Advertisement
ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಎಂದು ಕರೆಯಲಾಗುತ್ತದೆ. ಇವರು ಮೇ 12, 1820ರಂದು ಇಟಲಿಯ ಫ್ಲಾರೆ®Õ…ನಲ್ಲಿ ವಿಲಿಯಂ ಎಡ್ವರ್ಡ್ ಹಾಗೂ ಫ್ರಾನ್ಸಿಸ್ ನೈಂಟಿಗೇಲ್ ಅವರ ಎರಡನೇ ಮಗಳಾಗಿ ಜನಿಸಿದರು. ಅವರ ಸಹೋದರಿ ಪಾಥೆìನೋಪ್ ನೈಟಿಂಗೇಲ್ ಅವರು ವೃತ್ತಿಯಲ್ಲಿ ಬರಹಗಾರರು ಮತ್ತು ಪತ್ರಿಕೋದ್ಯಮಿಯಾಗಿದ್ದರು.
Related Articles
Advertisement
1853ರಲ್ಲಿ ಅವರು ಕುಟುಂಬದಿಂದ ಹೊರಬಂದು ಸಾಮಾಜಿಕ ಸಂಪರ್ಕಗಳ ಮೂಲಕ ಲಂಡನ್‌ನಲ್ಲಿ ತೊಂದರೆಗೀಡಾದ ಸಂದರ್ಭಗಳಲ್ಲಿ ಅವರು ಎಲ್ಲ ಕ್ಷೇತ್ರದಲ್ಲಿ ದುಡಿದು ಅವರ ಕೌಶಲವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಅನಂತರದ ಒಂದು ವರ್ಷದಲ್ಲಿ ಅವರು ಕಿಂಗ್ಸ್ ಕಾಲೇಜು ಲಂಡನ್‌ನಲ್ಲಿ ಬೇರೆ ವಿದ್ಯಾರ್ಥಿಗಳಿಗೆ ದಾದಿಯರ ತರಬೇತಿಯನ್ನು ನೀಡಲು ಪ್ರಾರಂಭಿಸಿದರು ಹಾಗೂ ಅವರನ್ನು ದಾದಿಯರ ಮೇಲಧಿಕಾರಿಯಾಗಿ ನೇಮಿಸಿದರು.
ಕ್ರಿಮಿಯನ್ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ತಮ್ಮ ಆರೋಗ್ಯ ಲೆಕ್ಕಿಸದೆ, ಹಗಲಿರುಳು ದಣಿವರಿಯದೇ ರಾತ್ರಿಯ ಸಮಯದಲ್ಲಿ ಹಾಸಿಗೆಗಳ ನಡುವೆ ಕೈಯಲ್ಲಿ ದೀಪ ಹಿಡಿದುಕೊಂಡು ರೋಗಿಗಳನ್ನು ಆರೈಕೆ ಮಾಡಿದರು. ಇದರಿಂದಾಗಿ ಇವರಿಗೆ “ದಿ ಲೇಡಿ ವಿತ್ ದಿ ಲ್ಯಾಂಪ್’ ಎಂಬ ಹೆಸರು ಬಂದಿದೆ. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟು ಫ್ಲಾರೆ®Õ… ನೈಟಿಂಗೇಲ್ ಅವರು ಮಾಡಿದ ಸೇವೆಯನ್ನು ಜಗತ್ತಿನೆಲ್ಲೆಡೆ ಗುರುತಿಸಲಾಯಿತು.
ಅವರು ಬರೆದ “ನೋಟ್ಸ್ ಆನ್ ನರ್ಸಿಂಗ್’ ಎಂಬ ಪುಸ್ತಕವನ್ನು ಇಂದು ವಿಶ್ವದಾದ್ಯಂತ ನರ್ಸಿಂಗ್ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಇಂದಿಗೂ ಅವರು ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಅವರ ನೆನಪಿಗಾಗಿ ಲಂಡನ್‌ನ ವಾಟರ್‌ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.
1860ರಲ್ಲಿ “ನರ್ಸಿಂಗ್ ತರಬೇತಿಗಾಗಿ’ ಲಂಡನ್‌ನ ಸೈಂಟ್ ಥಾಮಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ನರ್ಸಿಂಗ್ ಶಾಲೆಯನ್ನು ಆರಂಭಿಸಲಾಯಿತು. ಈಗ ಇದು ಲಂಡನ್‌ನ ಕಿಂಗ್ಸ್ ಕಾಲೇಜಿನ ಅಧೀನದಲ್ಲಿದೆ. ನೈಟಿಂಗೇಲ್ ಅವರ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತೀ ನರ್ಸಿಂಗ್ ವಿದ್ಯಾರ್ಥಿಯೂ ತನ್ನ ವಿದ್ಯಾರ್ಜನೆಯ ಮೊದಲು ಮತ್ತು ಬಳಿಕ “ನೈಟಿಂಗೇಲ್ ಪ್ರಮಾಣ’ ಎಂಬ ಪ್ರತಿಜ್ಞಾ ವಿಧಿಯನ್ನು ಪೂರೈಸುತ್ತಾರೆ ಮತ್ತು ನರ್ಸಿಂಗ್ ಸೇವೆಯಲ್ಲಿ ಅತೀ ಹೆಚ್ಚಿನ ಸೇವೆಗೈದ ದಾದಿಯರಿಗೆ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಪ್ರತೀ ವರ್ಷ ದಾದಿಯರ ದಿನದಂದು ದಾದಿಯರನ್ನು ಗೌರವಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾದಿಯರ ದಿನವನ್ನು ಸ್ಮರಿಸಲಾಗುತ್ತದೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ದಾದಿಯರು ನಿರ್ಣಾಯಕ ಆರೈಕೆದಾರರಾಗಿ ಸಲ್ಲಿಸುವ ಪಾತ್ರ ಅಮೂಲ್ಯ. ಅವರ ಅದ್ಭುತ ಕೊಡುಗೆಯು ಕಳೆದ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಹೇಗಿತ್ತೆಂಬುದನ್ನು ಸ್ಮರಿಸಿಕೊಳ್ಳಬಹುದು.
ಶುಶ್ರೂಷೆಯಲ್ಲಿ ಅವರ ಉತ್ಸಾಹ ಮತ್ತು ಕಠಿನ ಪ್ರಯತ್ನಗಳು ಇತರರನ್ನು ಪ್ರೇರೇಪಿಸಿವೆ. ಹಗಲಿರುಳೆನ್ನದೆ ದಿನದ ಎಲ್ಲ ಸಮಯಗಳಲ್ಲೂ ಅವರು ರೋಗಿಗಳನ್ನು ಆರೈಕೆ ಮಾಡಿದ ರೀತಿ ನೋಡಿದರೆ ಅವರನ್ನು ಎಷ್ಟು ಶ್ಲಾ ಸಿದರೂ ಕಡಿಮೆಯೇ.
ದಾದಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ರೋಗಿಗಳ ಚಿಕಿತ್ಸೆಯ ವಿಚಾರದಲ್ಲಿ ವೈದ್ಯರಿಗೆ ಸಿಗು ವಷ್ಟು ಮನ್ನಣೆ ದಾದಿಯರಿಗೆ ಸಿಗುವು ದಿಲ್ಲ. ಏಕೆಂದರೆ ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಾರೆ ನಿಜ. ಆದರೇ ದಾದಿಯರು ರೋಗಿಗಳ ವಾರಪೂರ್ತಿ ದಿನದ 24 ಗಂಟೆಗಳ ಕಾಲವೂ ಜತೆಗಿದ್ದು ಸೇವೆ ಮಾಡುತ್ತಾರೆ. ಆದ್ದರಿಂದ ಅವರನ್ನು ಗೌರವಿಸಲು ಇದೊಂದು ವಿಶೇಷವಾದ ಸುದಿನವಾಗಿದೆ.
ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) 1965ರಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲು ನಿರ್ಧರಿಸಿ ಪ್ರಾರಂಭಿಸಿತು. ಈ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹಾನ್ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವು ಮೇ 12ಕ್ಕಿದ್ದು, ಅವರ ಗೌರವಾರ್ಥವಾಗಿಯೂ ಈ ದಿನವನ್ನು ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಸಂಖ್ಯಾಶಾಸ್ತ್ರಜ್ಞ, ಸಮಾಜ ಸುಧಾರಕ ಮತ್ತು ಇಂಗ್ಲಿಷ್ ನರ್ಸ್ ಆಗಿ ಖ್ಯಾತಿಗಳಿಸಿದ್ದರು.
ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಡೊರೊಥಿ ಸದರ್ಲ್ಯಾಂಡ್ ಈ ದಿನವನ್ನು ಬಹು ಹಿಂದೆಯೇ ಪ್ರಸ್ತಾವಿಸಿದ್ದರು. ಆದರೆ ಅದನ್ನು ಸ್ವೀಕರಿಸಿರಲಿಲ್ಲ. ಆದರೆ 20 ವರ್ಷಗಳ ಅನಂತರ, ಮೇ 12ನ್ನು ಅಂತಿಮವಾಗಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾಗಿ ಆಯ್ಕೆ ಮಾಡಿ ಈ ದಿನದ ಆಚರಣೆಯನ್ನು ಚಾಲನೆಗೆ ತರಲಾಯಿತು.
ಅಂದಿನಿಂದ ಇಂಟರ್ ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್), ಅಂತಾರಾಷ್ಟ್ರೀಯ ದಾದಿಯರ ದಿನದಂದು ಹಲವಾರು ವಿಷಯಗಳನ್ನು, ವಸ್ತುಗಳನ್ನು ಮತ್ತು ಈ ಕ್ಷೇತ್ರದ ಸೇವೆಗಳನ್ನು ಆಧರಿಸಿದ ಹಲವು ಪುರಾವೆಗಳನ್ನು ವಿಶ್ವವ್ಯಾಪಿಯಾಗಿ ಹಂಚಿಕೊಳ್ಳುತ್ತ ಬಂದಿದೆ. ಈ ವರ್ಷದ ಧ್ಯೇಯವಾಕ್ಯ “ನಮ್ಮ ದಾದಿಯರು ನಮ್ಮ ಭವಿಷ್ಯ, ಆರೈಕೆಯ ಆರ್ಥಿಕ ಶಕ್ತಿ’. ಪ್ರಪಂಚದಾದ್ಯಂತ ಅವರ ಗುರಿ ತಲುಪಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೈವ ಸ್ವರೂಪಿಯಾಗಿ ಕಾಣಿಸುವ ದಾದಿಯರು ರೋಗಿಗಳ ಕಾಯಿಲೆ ವಾಸಿ ಮಾಡುವಲ್ಲಿ, ಅವರಲ್ಲಿ ಮಾನಸಿಕ ಧೈರ್ಯ ತುಂಬುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅವರ ಮಾನವೀಯ ಸೇವೆಗೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೋಗಿ ಗುಣಮುಖವಾಗುವಲ್ಲಿ ವೈದ್ಯ ನೀಡಿದ ಔಷಧಕ್ಕಿಂತ ದಾದಿ ನೀಡಿದ ಸೇವೆ ಪ್ರಮುಖವಾಗಿರುತ್ತದೆ.
ದಾದಿಯರು ನೀಡುವ ಸೇವೆ ನೋಡುವಾಗ ಎಂಥವರಿಗೂ ಅವರ ಮೇಲೆ, ಅವರ ವೃತ್ತಿಯ ಮೇಲೆ ಗೌರವ ಮೂಡುತ್ತದೆ. ರೋಗಿ ಹೇಗೆಯೇ ಇರಲಿ, ಯಾವುದೇ ಅಸಹ್ಯ ತೋರದೆ ಅವರ ಕೆಲಸಗಳನ್ನು ಮಾಡುತ್ತಾರೆ. ಅಮ್ಮನಂತೆ ಆರೈಕೆ ಮಾಡುತ್ತಾರೆ, ಮನಸ್ಸಿಗೆ ಧೈರ್ಯ ತುಂಬುತ್ತಾರೆ. ಆ ಸಹೋದರಿಯರ ಸೇವೆಯಿಂದಲೇ ರೋಗಿಯ ದೇಹ ಚೇತರಿಸಿಕೊಳ್ಳಲಾರಂಭಿಸುತ್ತದೆ. ಪ್ರತಿಯೊಬ್ಬ ಮನುಷ್ಯ ಅವರ ಸೇವೆಯನ್ನು ಪಡೆದುಕೊಂಡಿರುತ್ತಾನೆ. ಅವರ ಸೇವೆಗೆ ಗೌರವವನ್ನು ನೀಡುವ ಈ ದಿನದಂದು ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ, ಅವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ನಮನ.
ಫ್ಲಾರೆನ್ಸ್ ನೈಟಿಂಗೇಲ್ ಅವರು 1910ರ ಆಗಸ್ಟ್ 12ರಂದು ಇಹಲೋಕ ತ್ಯಜಿಸಿದರು. ಸುಮಾರು 90 ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಅವರು ತಮ್ಮ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಅವರು ವೃತ್ತಿ ಯಲ್ಲಿ ಅಂಕಿ ಅಂಶ ತಜ್ಞೆಯಾಗಿದ್ದರು. ಆದರೆ ನೊಂದವರ ದೀನದಲಿತರ ಸಾಲಿಗೆ ಸಾಕ್ಷಾತ್ ದೇವತೆಯಾಗಿದ್ದರು.
-ಶೋಭಾ
ಸಹ ಉಪನ್ಯಾಸಕಿ, ಮಣಿಪಾಲ
ಸ್ಕೂಲ್ ಆಫ್ ನರ್ಸಿಂಗ್,
ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮಣಿಪಾಲ ಸ್ಕೂಲ್ ಆಫ್ ನರ್ಸಿಂಗ್ , ಮಂಗಳೂರು)