ಜೀ ಕನ್ನಡ ವಾಹಿನಿ ಇದೀಗ ಹೊಸದೊಂದು ಧಾರಾವಾಹಿ ತೋರಿಸಲು ಸಜ್ಜಾಗಿದೆ. “ಬ್ರಹ್ಮಗಂಟು’ ಎಂಬ ಹೊಸತನದ ಕಥೆ ಹೊಂದಿರುವ ಧಾರಾವಾಹಿ ಮೇ. 8 ರಿಂದ ರಾತ್ರಿ 10 ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ. ಗಂಡು ಸಿಗದ ಗುಂಡಿನಂತಹ ಹುಡುಗಿಗೆ ಕೊನೆಗೆ ಎಂಥಾ ಗಂಡ ಸಿಗುತ್ತಾನೆ ಎಂಬುದೇ ಕಥೆ. ಸದಾ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಹುಡುಗ-ಹುಡುಗಿ ಇಬ್ಬರೂ ಮದುವೆಯಾದಾಗ ಅವರಿಬ್ಬರ ನಡುವೆ ನಡೆಯುವ ಸುಂದರ ಕಥೆ ಇದು.
ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ಗುಂಡಮ್ಮ. ಹೆಸರಿಗೆ ತಕ್ಕಂತೆ ದಢೂತಿ ಹುಡುಗಿ. ಆಕೆ ಯಾವುದೇ ಕೆಲಸವನ್ನಾದರೂ ಒಳ್ಳೇ ಮನಸ್ಸಿನಿಂದ ಮಾಡಿದರೂ ಕೂಡ ಎಲ್ಲರಿಂದಲೂ ನಿಂದನೆ ಗೊಳಗಾಗುತ್ತಾಳೆ. ಅಂತಹ ಗುಂಡಮ್ಮನ ದೊಡ್ಡ ಕನಸು ಎಂದರೆ ಮದುವೆ ಆಗೋದು. ಎಲ್ಲ ಹುಡುಗಿಯರಂತೆ ತನ್ನ ಮನದ ತುಂಬಾ ತನ್ನನ್ನು ಮದುವೆಯಾಗುವ ಹುಡುಗನ ಕುರಿತು ಮುದ್ದಾದ ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ.
ರೂಪಕ್ಕಿಂತ ನನ್ನ ಮನಸ್ಸನ್ನು ಮೆಚ್ಚಿ ಮದುವೆಯಾಗುವ ಹುಡುಗ ಬಂದೇ ಬರುತ್ತಾನೆ ಎಂದು ಕಾದು ಕುಳಿತಿರುತ್ತಾಳೆ. ಅತ್ತ, ಹೆಂಡತಿಯಾಗುವವಳು ಚೆನ್ನಾಗಿರಬೇಕು. ಹೂವಿನ ಬಳ್ಳಿಯಂತೆ ಬಳಕುವ ಸುಂದರಿಯಾಗಬೇಕು ಎಂದು ಕನಸು ಕಾಣುತ್ತಿರುವ ಹುಡುಗನೊಬ್ಬ, ಗುಂಡಮ್ಮನ ಗುಣಕ್ಕೆ ಮರುಳಾಗುತ್ತಾನೆ. ಆಮೇಲೆ ಆಕೆಯನ್ನು ಮದುವೆ ಯಾಗುತ್ತಾನೋ, ಇಲ್ಲವೋ ಎಂಬುದು ಸಸ್ಪೆನ್ಸ್.
ಧಾರಾವಾಹಿ ಜಗತ್ತಿನ ಸಿದ್ಧಸೂತ್ರಗಳನ್ನೆಲಾ ಬದಿಗೊತ್ತಿ ಕನ್ನಡ ಕಿರುತೆಯಲ್ಲಿ ಇದೇ ಮೊದಲ ಸಲ ಈ ರೀತಿಯ ವಿಭಿನ್ನ ಶೈಲಿಯ ಕಥೆ ಇರುವ ಧಾರಾವಾಹಿ ಪ್ರಸಾರ ಮಾಡಲು ಅಣಿಯಾಗಿದೆ ಜೀ ಕನ್ನಡ ವಾಹಿನಿ. ಈ ಧಾರಾವಾಹಿಯ ಮತ್ತೂಂದು ವಿಶೇಷವೆಂದರೆ, ಹಲವು ವರ್ಷಗಳ ಬಳಿಕ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಗಾಯಕಿ ಗೀತಾಭಟ್ ಗುಂಡಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ಮೊದಲ ಸಲ ಅವರು ಕ್ಯಾಮೆರಾ ಮುಂದೆ ನಿಂತಿದ್ದಾರೆ. ಇವರೊಂದಿಗೆ ಭರತ್ ಬೋಪಣ್ಣ ನಟಿಸುತ್ತಿದ್ದಾರೆ. ಉಳಿದಂತೆ ವನಿತಾವಾಸು, ಗಾಯತ್ರಿ ಪ್ರಭಾಕರ್ ಇತರರು ಇದ್ದಾರೆ. ಅಂದಹಾಗೆ ಈ ಧಾರಾವಾಹಿಗೆ ಶ್ರುತಿ ನಾಯ್ಡು ನಿರ್ಮಾಪಕಿ. ರಮೇಶ್ ಇಂದಿರಾ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.