ಮಹಾನಗರ: ವೈದ್ಯವೃತ್ತಿಗೆ ಮಾರಕವಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಯನ್ನು (ಕೆಪಿಎಂಇ ಆ್ಯಕ್ಟ್) ಇಡೀ ವೈದ್ಯ ಸಮುದಾಯ ಸಂಘಟಿತವಾಗಿ ವಿರೋಧಿಸಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಡಾ| ಎಂ.ಶಾಂತಾರಾಮ ಶೆಟ್ಟಿ ಕರೆ ನೀಡಿದರು.
ನಗರದ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತಜ್ಞರು ಹೇಳುವಂತೆ ಈ ಕಾಯ್ದೆ ಕಾನೂನುಬಾಹಿರವಾಗಿದ್ದು, ನ್ಯಾಯಾಲಯದ ಮುಂದೆ ನಿಲ್ಲುವ ಸಾಧ್ಯತೆ ಕ್ಷೀಣ. ಆದರೂ ವೈದ್ಯ ಸಮುದಾಯ ಈ ಕಾಯ್ದೆ ಜಾರಿಯಾಗದಂತೆ ಸಂಘಟಿತ ಹೋರಾಟ ನಡೆಸುವುದು ಅಗತ್ಯ. ಆದರೆ ಇಂಥ ಹೋರಾಟದಲ್ಲಿ ರೋಗಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದ ಅವರು, ವೈದ್ಯರು ಸರಕಾರದ ವಿರುದ್ಧ ಹೋರಾಡುವ ಜತೆಗೆ ವಾಸ್ತವ ಸ್ಥಿತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ವೈದ್ಯವೃತ್ತಿಯ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಗೌರವವನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ನೂತನ ಅಧ್ಯಕ್ಷ ಡಾ | ಕೆ.ಆರ್.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯರ ಹಿತರಕ್ಷಣೆಗೆ ಐಎಂಎ ಸದಾ ಸಿದ್ಧವಾಗಿದ್ದು, ವೈದ್ಯರ ಮೇಲಿನ ಹಲ್ಲೆಯಂಥ ಪ್ರಕರಣಗಳನ್ನು ವಿಶ್ಲೇಷಿಸಲು ವೈದ್ಯಕೀಯ ಕಾನೂನು ಘಟಕವನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದರು. ಮಹಿಳಾ ವೈದ್ಯರ ಉತ್ತೇಜನಕ್ಕಾಗಿ ಮಹಿಳಾ ಕೋಶ ಕೂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಡಾ| ರಾಘವೇಂದ್ರ ಭಟ್, ಕಾರ್ಯದರ್ಶಿ ಕದ್ರಿ ಯೋಗೀಶ್ ಬಂಗೇರ ಹಾಗೂ ಖಜಾಂಚಿ ಡಾ| ಜಿ.ಕೆ.ಭಟ್ ಸಂಕಬಿತ್ತಿಲು ಅವರು, ಡಾ| ಕೆ.ಆರ್.ಕಾಮತ್, ಡಾ| ಉಲ್ಲಾಸ್ ಶೆಟ್ಟಿ , ಡಾ| ಸುಚಿತ್ರಾ ಶೆಣೈ ಅವರಿಗೆ ಅಧಿ ಕಾರ ಹಸ್ತಾಂತರಿಸಿದರು. ವೈದ್ಯ ಡಾ| ಜೆರೋಮ್ ಪಿಂಟೋ ಪ್ರಸ್ತಾವಿಸಿದರು.
ವಿಶ್ವಾಸ ಗಳಿಸಿ
ವೈದ್ಯರಿಗೆ ಪ್ರತಿಭಟನೆಯೊಂದೇ ಅಸ್ತ್ರವಲ್ಲ. ಜತೆಗೆ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲೂ ಹೆಚ್ಚಿನ ವೈದ್ಯರು ಗಮನ ಹರಿಸಬೇಕು
–
ಡಾ| ಎಂ.ವೆಂಕಟ್ರಾಯ ಪ್ರಭು
ಡೀನ್, ಕೆಎಂಸಿ