Advertisement

ಇಂಗ್ಲೆಂಡಿಗೆ ಮ್ಯಾಕ್ಸ್‌ವೆಲ್‌ ಆಘಾತ

06:25 AM Feb 08, 2018 | Team Udayavani |

ಹೋಬರ್ಟ್‌: ಮರಳಿ ಫಾರ್ಮ್ಗೆ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಜೇಯ ಶತಕ ಬಾರಿಸುವುದರೊಂದಿಗೆ ಟಿ20 ತ್ರಿಕೋನ ಸರಣಿಯ ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯ 5 ವಿಕೆಟ್‌ಗಳಿಂದ ಇಂಗ್ಲೆಂಡನ್ನು ಸೋಲಿಸಿದೆ.

Advertisement

ಹೋಬರ್ಟ್‌ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 9 ವಿಕೆಟಿಗೆ 155 ರನ್‌ ಗಳಿಸಿದರೆ, ಆಸ್ಟ್ರೇಲಿಯ 18.3 ಓವರ್‌ಗಳಲ್ಲಿ 5 ವಿಕೆಟಿಗೆ 161 ರನ್‌ ಬಾರಿಸಿ ಗೆದ್ದು ಬಂದಿತು. ಇದರಲ್ಲಿ ಮ್ಯಾಕ್ಸ್‌ವೆಲ್‌ ಪಾಲು ಅಜೇಯ 103 ರನ್‌. ಮ್ಯಾಕ್ಸ್‌ವೆಲ್‌ ಶತಕ ಕಾಂಗರೂ ಗೆಲುವು ಒಟ್ಟೊಟ್ಟಿಗೆ ದಾಖಲಾಯಿತು. ಇದು ಮ್ಯಾಕ್ಸ್‌ವೆಲ್‌ ಅವರ 2ನೇ ಟಿ20 ಸೆಂಚುರಿ. 58 ಎಸೆತಗಳ ಸ್ಫೋಟಕ ಬ್ಯಾಟಿಂಗ್‌ ವೇಳೆ 4 ಸಿಕ್ಸರ್‌, 10 ಬೌಂಡರಿ ಸಿಡಿಯಲ್ಪಟ್ಟಿತು.

ಆಸೀಸ್‌ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 4 ರನ್‌ ಆಗುವಷ್ಟರಲ್ಲಿ ನಾಯಕ ವಾರ್ನರ್‌ (4) ಮತ್ತು ಲಿನ್‌ (0) ಪೆವಿಲಿಯನ್‌ ಸೇರಿಕೊಂಡಿದ್ದರು. ಬಳಿಕ ಮ್ಯಾಕ್ಸ್‌ವೆಲ್‌ ಏಕಾಂಗಿಯಾಗಿ ತಂಡವನ್ನು ಮುನ್ನಡೆಸತೊಡಗಿದರು. ಅವರಿಗೆ ಎಡಗೈ ಆರಂಭಕಾರ ಡಿ’ಆರ್ಸಿ ಶಾರ್ಟ್‌ (30) ಉತ್ತಮ ಬೆಂಬಲವಿತ್ತರು. ಈ ಜೋಡಿಯಿಂದ 3ನೇ ವಿಕೆಟಿಗೆ 78 ರನ್‌ ಹರಿದು ಬಂತು.

ಮಾಲನ್‌ ಅರ್ಧ ಶತಕ
ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಮಿಂಚಿದವರು ವನ್‌ಡೌನ್‌ ಬ್ಯಾಟ್ಸ್‌ಮನ್‌ ಡೇವಿಡ್‌ ಮಾಲನ್‌. ದ್ವಿತೀಯ ಓವರಿನಲ್ಲೇ ಬ್ಯಾಟ್‌ ಹಿಡಿದು ಬಂದ ಮಾಲನ್‌ 16ನೇ ಓವರ್‌ ತನಕ ನಿಂತು 50 ರನ್‌ ಬಾರಿಸಿದರು. ಕೇವಲ 2ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಮಾಲನ್‌ ಹೊಡೆದ ಸತತ 2ನೇ ಅರ್ಧ ಶತಕ ಇದಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಕಾರ್ಡಿಫ್ ಟಿ20 ಪಂದ್ಯದಲ್ಲಿ ಮಾಲನ್‌ 78 ರನ್‌ ಬಾರಿಸಿದ್ದರು.

36 ಎಸೆತ ಎದುರಿಸಿದ ಮಾಲನ್‌ 5 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ ಅರ್ಧ ಶತಕ ಪೂರೈಸಿದರು. ಮಾಲನ್‌ ಹೊರತುಪಡಿಸಿದರೆ ತಲಾ 22 ರನ್‌ ಮಾಡಿದ ಅಲೆಕ್ಸ್‌ ಹೇಲ್ಸ್‌ ಮತ್ತು ಎವೋನ್‌ ಮಾರ್ಗನ್‌ ಅವರದೇ ಹೆಚ್ಚಿನ ಗಳಿಕೆ. ಕ್ರಿಸ್‌ ಜೋರ್ಡನ್‌ 16 ರನ್‌ ಮಾಡಿದರು.

Advertisement

ಆಸ್ಟ್ರೇಲಿಯ ಪರ ಒಟ್ಟು 7 ಮಂದಿ ಬೌಲಿಂಗ್‌ ದಾಳಿಗಿಳಿದರು. ಇವರಲ್ಲಿ ಸ್ಟಾನ್‌ಲೇಕ್‌, ರಿಚರ್ಡÕನ್‌, ಟೈ ಮತ್ತು ಸ್ಟೊಯಿನಿಸ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಡಿ-ಎಲ್‌ ನಿಯಮದಂತೆ ನ್ಯೂಜಿಲ್ಯಾಂಡನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಮುಂದಿನ ಪಂದ್ಯ ಫೆ. 10ರಂದು ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವೆ ಮೆಲ್ಬರ್ನ್ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-9 ವಿಕೆಟಿಗೆ 155 (ಮಾಲನ್‌ 50, ಹೇಲ್ಸ್‌ 22, ಮಾರ್ಗನ್‌ 22, ಸ್ಟೊಯಿನಿಸ್‌ 16ಕ್ಕೆ 1, ರಿಚರ್ಡ್‌ಸನ್‌ 27ಕ್ಕೆ 1). ಆಸ್ಟ್ರೇಲಿಯ-18.3 ಓವರ್‌ಗಳಲ್ಲಿ 5 ವಿಕೆಟಿಗೆ 161 (ಮ್ಯಾಕ್ಸ್‌ವೆಲ್‌ ಅಜೇಯ 103, ಶಾರ್ಟ್‌ 30, ವಿಲ್ಲಿ 28ಕ್ಕೆ 3). ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌.

Advertisement

Udayavani is now on Telegram. Click here to join our channel and stay updated with the latest news.

Next