ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವೂ ಶಾಶ್ವತ ಸದಸ್ಯ ರಾಷ್ಟ್ರವಾಗಬೇಕು ಎಂದು ಫ್ರಾನ್ಸ್ ಮತ್ತೂಮ್ಮೆ ಪ್ರತಿಪಾದಿಸಿದೆ. ಇದರ ಜತೆಗೆ ಭದ್ರತಾ ಮಂಡಳಿಯ ವಿಸ್ತರಣೆಯಾಗಬೇಕು ಎಂದು ಹೇಳಿರುವ ಫ್ರಾನ್ಸ್‌ನ ಉಪ ಶಾಶ್ವತ ರಾಯಭಾರಿ ನಥಾಲಿ ಬ್ರಾಡ್‌ಹಸ್ಟ್, ಇದು ಅಗತ್ಯದ ವಿಚಾರ ಎಂದಿದ್ದಾರೆ.
ಭಾರತದ ಜತೆಗೆ ಜರ್ಮನಿ, ಬ್ರೆಜಿಲ್, ಮತ್ತು ಜಪಾನ್, ಆಫ್ರಿಕಾ ಖಂಡದ ರಾಷ್ಟ್ರಗಳಿಗೂ ಸೂಕ್ತ ಪ್ರಾತಿನಿಧ್ಯ ಭದ್ರತಾ ಮಂಡಳಿಯಲ್ಲಿ ಸಿಗಬೇಕು ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರವರ್ಧಮಾನಗೊಳ್ಳುತ್ತಿರುವ ರಾಷ್ಟ್ರಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ದೇಶದ ನಿಲುವು ಮುಕ್ತವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಗತ್ತಿನ ಈಗಿನ ಅಗತ್ಯಕ್ಕೆ ತಕ್ಕಂತೆ ವಿಸ್ತರಣೆಯಾಗಿ, 25 ಮಂದಿಯ ವರೆಗೆ ಸದಸ್ಯರು ಇರಬೇಕು ಎಂದು ಹೇಳಿದ್ದಾರೆ.
ಇದೇ ಉದ್ದೇಶಕ್ಕಾಗಿ ತಮ್ಮ ದೇಶ 2013ರಲ್ಲಿಯೇ ಭದ್ರತಾ ಮಂಡಳಿಯ ಶಾಶ್ವತ ಸದಸ್ಯರಾಗಿರುವ ಐದು ರಾಷ್ಟ್ರಗಳು ಸ್ವಯಂ ಪ್ರೇರಿತವಾಗಿ ವಿಟೋ ಅಧಿಕಾರ ತ್ಯಜಿಸಬೇಕು ಎಂದು ಸಲಹೆ ಮಾಡಿತ್ತು ಎಂದರು. ಇದಕ್ಕಾಗಿ ಆ ರಾಷ್ಟ್ರಗಳು ರಾಜಕೀಯ ಉದ್ದೇಶ ಹೊಂದಿದ್ದರೆ ಸಾಕಾಗುತ್ತದೆ ಎಂದು ಹೇಳಿದ್ದಾರೆ.
ಫ್ರಾನ್ಸ್, ಅಮೆರಿಕ, ಯು.ಕೆ. ರಷ್ಯಾ ಮತ್ತು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾಗಿವೆ.