Advertisement

ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕ್ರಮ ಇನ್ನೂ ಬಿರುಸಾಗಲಿ

11:47 PM Dec 05, 2022 | Team Udayavani |

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮಟ್ಟ ಹಾಕಲಾಗಿದೆ ಎನ್ನುವುದು ನಿಜ. ಆದರೂ ಆಗೊಮ್ಮೆ-ಈಗೊಮ್ಮೆ ಕಾಶ್ಮೀರ ಪಂಡಿತ ಸಮುದಾಯದವರನ್ನು, ಹಿಂದೂಗಳನ್ನು ಗುರಿಯಾಗಿ ಇರಿಸಿಕೊಂಡು ಬೆದರಿಕೆ ಹಾಕುವುದು, ಹಲ್ಲೆ, ದಾಳಿ ನಡೆಸುವ‌ ಖಂಡನೀಯ ಕೃತ್ಯಗಳು ನಡೆಯುತ್ತಿವೆ.

Advertisement

ಪಾಕಿಸ್ಥಾನ ಪ್ರೇರಿತ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯ ಬಾದ ಸಹವರ್ತಿ ಸಂಸ್ಥೆ ದ ರೆಸಿಸ್ಟೆನ್ಸ್‌ ಫ್ರಂಟ್‌ ಕಾಶ್ಮೀರಿ ಪಂಡಿತ ಸಮುದಾಯದ 56 ಮಂದಿ ಉದ್ಯೋಗಿಗಳು ಹಾಗೂ ಹಿಂದೂ ಸಮುದಾಯದವರು ಕೇಂದ್ರಾಡಳಿತ ಪ್ರದೇಶ ಬಿಟ್ಟು ತೆರಳುವಂತೆ ಹೇಳಿದೆ. ಜತೆಗೆ ಅವರ ಹೆಸರು ಸಹಿತ ಪೂರ್ಣ ವಿವರವನ್ನೂ ಬಹಿರಂಗ ಮಾಡಿದೆ. ಹೀಗಾಗಿ ಕೇಂದ್ರ ಸರಕಾರದ ಕಠಿನ ಕ್ರಮದ ಹೊರತಾಗಿಯೂ ಕಣಿವೆ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ಧೋರಣೆ ಹೊಂದಿರುವ ಮನಸ್ಸುಗಳ ನಿರ್ಮೂಲನೆ ಆಗಿಲ್ಲವೆನ್ನುವುದು ಸ್ಪಷ್ಟವಾಯಿತು.

ಹೆಚ್ಚಾ ಕಡಿಮೆ ಒಂದು ವರ್ಷದ ಅವಧಿಯಲ್ಲಿ ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ 24 ಮಂದಿಯನ್ನು ದ ರೆಸಿಸ್ಟೆನ್ಸ್‌ ಫ್ರಂಟ್‌, ಲಷ್ಕರ್‌ ಸೇರಿದಂತೆ ಪಾಕ್‌ ಪ್ರೇರಿತ ಉಗ್ರರು ಹಾರಿಸಿದ ಗುಂಡಿಗೆ ಬಲಿಯಾಗಿದ್ದಾರೆ. ಪ್ರಧಾನಮಂತ್ರಿ ಪುನರ್ವಸತಿ ಯೋಜನೆಯಲ್ಲಿ ಆರು ಸಾವಿರಕ್ಕಿಂತಲೂ ಅಧಿಕ ಮಂದಿ ಪಂಡಿತ ಸಮುದಾಯದವರು ಜೀವನಾಧಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಪಾಕ್‌ ಪ್ರೇರಿತ ಉಗ್ರ ಸಂಘಟನೆಗಳು ನೇರವಾಗಿ ಕಿಡಿಗೇಡಿತನದ ಕೃತ್ಯಗಳನ್ನು ನಡೆಸದೆ ಅದನ್ನೂ ಹೊರ ಗುತ್ತಿಗೆ ನೀಡಿದ್ದಾರೆ. ಹೈಬ್ರಿಡ್‌ ಭಯೋತ್ಪಾದನೆ ಎಂಬ ಹೆಸರಿನಿಂದ ಅದನ್ನು ಈಗಾಗಲೇ ಗುರುತಿಸ ಲಾಗಿದೆ. ಇದು ವೇ ಕೇಂದ್ರಾಡಳಿತ ಪ್ರದೇಶದಲ್ಲಿ ವಿವಿಧ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿರುವ ಅಂಶ. ಅದಕ್ಕೆ ಪೂರಕವಾಗಿ ನಮ್ಮ ದೇಶದ ಒಳಗೇ ಇರುವ ಕೆಲವೊಂದು ಶಕ್ತಿಗಳು ಈಗಲೂ ಉಗ್ರರ ಪರ ಮೃದು ಧೋರಣೆ ಹೊಂದಿರುವುದೂ ಕಳವಳಕಾರಿಯಾಗಿದೆ. ಒಂದು ಹಂತದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಹಿಂಸಾಕೃತ್ಯಗಳನ್ನು ಮಟ್ಟ ಹಾಕಿದ್ದೇ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಎಂದರೆ ತಪ್ಪಾಗಲಾರದು.

ಕಿಡಿಗೇಡಿತನದ ಕೃತ್ಯಗಳನ್ನು ನಡೆಸುತ್ತಿರುವ ಉಗ್ರ ಸಂಘಟನೆಗಳು, ಅವುಗಳಿಗೆ ವಿವಿಧ ಹಂತದಲ್ಲಿ ವಿತ್ತೀಯ ನೆರವು ನೀಡಿ ಪ್ರೋತ್ಸಾಹ ನೀಡುತ್ತಿರುವವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷೆಗೆ ಗುರಿಪಡಿಸುವ ಕೆಲಸಗಳು ಆರಂಭವಾಗಿವೆ. ಇದರ ಹೊರತಾಗಿಯೂ ಕೂಡ ರವಿವಾರ ಬೆದರಿಕೆ ಹಾಕಿದಂಥ ಪ್ರಕರಣಗಳು ನಡೆಯುತ್ತಿವೆ ಎಂದಾದರೆ ಈಗ ಕೇಂದ್ರ ಸರಕಾರ ಅನುಸರಿಸುತ್ತಿರುವ ಉಗ್ರ ನಿಗ್ರಹ ಕ್ರಮಗಳನ್ನು ಮತ್ತಷ್ಟು ಬಿರುಸುಗೊಳಿಸಬೇಕು ಎನ್ನುವುದು ಸ್ಪಷ್ಟ.

Advertisement

ಪಾಕಿಸ್ಥಾನ ಸರಕಾರ ಈಗಾಗಲೇ ಹಲವು ಸಂದರ್ಭಗಳಲ್ಲಿ ಚೀನ, ಟರ್ಕಿಯ ಬೆಂಬಲದೊಂದಿಗೆ ವಿಶ್ವಸಂಸ್ಥೆ ಸಹಿ ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರ ಅಲ್ಲಿ ನಮ್ಮ ಸೇನಾಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದೆ ಎಂಬ ಅಪಪ್ರಚಾರ ನಡೆಸಲು ಹೋಗಿ ಬೋರಲು ಬಿದ್ದು ನಗೆ ಪಾಟಲಿಗೆ ಈಡಾಗಿದ್ದುಂಟು. ಈ ಎಲ್ಲ ಘಟನೆಗಳ ಹಿನ್ನೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರ ನಿಗ್ರಹ ಕ್ರಮಗಳನ್ನು ಮತ್ತಷ್ಟು ಬಿರುಸುಗೊಳಿಸುವುದು ಅನಿವಾರ್ಯವೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next