Advertisement

ಅಪೂರ್ಣ ಕೆಲಸ ತಿಂಗಳಲ್ಲಿ ಪೂರ್ಣಗೊಳ್ಳಲಿ

02:05 PM Nov 11, 2017 | |

ಬಸವಕಲ್ಯಾಣ: ಅಪೂರ್ಣವಾಗಿರುವ ಕೆಲಸಗಳನ್ನು ತಿಂಗಳಲ್ಲಿ ಪೂರ್ಣಗೊಳಿಸಿ, ಅನುದಾನ ಲಭ್ಯತೆ ಮತ್ತು ಅಗತ್ಯತೆ ಬಗ್ಗೆ ಇಲಾಖೆವಾರು ಸಮಗ್ರ ವರದಿ ಸಲ್ಲಿಸಿ. ಅನುದಾನಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವದು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಯಾಗಬೇಕು ಎನ್ನುವುದೇ ತಮ್ಮ ಮೂಲ ಆಶಯ. ಉದ್ಘಾಟನೆ ಪ್ರಚಾರಕ್ಕಾಗಿ ಯಾವುದೇ ಕೆಲಸ ನಿಲ್ಲಲು ಅವಕಾಶ ನೀಡಿಲ್ಲ ಎಂದರು.

ಕೆಡಿಪಿ ವ್ಯಾಪ್ತಿಯಲ್ಲಿ ಎಷ್ಟು ಇಲಾಖೆಗಳಿವೆ ಎನ್ನುವ ಮಾಹಿತಿ ಇದುವರೆಗೂ ತಮಗೆ ನೀಡಿಲ್ಲ. ಸರ್ಕಾರ ಸಾಕಷ್ಟು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಅನುದಾನ ಮಂಜೂರಾದರು ಕೆಲವು ಕೆಲಸಗಳು ಆಗದೇ ಅನುದಾನ ವಾಪಸ್‌ ಹೋಗಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಬಗ್ಗೆಯೂ ಈ ಸಲ ತಮಗೆ ಆಸಕ್ತಿ ಇಲ್ಲ. ತಾವು ಯಾವುದೇ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿಲ್ಲ. ಯಾರ ಬಗ್ಗೆಯೂ ಅಸಂವಿಧಾನಿಕ ಪದ ಬಳಸಿಲ್ಲ. ಬಂದವರಿಗೆ ಸ್ವಾಗತಿಸಿದ್ದೇನೆ ಹೋಗುವರಿಗೆ ಬೀಳ್ಕೊಡುಗೆ ಮಾಡಿದ್ದೇನೆ. ಆದರೆ ಇಲ್ಲಿ ಕೆಲಸ ಮಾಡೋರು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ತನಿಖೆ ನಡೆಯಲಿ: ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಆ ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಜಿ. ಮುಳೆ ಅವರ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಶಾಸಕ ಖೂಬಾ, ನಗರದ ವ್ಯಾಪ್ತಿ ಸೇರಿದಂತೆ ತಾಲೂಕಿನಲ್ಲಿ ನಿರ್ಮಾಣ ಮಾಡಲಾದ ಅಕ್ರಮ ಲೇಔಟ್‌ಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಹಲವು ಲೇಔಟ್‌ಗಳಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಲೂಟಿ ಮಾಡಲಾಗಿದೆ. ಲೇಔಟ್‌ನಲ್ಲಿ ಉದ್ಯಾನ, ರಸ್ತೆ, ಚರಂಡಿ ಸೇರಿ ಅಗತ್ಯ ಸೌಲಭ್ಯಗಳು ಕಲ್ಪಿಸಬೇಕು. ಉದ್ಯಾನ, ರಸ್ತೆ ಸರ್ಕಾರದ ಹೆಸರಿಗೆ ನೋಂದಣಿ ಮಾಡಬೇಕು. ಆದರೆ ಇದಾವುದೂ ಹಲವೆಡೆ ಪಾಲನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಷಣ ಮಾಡ್ತಾರೆ ಆದರೆ ನಿಯಮಗಳನ್ನು ಪಾಲಿಸಿಲ್ಲ. ತಮ್ಮ ಮನೆ ಪರವಾನಗಿ ಪಡೆದಿಲ್ಲ. ಟ್ಯಾಕ್ಸ್‌ ಕಟ್ಟಿಲ್ಲ. ತಮ್ಮ
ಸಂಸ್ಥೆಗಳಿಗೆ ಸೇರಿದ ಶಾಲೆಗಳಿಗೆ ಸಂಬಂಧಿಸಿದ ತೆರಿಗೆ ಪಾವತಿಸಿಲ್ಲ. ಹಲವೆಡೆ ಸರ್ಕಾರಿ ಸ್ಥಳವೂ ಕಬಳಿಕೆಯಾಗಿದೆ. ಲೇಔಟ್‌ನಲ್ಲಿ ನಿಯಮ ಪಾಲಿಸದೇ ಹಲವೆಡೆ ಲೂಟಿ ಮಾಡಲಾಗಿದೆ. ಯಾರದೇ ಲೇಔಟ್‌ ಇರಲಿ ಎಲ್ಲದರ ಬಗ್ಗೆ ತನಿಖೆಯಾಗಲಿ ಎಂದರು.

ಒಂದು ಕಲ್ಲಿಗೆ ಎರಡು ರೂ. ತೆಗೆದುಕೊಳ್ಳಲಾಗುತ್ತಿದೆ. ವಸತಿ ಯೋಜನೆಯಡಿ ಮನೆಗಳಿಗೆ ಹಣ ಪಡೆಯಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕ್ರಮದಲ್ಲಿ ಆರೋಪಿಸಲಾಗಿದೆ. ಯಾರು ಹಣ ಪಡೆಯುತ್ತಿದ್ದಾರೆ. ಮನೆಗಳಿಗೆ ಯಾರು ಎಷ್ಟು ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.

ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಉಪಾಧ್ಯಕ್ಷ ಸಂಗಮೇಶ ಬಿರಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ
ಓಪ್ರಕಾಶ ಪಾಟೀಲ್‌, ಸಹಾಯಕ ಆಯುಕ್ತ ಶರಣಬಸಪ್ಪ ಕೊಟೆಪ್ಪಗೋಳ, ತಹಸೀಲ್ದಾರ ಜಗನ್ನಾಥ ರೆಡ್ಡಿ, ತಾಪಂ ಇಒ
ವಿಜಯಕುಮಾರ ಮಡ್ಡೆ ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ಇಲಾಖೆ ವರದಿ ಒಪ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next