ಮಂಗಳೂರು: ಯು 2 ಸಿನೆಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಾಣದ “ಏಸ’ ತುಳು ಚಿತ್ರ ಮೇ 26ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರಕ್ಕೆ ಶೋಭರಾಜ್ ಪಾವೂರು ಕಥೆ, ಸಂಭಾಷಣೆ ಬರೆದಿದ್ದಾರೆ.
ಚಿತ್ರದ ನಿರ್ದೇಶಕ ಎಂ.ಎನ್. ಜಯಂತ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರದ ಬಿಡುಗಡೆಗೆ ಸರ್ವಸಿದ್ಧತೆಗಳೂ ಪೂರ್ಣಗೊಂಡಿದ್ದು, ಬೆಳಗ್ಗೆ 9.30ಕ್ಕೆ ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಸೆನ್ಸಾರ್ ಮಂಡಳಿಯು “ಯು’ ಸರ್ಟಿಫಿಕೇಟ್’ ನೀಡಿದ್ದಲ್ಲದೇ, ಚಿತ್ರದ ಯಾವ ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದಿರುವುದು ಖುಷಿಯಾಗಿದೆ. ಯಕ್ಷಗಾನ ಕಲಾವಿದನ ಬದುಕಿನ ಕಥಾನಕ ಚಿತ್ರದಲ್ಲಿದೆ ಎಂದರು.
ಈ ಚಿತ್ರದಲ್ಲಿ ತುಳುನಾಡಿನ ಖ್ಯಾತ ಕಲಾವಿದರು ಬಣ್ಣಹಚ್ಚಿದ್ದಾರೆ. ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಮುಂತಾದ ಹಾಸ್ಯ ದಿಗ್ಗಜರೊಂದಿಗೆ ರಾಹುಲ್, ರಾಧಿಕಾ, ಸತೀಶ್ ಬಂದಲೆ, ರಂಜನ್ ಬೋಳೂರು, ಸುನೀಲ್ ನೆಲ್ಲಿಗುಡ್ಡೆ, ಭಾರ್ಗವಿ ನಾರಾಯಣ್, ದತ್ತಾತ್ರೇಯ ಕುರಹಟ್ಟಿ, ಭವ್ಯಶ್ರೀ ರೈ, ನಮಿತಾ ಕೂಳೂರು, ರೂಪಾ ವರ್ಕಾಡಿ, ಶಾಂತಿ ಶೆಣೈ ಮತ್ತಿತರರು ನಟಿಸಿದ್ದಾರೆ ಎಂದರು.
ಈ ಚಿತ್ರ ಬಿಗ್ ಸಿನೆಮಾಸ್, ಪಿವಿಆರ್, ಸಿನೆ ಪೊಲೀಸ್, ಉಡುಪಿಯ ಕಲ್ಪನಾ, ಸುರತ್ಕಲ್‌ನ ನಟರಾಜ್, ಬೆಳ್ತಂಗಡಿಯ ಭಾರತ್, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್, ಮಣಿಪಾಲದ ಐನಾಕ್ಸ್, ಮೂಡಬಿದಿರೆಯ ಅಮರಶ್ರೀ ಹಾಗೂ ಕಾರ್ಕಳದ ರಾಧಿಕಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.
ಚಿತ್ರದ ಎಡಿಟಿಂಗ್ ಕೆ. ಪ್ರದೀಪ್ ಕೆಜಿಎಫ್ ನಿರ್ವಹಿಸಿದ್ದು, ಖ್ಯಾತ ಕೆಮರಾಮನ್ ಮೋಹನ್ ಲೋಕನಾಥನ್ ಅವರ ಕೆಮರಾ ಕಣ್ಣಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಹೊರಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಗುರು ಮತ್ತು ಗುರು ಸಂಗೀತ ನೀಡಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಸಂತೋಷ್ ವೆಂಕಿ, ಸುಪ್ರಿಯಾ ಜೋಶಿ, ಸಂಗೀತಾ ಬಾಲಚಂದ್ರ, ನಿತಿನ್‌ರಾಜ್ ಜತೆಗೆ ಭೋಜರಾಜ ವಾಮಂಜೂರು ಕೂಡ ಹಾಡಿದ್ದಾರೆ ಎಂದರು.
ನಿರ್ಮಾಪಕರಾದ ಉದಯ ಶೆಟ್ಟಿ ಮತ್ತು ಉದಯ ಸಾಲ್ಯಾನ್, ಶೋಭರಾಜ್ ಪಾವೂರು, ನಟರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ನಟ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.