Advertisement
ಮ್ಯಾಕ್ಸಿಲೊಫೇಶಿಯಲ್ ಗಾಯ ಮತ್ತು ಮೂಳೆ ಮುರಿತಗಳ ರೋಗಶಾಸ್ತ್ರವನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ರಸ್ತೆ ಸಾರಿಗೆ ಅಪಘಾತಗಳೇ ಪ್ರಧಾನ ಕಾರಣವಾಗಿರುವುದು ಕಂಡುಬರುತ್ತದೆ. ಜಾಗತಿಕವಾಗಿ ರಸ್ತೆ ಸಾರಿಗೆ ಅಪಘಾತಗಳು ಮರಣಕ್ಕೆ ಪ್ರಧಾನ ಕಾರಣವೂ ಆಗಿದೆ. ರಸ್ತೆ ಸಾರಿಗೆ ಅಪಘಾತಗಳ ಬಳಿಕ ಹಿಂಸೆ, ಬೀಳುವಿಕೆ ಮತ್ತು ಕ್ರೀಡಾ ಗಾಯಗಳು ಮ್ಯಾಕ್ಸಿಲೊಫೇಶಿಯಲ್ ಗಾಯ ಮತ್ತು ಮೂಳೆಮುರಿತಗಳಿಗೆ ಇನ್ನಿತರ ಪ್ರಧಾನ ಕಾರಣಗಳಾಗಿರುತ್ತವೆ.
Related Articles
ಸುರಕ್ಷಿತ ವಾಹನ ಚಲಾವಣೆ
ವೇಗ: ವಾಹನ ಚಲಾಯಿಸುವ ವೇಗ ಹೆಚ್ಚಿದಷ್ಟು ಅಪಘಾತ ಪ್ರಮಾಣವೂ ಹೆಚ್ಚು, ಅವಘಡದ ತೀವ್ರತೆಯೂ ಹೆಚ್ಚು. ಶಿಫಾರಸು ಮಾಡಲಾದ ವೇಗ ಮಿತಿಯಲ್ಲಿಯೇ ವಾಹನವನ್ನು ಚಲಾಯಿಸಬೇಕು.
ಮದ್ಯಪಾನ ಮತ್ತು ವಾಹನ ಚಲಾವಣೆ: ರಸ್ತೆ ಅಪಘಾತಗಳಿಗೆ ಇನ್ನೊಂದು ಪ್ರಧಾನ ಕಾರಣ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು. ಮನಸ್ಸನ್ನು ಪ್ರಚೋದಿಸುವ ದ್ರವ್ಯಗಳು ಮತ್ತು ಮದ್ಯವನ್ನು ಸೇವಿಸಿ ವಾಹನ ಚಲಾಯಿಸುವುದು ಸುರಕ್ಷಿತ ವಾಹನ ಚಾಲನೆಯ ದೃಷ್ಟಿಯಿಂದ ನಿಷೇಧಿತವಾಗಿದೆ.
ದ್ವಿಚಕ್ರ ವಾಹನ ಹೆಲ್ಮೆಟ್, ಮಕ್ಕಳ ರಕ್ಷಣಾತ್ಮಕ ಸಲಕರಣೆ ಮತ್ತು ಸೀಟ್ ಬೆಲ್ಟ್ ಬಳಕೆ: ದ್ವಿಚಕ್ರ ವಾಹನ ಚಲಾಯಿಸುವ ಸಂದರ್ಭದಲ್ಲಿ ಹೆಲ್ಮೆಟ್ ಬಳಕೆ, ಮಕ್ಕಳನ್ನು ರಕ್ಷಿಸುವ ಸಲಕರಣೆಗಳ ಉಪಯೋಗ ಮತ್ತು ಸೀಟ್ ಬೆಲ್ಟ್‌ಗಳ ಉಪಯೋಗ ಮಾಡಲೇಬೇಕು.
ಮನಸ್ಸನ್ನು ವಿಚಲಿತಗೊಳಿಸುವ ಸಂಗತಿಗಳು ಮತ್ತು ವಾಹನ ಚಾಲನೆ: ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ, ಸಂದೇಶ ರವಾನೆ ಇತ್ಯಾದಿಗಳನ್ನು ಮಾಡಬಾರದು.
ರಸ್ತೆ ನಿಯಮಗಳ ಪಾಲನೆ: ಫುಟ್‌ಪಾತ್‌ಗಳು, ಸೈಕಲ್ ಸವಾರಿ ದಾರಿಗಳು, ಪಾದಚಾರಿ ರಸ್ತೆ ದಾಟುವ ಸ್ಥಳಗಳು, ರಸ್ತೆ ಸಾರಿಗೆ ಸಿಗ್ನಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಈ ಕ್ರಮಗಳನ್ನು ಅನುಸರಿಸುವುದರಿಂದ ರಸ್ತೆ ಅಪಘಾತ ಅಪಾಯ ಮತ್ತು ಗಾಯಗಳನ್ನು ಕಡಿಮೆ ಮಾಡಲು ಸಾಧ್ಯ.
Advertisement
ಅಪಘಾತ ಸಂಭವಿಸಿದರೆ ಯಾರನ್ನು ಸಂಪರ್ಕಿಸಬೇಕು?
ಎಷ್ಟೇ ಸುರಕ್ಷಾ ಕ್ರಮಗಳನ್ನು ಅನುಸರಿಸಿದರೂ ಕೆಲವೊಮ್ಮೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿಯೇ ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ನಾವು ತಿಳಿದುಕೊಂಡಿರುವುದು ಅಗತ್ಯ. ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ರವಾನಿಸುವುದಕ್ಕಾಗಿ ಹತ್ತಿರದ ಆಸ್ಪತ್ರೆಗಳ ತುರ್ತು ಸಂಪರ್ಕ ಸಂಖ್ಯೆ ನಮಗೆ ತಿಳಿದಿರುವುದು ಅಗತ್ಯ. ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದು ತಾಸು ಅವಧಿಯನ್ನು “ಚಿನ್ನದಂತಹ ಸಮಯ’ ಎಂದು ಕರೆಯಲಾಗುತ್ತದೆ.
ಈ ಅವಧಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾದರೆ ಪ್ರಾಣ ಮತ್ತು ಅಂಗವೈಕಲ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ. ಮುಖದ ಎಲುಬು, ಹಲ್ಲುಗಳು ಮತ್ತು ಮೃದು ಅಂಗಾಂಶಗಳಿಗೆ ಗಾಯ ಉಂಟಾದ ಸಂದರ್ಭದಲ್ಲಿ ವೃತ್ತಿಪರ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಅವರ ಸಹಾಯವನ್ನು ಪಡೆಯಬೇಕು. ಜಗಿಯುವಿಕೆ ಸರಿಯಾಗಿಲ್ಲದಿರುವುದು, ಜಗಿಯುವ ಸಂದರ್ಭದಲ್ಲಿ ನೋವು ಅಥವಾ ಜಗಿಯಲು ಕಷ್ಟ, ಈ ಹಿಂದೆ ಇಲ್ಲದಿದ್ದ ಮುಖದ ಅಸಹಜತೆ, ದೃಷ್ಟಿ ವೈಕಲ್ಯ, ಮುಖ ಅಥವಾ ಬಾಯಿಯ ಯಾವುದೇ ಭಾಗದಿಂದ ರಕ್ತಸ್ರಾವ ಆಗುತ್ತಿದ್ದಲ್ಲಿ ತತ್‌ಕ್ಷಣ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಗಮನಕ್ಕೆ ತರಬೇಕು.
ಡಾ| ಶ್ರೀಯಾ ರಾಯ್ಅಸಿಸ್ಟೆಂಟ್ ಪ್ರೊಫೆಸರ್, ಓರಲ್ ಮತ್ತು
ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ,
ಎಂಸಿಒಡಿಎಸ್, ಮಾಹೆ, ಮಣಿಪಾಲ