ದೇವನಹಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಸೆ.10ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವದಲ್ಲಿ ಈ ಭಾಗದ ಫಲವತ್ತಾದ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿ ಕೃಷಿ, ಕೃಷಿಕ, ಕೃಷಿ ಭೂಮಿ, ಕೃಷಿ ಕಾರ್ಮಿಕರನ್ನು ಉಳಿಸುವ ಮೂಲಕ ಈ ಸಮಾವೇಶವೂ ರೈತೋತ್ಸವವಾಗಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ
ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಜನತೆ ಈ ಅಕಾಲಿಕ ಮಳೆಯಿಂದ ನೊಂದು ತಮ್ಮ ಬದುಕನ್ನು ಕಳೆದುಕೊಂಡು ಆಶ್ರಯಕ್ಕಾಗಿ ಅಂಗಲಾಚುತ್ತಿರುವ ಆಕ್ರಂದನ ಒಂದು ಕಡೆಯಾದರೆ, ರೈತಾಪಿ ವರ್ಗ ಕೈಗೆ ಬಂದ ಫಸಲು ನೀರು ಪಾಲಾಗಿ, ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಕೆರೆಕುಂಟೆಗಳು ಭರ್ತಿಯಾಗಿ ಒಡೆದು ಹೋಗುವ ಅಪಾಯದಲ್ಲಿವೆ. ಒತ್ತುವರಿಯಾಗಿರುವ ರಾಜಕಾಲುವೆಗಳ ತುರ್ತು ತೆರವು ಅನಿವಾರ್ಯವಿದೆ ಎಂದು ಹೇಳಿದರು.
ಸಮಾವೇಶ ಸಾರ್ಥಕವಾಗಲಿ: ಇಂತಹ ಸಂಕಷ್ಟದಲ್ಲಿ ರಾಜ್ಯದ ಜನತೆ ಇರುವಾಗ, ಇಂತಹ ಕಾರ್ಯಕ್ರಮಗಳ ಅವಶ್ಯವಿಲ್ಲ. ಈ ರೀತಿಯ ಸಮಾವೇಶಗಳು ಸಾರ್ಥಕಗೊಳ್ಳಬೇಕಾದರೆ ಕಳೆದ 160 ದಿನಗಳಿಂದ ಈ ಭಾಗದ ಚನ್ನರಾಯಪಟ್ಟಣದ ರೈತರು ಭೂ ಸ್ವಾಧೀನವನ್ನ ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ಅರ್ಥ ಮಾಡಿಕೊಂಡು ಈ ಜನೋತ್ಸವದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಜನರ ಮನಸ್ಸಿನಲ್ಲಿ ಉಳಿಯುವುದು ಸೂಕ್ತ. ಆಗ ಈ ರೀತಿಯ ಸಮಾವೇಶಗಳು ಸಾರ್ಥಕವಾಗುತ್ತವೆ ಎಂದರು.
ರೈತರ ಹಿತಾಸಕ್ತಿ ಕಾಪಾಡಿ: ಚನ್ನರಾಯಪಟ್ಟಣ ಭಾಗದ ರೈತರು ನಡೆಸುತ್ತಿರುವ ಈ ಭೂ ಸ್ವಾದೀನ ವಿರೋಧಿ ಹೋರಾಟ ಮುಖ್ಯಮಂತ್ರಿಗಳಿಗೆ ತಿಳಿದಿರುವ ವಿಚಾರ. ಈ ಬಗ್ಗೆ ರೈತರ ಪರವಾಗಿ ಇರುವುದಾಗಿ ತಿಳಿಸಿದ ಸಿಎಂ, ಇಂದಿಗೂ ರೈತರ ಹಿತಾಸಕ್ತಿಯನ್ನು ಕಾಪಾಡಿಲ್ಲ. ತಮ್ಮ ಸಚಿವ ಸಂಪುಟದ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಅವರು ಬಲವಂತದ ಭೂ ಸ್ವಾಧೀನ ಇಲ್ಲವೆಂದು ಹೇಳುತ್ತಾರೆ. ಆದರೆ, ಕೃತಿಯಲ್ಲಿ ರೈತರ ಜೀವಂತ ಸಮಾಧಿಯ ಮೇಲೆ ಕೈಗಾರಿಕೆಗಳನ್ನು ಸ್ಥಾಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸರ್ಕಾರ ರೈತರ ಪರ ಎನ್ನುತ್ತಾರೆ. ರೈತರು ತಮ್ಮ ನ್ಯಾಯಯುತ ಹಕ್ಕನ್ನು ಕೇಳಿ ಪ್ರತಿಭಟಿಸಿದ ಕಾರಣಕ್ಕೆ ರೈತರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಿ, ಬಂಧಿಸಿ ದೂರು ದಾಖಲಿಸುತ್ತಾರೆ ಎಂದು ಆರೋಪಿಸಿದರು.
ಹೋರಾಟವನ್ನು ನಿರ್ಲಕ್ಷಿಸಬೇಡಿ: ಹೋದಲ್ಲಿ ಬಂದಲ್ಲಿ ರೈತರ ಪರವಾಗಿ ಮಾತನಾಡುವ ಸಚಿವ ಎಂಟಿಬಿ ನಾಗರಾಜ್ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಆದ್ದರಿಂದ ಮುಖ್ಯಮಂತ್ರಿ ತಾವು ಈ ಚನ್ನರಾಯಪಟ್ಟಣ ರೈತರ ಚಾರಿತ್ರಿಕ ಹೋರಾಟವನ್ನು ನಿರ್ಲಕ್ಷಿéಸುವುದು ಸೂಕ್ತವಲ್ಲ. ಈ ಜನೋತ್ಸವದಲ್ಲಿ ತಾವುಗಳು ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿ, ರೈತರ ಬೆನ್ನಿಗೆ ನಿಂತು ಕೃಷಿಯು ಒಂದು ಉದ್ಯಮ ಎಂದು ಘೋಷಿಸಿ, ಪೋಷಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲವಾದರೆ ಮುಂದೆ ನಡೆಯುವ ಅಧಿವೇಶನದಲ್ಲಿ ಸಾವಿರಾರು ಸಂಖ್ಯೆಯ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮಾರೇಗೌಡ, ಅಶ್ವಥಪ್ಪ, ಕಾರಹಳ್ಳಿ ಶ್ರೀನಿವಾಸ್ ದೇವರಾಜ್, ಮುಕುಂದ್,ಪ್ರಮೋದ್, ವೆಂಕಟರಮಣಪ್ಪ, ನಂಜಪ್ಪ, ಕೃಷ್ಣಪ್ಪ,ನಾರಾಯಣಮ್ಮ ಸೇರಿದಂತೆ 13 ಗ್ರಾಮಗಳ ರೈತ ಮುಖಂಡರು, ಮಹಿಳೆಯರು, ಜನರು ಹಾಜರಿದ್ದರು.