ಮಂಗಳೂರು: ಸಹಕಾರ ಕ್ಷೇತ್ರದ ಮೂಲ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತ್ತೀಚೆಗೆ ಪುತ್ತೂರು ತಾಲೂಕಿನ ಅಲಂಕಾರಿನಲ್ಲಿ ಬ್ಯಾಂಕ್ ತನ್ನ 102ನೇ ಶಾಖೆಯನ್ನು ತೆರೆದಿದೆ.
ಅಲಂಕಾರು ನೂತನ ಶಾಖೆ ಉದ್ಘಾಟನ ಸಮಾರಂಭದಲ್ಲಿ ಊರಿನ ಸಮಸ್ತ ಸಹಕಾರಿ ಹಾಗೂ ಗ್ರಾಹಕರನ್ನು ಅಭಿನಂದಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಈ ಶಾಖೆ ರೂ. 26.18 ಕೋ ಠೇವಣಿ ಹೊಂದಿದೆ.
ಅಲಂಕಾರು ಗ್ರಾಮೀಣ ಪ್ರದೇಶವಾದರೂ ಇಲ್ಲಿನ ಜನರು ಹೃದಯ ಶ್ರೀಮಂತರು. ಹಾಗಾಗಿ ನೂತನ ಶಾಖೆ ಉದ್ಘಾಟನೆ ಸಂದರ್ಭ ಇಲ್ಲಿ ಗರಿಷ್ಠ ಠೇವಣಿ ಸಂಗ್ರಹವಾಗಿದೆ. ಇದು ಶಾಖೆ ಆರಂಭದಲ್ಲಿ ಸರ್ವಾಕಾಲಿಕ ದಾಖಲೆ ಆಗಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯವಾಗಿ ರೈತರ ಹಿತಾಸಕ್ತಿ ಕಾಪಾಡಿಕೊಂಡು ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಪರಿಸರದ ಗ್ರಾಹಕರ ಆರ್ಥಿಕಾಭಿವೃದ್ಧಿಗೆ ಬ್ಯಾಂಕ್ ಸದಾ ಸ್ಪಂದಿಸುತ್ತಿದೆ. ಇಲ್ಲಿನ ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ಬ್ಯಾಂಕ್ ಚಿರರುಣಿ ಎಂದರು.
ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ ಅಧ್ಯಕ್ಷತೆಯಲ್ಲಿ ಸಮ್ಮಾನಿಸಲಾಯಿತು. ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಕೆ.ಎಸ್. ದೇವರಾಜ್, ಶಶೀ ಕುಮಾರ್ ರೈ, ಎಸ್.ಬಿ. ಜಯರಾಮ್ ರೈ, ಸದಾಶಿವ ಉಳ್ಳಾಲ, ಬ್ಯಾಂಕ್‌ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಸತೀಶ್ ಎಸ್. ಮೊದಲಾ ದವರು ಉಪಸ್ಥಿತರಿದ್ದರು.