ಶಿರಸಿ: ಬೆಳೆ ಸಾಲ ಶೂನ್ಯ ಬಡ್ಡಿಯಲ್ಲಿ ಸಿಗಬೇಕಾದರೆ ಭರಣಕ್ಕೆ ಮೇ 31ಕ್ಕೆ ಕಡೇ ದಿನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಹೇಳಿದರು.
ತಾಲೂಕಿನ ಹಲಗದ್ದೆ, ಭಾಶಿಯ ಗ್ರಾ.ಪಂ. ನಿರ್ಮಾಣ ಮಾಡಿದ 40 ಲಕ್ಷ ರೂ. ಮೊತ್ತದ ಕಟ್ಟಡ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಜೂನ್ 30ರೊಳಗೆ ತುಂಬಿದರೆ ರಾಜ್ಯ ಸರಕಾರದ ಶೇ. 6ರ ಬಡ್ಡಿ ಸಹಾಯ ಮಾತ್ರ ಸಿಗಲಿದೆ. ಉಳಿದ ಬಡ್ಡಿಯೂ ಲಭ್ಯವಾಗಿ ರೈತರಿಗೆ ಶೂನ್ಯ ಬಡ್ಡಿ ಸಿಗಬೇಕಾದರೆ ಮೇ 31ರೊಳಗೇ ಭರಣ ಮಾಡಿಕೊಳ್ಳಬೇಕಿದೆ ಎಂದರು.
ಜೂ. 10-12ರೊಳಗೆ ಸಾಲ ಭರಣ ಮಾಡಿದ ಎಲ್ಲ ರೈತರಿಗೂ ಮರಳಿ ಸಾಲ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೂ ಈ ಕುರಿತು ಸೂಚನೆ ನೀಡಲಾಗಿದೆ ಎಂದೂ ಹೇಳಿದರು.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಜನರು ಕರ್ನಾಟಕಕ್ಕೆ ಬರಲು ಸದ್ಯಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಅಲ್ಲಿಂದ ಬಂದವರಿಂದೇ ಕೋವಿಡ್ ಹೆಚ್ಚಾಗಿದೆ. ಆದರೆ, ರಾಜ್ಯದ ಒಳಗಿನ ಪ್ರವಾಸಕ್ಕೆ ಯಾವ ಪಾಸ್‌ಗಳ ಅಗತ್ಯವಿಲ್ಲ ಎಂದರು. ಜಿಲ್ಲೆಯಲ್ಲೂ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಬುಧವಾರದಿಂದ ಇದು ಜಿಲ್ಲೆಯಲ್ಲೂ ಜಾರಿಗೆ ಬರಲಿದೆ ಎಂದರು.
ಜಿ.ಪಂ. ಸದಸ್ಯೆ ರೂಪಾ ನಾಯ್ಕ, ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ಎಸಳೆ, ದ್ಯಾಮಣ್ಣ ದೊಡ್ಮನಿ, ನರಸಿಂಹ ಬಕ್ಕಳ ಇತರರು ಇದ್ದರು.
ಶಾಲೆ ಪುನರಾರಂಭಕ್ಕೆ ಇನ್ನೂ ಎರಡು ತಿಂಗಳು ವಿಳಂಬ ಆಗಬಹುದು. ಒಂದು ವರ್ಷದ ಶಿಕ್ಷಣ ಹೋದರೂ ಒಂದು ಮಗುವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಪರಿಸ್ಥಿತಿ ತಿಳಿಯಾದ ಮೇಲೆ ಶಾಲೆಗಳ ಪುನರಾರಂಭ ನಿರ್ಣಯ ತೆಗೆದುಕೊಳ್ಳುತ್ತೇವೆ. –
ಶಿವರಾಮ ಹೆಬ್ಟಾರ್, ಸಚಿವ