ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವ ಸಂಬಂಧ ತಜ್ಞರನ್ನು ಒಳಗೊಂಡ ಶೋಧನ ಸಮಿತಿ ರಚನೆಗೆ ರಾಜ್ಯ ಸರಕಾರ ನಿರ್ಧರಿಸಿದೆ.
ಈವರೆಗೆ ಸರಕಾರವೇ ನೇರವಾಗಿ ಪದಾಧಿಕಾರಿಗಳನ್ನು ನೇಮಿಸುತ್ತಿತ್ತು. ಅನೌಪಚಾರಿಕವಾಗಿ ಆಯಾಯ ಕ್ಷೇತ್ರ ಪರಿಣತರ ಸಲಹೆಗಳನ್ನು ಪಡೆಯುತ್ತಿತ್ತಾದರೂ ಔಪಚಾರಿಕ ಚೌಕಟ್ಟು ನೀಡಿರಲಿಲ್ಲ. ಅದನ್ನೀಗ ಹೊಸ ಸರಕಾರ ಕೈಗೊಂಡಿದೆ.
ಹಲವು ವರ್ಷಗಳಿಂದ ಸಾಮಾನ್ಯವಾಗಿ ಪ್ರತೀ ಬಾರಿಯೂ ಆಡಳಿತಾರೂಢ ಪಕ್ಷದ ನಾಯಕರು, ಬೆಂಬಲಿಗರಲ್ಲಿ ತಮಗೆ ಸರಿ ಎನಿಸುವವರಿಗೆ ಅವಕಾಶ ನೀಡಿದ ಆರೋಪವೂ ಇತ್ತು. ಇದರ ಪರಿಣಾಮ ಆಯಾಯ ಅಕಾಡೆಮಿಗಳ ಕಾರ್ಯವೈಖರಿ ಮೇಲೆ ಬೀರುತ್ತಿದ್ದುದೂ ಸ್ಪಷ್ಟ. ಹಾಗಾಗಿ ಲಾಬಿ ಮಾಡಿದವರಿಗೆ ಅವಕಾಶ, ಅರ್ಹರಿಗೆ ಮುಂದಿನ ಬಾರಿ ಎನ್ನುವ ಟೀಕೆಯೂ ವ್ಯಕ್ತವಾಗುತ್ತಿತ್ತು. ಸಾಹಿತ್ಯಿಕ-ಸಾಂಸ್ಕೃತಿಕ ವಲಯದಲ್ಲೂ ಇದಕ್ಕೆ ಟೀಕೆ ಕೇಳಿಬಂದದ್ದಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಕಾಡೆಮಿಗಳ ರಚನೆಯ ನೈಜ ಉದ್ದೇಶವೇ ವಿಫಲವಾಗುತ್ತಿದೆ ಎಂಬ ಅಭಿಪ್ರಾಯವೂ ಹೊಸದಲ್ಲ. ಇವೆಲ್ಲವನ್ನು ಗಮನಿಸಿದಾಗ ರಾಜ್ಯ ಸರಕಾರದ ಈಗಿನ ತೀರ್ಮಾನ ಸ್ವಾಗತಾರ್ಹ ನಡೆ.
ಶೋಧನ ಸಮಿತಿಯ ಶಿಫಾರಸನ್ನು ಆಧರಿಸಿ ಸರಕಾರ ಆಯಾಯ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಪದಾಧಿಕಾರಿಗಳನ್ನು ನೇಮಿ ಸಲಿದೆ. ಹೀಗಾಗಿ ನಿಷ್ಪಕ್ಷವಾಗಿ ಸಮರ್ಥ ಮತ್ತು ನೈಜ ಅರ್ಹರನ್ನು ಆಯ್ಕೆ ಮಾಡುವ ಪ್ರಾಥಮಿಕ ಹೊಣೆಗಾರಿಕೆ ಶೋಧನ ಸಮಿತಿಯದ್ದಾಗಿದೆ. ಇಲ್ಲಿಯೂ ಪ್ರಾಮಾಣಿಕತೆ ಮೆರೆಯಬೇಕಾದದ್ದು ಸಮಿತಿಯ ಪದಾಧಿ ಕಾರಿಗಳೇ. ಅವರು ತಮಗೆ ಬೇಕಾದವರನ್ನೋ, ತಮ್ಮ ಪಡಸಾಲೆಯ ಸದಸ್ಯರನ್ನೋ ಅಥವಾ ಅವರು ಶಿಫಾರಸು ಮಾಡುವ ಹೆಸರುಗಳನ್ನೋ ಪಟ್ಟಿಯಲ್ಲಿ ಸೇರಿಸಿಕೊಟ್ಟರೆ ಶಂಕೆ ಬರುವುದು ಸರಕಾರದ ಮೇಲಲ್ಲ; ಬದಲಾಗಿ ಸಮಿತಿಯ ಮೇಲೆಯೇ. ಆದ್ದರಿಂದ ಇದು ಸಮಿತಿಯವರ ಅಗ್ನಿಪರೀಕ್ಷೆಯೂ ಸಹ. ಇದೇ ಸಂದರ್ಭದಲ್ಲಿ ಯೋಗ್ಯರನ್ನು ಆರಿಸಿ ಕೊಟ್ಟಾಗ ಪುರಸ್ಕರಿಸುವ ಜವಾಬ್ದಾರಿಯೂ ಸರಕಾರದ ಮೇಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಒಳ್ಳೆಯ ಉದ್ದೇಶ ಕಾರ್ಯ ರೂಪಕ್ಕೆ ಬಂದರೆ ಸರಕಾರದ ಮೇಲಿನ ನಂಬಿಕೆಯಷ್ಟೇ ಹೆಚ್ಚುವುದಿಲ್ಲ. ಜತೆಗೆ ಆಯಾಯ ಅಕಾಡೆಮಿಗಳ ಘನತೆಯೂ ಹೆಚ್ಚಲಿದೆ. ಇವೆಲ್ಲ ವನ್ನೂ ಗಮನದಲ್ಲಿಟ್ಟುಕೊಂಡು ಆಯಾಯ ಕ್ಷೇತ್ರದಲ್ಲಿ ಅನುಭವವಿರುವ ಸಕ್ರಿಯರನ್ನೇ ಸಮಿತಿ ಗುರುತಿಸಿದರೆ ಉದ್ದೇಶವೂ ಸಾರ್ಥಕವಾದೀತು.
ಇನ್ನೊಂದು ಪ್ರಮುಖ ಸಂಗತಿ ಎಂದರೆ ವಿವಿಧ ಸರಕಾರಗಳು ಕಾಲ ಕಾಲಕ್ಕೆ ವಿವಿಧ ಅಕಾಡೆಮಿ, ಪ್ರಾಧಿಕಾರಗಳನ್ನು ರಚಿಸಿವೆ. ಅವೆಲ್ಲವೂ ಉದ್ದೇಶಿತ ಗುರಿ ತಲುಪುವಲ್ಲಿ ಅವುಗಳ ಕಾರ್ಯವೈಖರಿಯ ಅಧ್ಯಯನ ತೀರಾ ಅಗತ್ಯವಿದೆ. ಇವುಗಳ ಸಮಗ್ರ ಕಾರ್ಯನಿರ್ವಹಣೆ ಬಗ್ಗೆ ವಿಸ್ತೃತ ಮಾರ್ಗಸೂಚಿಯೂ ಅಗತ್ಯವಿದೆ.
ಈ ಎಲ್ಲ ಕ್ರಮಗಳನ್ನು ಸರಕಾರ ಕೈಗೊಂಡದ್ದೇ ಆದಲ್ಲಿ ಈ ಅಕಾಡೆಮಿ, ಪ್ರಾಧಿಕಾರಗಳ ರಚನೆಯಿಂದ ನಾಡಿಗೆ ಒಂದಿಷ್ಟು ಕೊಡುಗೆ ಸಲ್ಲಿಕೆ ಯಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೂ ಒಂದು ಭದ್ರವಾದ ಅಡಿ ಪಾಯ ಹಾಕಿದಂತಾಗಲಿದೆ.