಯಲು ಕಳುಹಿಸಿದರೆ ಮಕ್ಕಳು ಜ್ಞಾನದ ಜೊತೆಗೆ ಸಂಸ್ಕೃತಿ -ಸಂಸ್ಕಾರವನ್ನು ಸಹ ಕಲಿಯಬಲ್ಲರು.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಕ್ಷಿಣದಲ್ಲಿ ಸಿದ್ದಗಂಗಾ ಶ್ರೀಗಳು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದರೆ, ಉತ್ತರ ಕರ್ನಾಟಕದಲ್ಲಿ ಪಂ| ಪುಟ್ಟರಾಜ ಕವಿ ಗವಾಯಿಗಳು ಸಂಗೀತವನ್ನು ಉಣಬಡಿಸಿ ಲಕ್ಷಾಂತರ ಗವಾಯಿಗಳು ಹೊರಹೊಮ್ಮಲು ಕಾರಣರಾಗಿದ್ದಾರೆ. ಈ ಇಬ್ಬರು ಮಹನಿಯರು ಈ ನಾಡು ಕಂಡ ನಿಜವಾದ ದೈವಿ ಶಕ್ತಿಗಳಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ನಾಡಿನ ಕಣ್ಣಿಲ್ಲದ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ, ಸಂಗೀತ ಹಾಗೂ ಅನ್ನದಾನ ನೀಡುವ ಮೂಲಕ ಗವಾಯಿಗಳು ತ್ರಿಕಾಲ ಜ್ಞಾನಿಗಳು ಎನಿಸಿಕೊಂಡವರು. ಅವರ ಆದರ್ಶ ಇಡೀ ಸಂಗೀತ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು. ವಲಯ ಅರಣ್ಯಾಧಿಕಾರಿ ಎಸ್.ಎ. ವಠಾರ್ ಹಾಗೂ ಆರ್.ಎಸ್. ಕಮ್ಯುನಿಕೇಶನ್ ಮಾಲೀಕ ರವೀಂದ್ರ ಸ್ವಾಮಿ ಮಾತನಾಡಿದರು. ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಅಥಣಿಯ ಬಸವರಾಜ ಉಮರಾಣಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಬ್ರಿಮ್ಸ್ ನಿರ್ದೇಶಕ ಡಾ| ಚಂದ್ರಕಾಂತ ಚಿಲ್ಲರ್ಗಿ, ವೀರಶೈವ ಮಹಾಸಭೆ ಜಿಲ್ಲಾ ಉಪಾಧ್ಯಕ್ಷ ಕಾರ್ತಿಕ ಮಠಪತಿ, ಬ್ರಿಮ್ಸ್ ಲೆಕ್ಕಾಧಿಕಾರಿ ಲಿಂಗರಾಜ ಹಿರೇಮಠ, ಅರ್ಚಕ ವಿನೋದ ಗುರೂಜಿ, ಗುತ್ತಿಗೆದಾರ ಸೂರ್ಯಕಾಂತ ಯದಲಾಪುರೆ, ಭದ್ರಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಮಲ್ಲಯ್ಯ ಗವಾಯಿಗಳು, ಶಿವಕುಮಾರ ಸ್ವಾಮಿ, ಮಲ್ಲಿಕಾರ್ಜುಮ ಮರಕಲೆ ಇನ್ನಿತರರಿದ್ದರು. ಕಮಠಯ್ಯ ಸ್ವಾಮಿ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು.