Advertisement
“ಅಡಿಲೇಡ್ ಓವಲ್’ನಲ್ಲಿ ರವಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 4 ವಿಕೆಟಿಗೆ 241 ರನ್ ಪೇರಿಸಿತು. ವೆಸ್ಟ್ ಇಂಡೀಸ್ 9 ವಿಕೆಟಿಗೆ 207 ರನ್ ಮಾಡಿ ಶರಣಾಯಿತು. ಮೊದಲ ಪಂದ್ಯವನ್ನು ಕಾಂಗರೂ ಪಡೆ 11 ರನ್ನುಗಳಿಂದ ಜಯಿಸಿತ್ತು. ಅಂತಿಮ ಮುಖಾಮುಖೀ ಮಂಗಳವಾರ ಪರ್ತ್‌ನಲ್ಲಿ ನಡೆಯಲಿದೆ.
4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ವಿಂಡೀಸ್ ಎಸೆತಗಳನ್ನು ಮನಸೋಇಚ್ಛೆ ದಂಡಿಸುತ್ತ 55 ಎಸೆತಗಳಿಂದ 120 ರನ್ ಬಾರಿಸಿದರು. ಇದರಲ್ಲಿ 12 ಬೌಂಡರಿ ಹಾಗೂ 8 ಪ್ರಚಂಡ ಸಿಕ್ಸರ್ ಒಳಗೊಂಡಿತ್ತು. ಒಂದು ಸಿಕ್ಸರ್ ಅಂತೂ 109 ಮೀಟರ್ ಎತ್ತರಕ್ಕೆ ನೆಗೆಯಿತು. ಇದು 102 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಬಾರಿಸಿದ 5ನೇ ಸೆಂಚುರಿ. ಇದರೊಂದಿಗೆ ಟಿ20 ಅಂತಾ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ರೋಹಿತ್ ಶರ್ಮ ದಾಖಲೆ ಯನ್ನು ಸರಿದೂಗಿಸಿದರು. ಕಳೆದ 9 ಅಂತಾ ರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 3 ಶತಕ ಹಾಗೂ ಒಂದು ದ್ವಿಶತಕ ಬಾರಿಸಿದ್ದು ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿ. ವೆಸ್ಟ್ ಇಂಡೀಸ್ 10ರ ಸರಾಸರಿಯಲ್ಲಿ ರನ್ ಬಾರಿಸಿತಾದರೂ ಇನ್ನೊಂದು ಕಡೆ ವಿಕೆಟ್‌ಗಳನ್ನೂ ಕಳೆದುಕೊಳ್ಳುತ್ತ ಹೋಯಿತು. 6.3 ಓವರ್‌ಗಳಲ್ಲಿ 65 ರನ್ನಿಗೆ 5 ವಿಕೆಟ್ ಉರುಳಿತು. ಆದರೆ ನಾಯಕ ರೋವ¾ನ್ ಪೊವೆಲ್, ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್ ನೆರವಿನಿಂದ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-4 ವಿಕೆಟಿಗೆ 241 (ಮ್ಯಾಕ್ಸ್‌ವೆಲ್ ಔಟಾಗದೆ 120, ಟಿಮ್ ಡೇವಿಡ್ ಔಟಾಗದೆ 31, ವಾರ್ನರ್ 22, ಹೋಲ್ಡರ್ 42ಕ್ಕೆ 2). ವೆಸ್ಟ್ ಇಂಡೀಸ್-9 ವಿಕೆಟಿಗೆ 207 (ಪೊವೆಲ್ 63, ರಸೆಲ್ 37, ಹೋಲ್ಡರ್ ಔಟಾಗದೆ 28, ಚಾರ್ಲ್ಸ್ 24, ಸ್ಟೋಯಿನಿಸ್ 36ಕ್ಕೆ 3, ಹೇಝಲ್‌ವುಡ್ 31ಕ್ಕೆ 2, ಸ್ಪೆನ್ಸರ್ ಜಾನ್ಸನ್ 39ಕ್ಕೆ 2).
ಪಂದ್ಯಶ್ರೇಷ್ಠ: ಗ್ಲೆನ್ ಮ್ಯಾಕ್ಸ್‌ವೆಲ್.