ಮಾಸ್ ಕಥೆಯೊಂದಕ್ಕೆ ಥ್ರಿಲ್ಲರ್ ಅಂಶವನ್ನು ಸೇರಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆ ಬಂದರೆ ಸಿಗುವ ಉತ್ತರವೇ “ಮ್ಯಾಕ್ಸ್’. ಇಷ್ಟು ಹೇಳಿದ ಮೇಲೆ ಮ್ಯಾಕ್ಸ್‌ನೊಳಗಿನ ಕುತೂಹಲವೂ ಹೆಚ್ಚುತ್ತಾ ಹೋಗುವುದು ಸಹಜ. ಔಟ್ ಅಂಡ್ ಔಟ್ ಮಾಸ್ ಸಿನಿಮಾವೊಂದಕ್ಕೆ ಥ್ರಿಲ್ಲರ್ ಕಥೆಯೊಂದನ್ನು ಸೇರಿಸಿ ಅದನ್ನು ಸರಾಗವಾಗಿ ಹೇಳುವ ಮೂಲಕ “ಮ್ಯಾಕ್ಸ್’ ಸಿನಿಮಾ ಪ್ರೇಮಿಗಳಿಗೆ “ಮ್ಯಾಕ್ಸಿಮಮ್’ ಮನರಂಜನೆ ಒದಗಿಸುತ್ತದೆ.
ಸಾಮಾನ್ಯವಾಗಿ ಥ್ರಿಲ್ಲರ್ ಕಥೆಗಳಿಗೆ ಮಾಸ್ ಸೇರಿಸಿದರೆ ಅದು “ಓವರ್ ಡೋಸ್’ ಆಗಿ ಬಿಡುವ ಅಪಾಯವಿರುತ್ತದೆ. ಅದೇ ಕಾರಣಕ್ಕೆ ಥ್ರಿಲ್ಲರ್ ಸಿನಿಮಾಗಳು ಆ್ಯಕ್ಷನ್ ಮುಕ್ತ. ಆದರೆ, “ಮ್ಯಾಕ್ಸ್’ನ ಹೈಲೈಟ್ ಆ್ಯಕ್ಷನ್. ಇದಕ್ಕೊಂದು ಕಾರಣವೂ ಇದೆ. ಅದೇ ಕಥೆಯ ರೋಚಕ ಅಂಶ. ತಮಿಳಿನ ನಿರ್ದೇಶಕನ ಕಥೆಯನ್ನು ಸುದೀಪ್ ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಡುವ ಮೂಲಕ ವರ್ಷಾಂತ್ಯಕ್ಕೊಂದು “ಮಾಸ್ ಹಬ್ಬ’ ಮಾಡಿದ್ದಾರೆ.
ಕಥೆಯ ಬಗ್ಗೆ ಹೇಳುವುದಾದರೆ ತೀರಾ ಹೊಸದೇನು ಅಲ್ಲ. ಇಡೀ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಅದೇ ಕಾರಣದಿಂದ ಆಗಾಗ ತಮಿಳಿನ “ಕೈದಿ’ ಸಿನಿಮಾವನ್ನು ನೆನಪಿಸಿದರೂ, “ಮ್ಯಾಕ್ಸ್’ ಕೊಡುವ ಮಜ ಬೇರೆಯದ್ದೇ. ಕಥೆಗಿಂತ ಇದೊಂದು ಕ್ಷಣ ಕ್ಷಣದ ಕುತೂಹಲವನ್ನು ಹೆಚ್ಚಿಸುತ್ತಾ, ಟ್ವಿಸ್ಟ್-ಟರ್ನ್ಗಳ ಮೂಲಕ ಸಾಗುವ “ಥ್ರಿಲ್ಲರ್’ ಸಿನಿಮಾ. ಇಲ್ಲಿ ಪ್ರೇಕ್ಷಕರ ಊಹೆಗೆ ನಿಲುಕದೇ ಕಥೆ ಸಾಗುವ ಮೂಲಕ ಸಿನಿಮಾ ಸದಾ ಹೊಸ ಟ್ವಿಸ್ಟ್ ಅನ್ನು ನೀಡುತ್ತದೆ. ಅದರಲ್ಲೂ ಚಿತ್ರದ ಮೊದಲರ್ಧ ತುಂಬಾ ವೇಗವಾಗಿ ಸಾಗುತ್ತದೆ. ಆದರೆ, ಇಲ್ಲಿ ಅನವಶ್ಯಕವಾಗಿ ಬರುವ ಐಟಂ ಸಾಂಗ್‌ವೊಂದನ್ನು “ಸೈಲೆಂಟಾಗಿ’ ಸೈಡಿಗಿಡಬಹುದಿತ್ತು.
ಮುಖ್ಯವಾಗಿ ಸಿನಿಮಾ ನೇರ ಕಥೆಯಿಂದಲೇ ಆರಂಭವಾಗುತ್ತದೆ. ಆ ಮಟ್ಟಿನ ವೇಗದೊಂದಿಗೆ ಸಿನಿಮಾ ಸಾಗುವ ಮೂಲಕ ಬೇಡದ ದೃಶ್ಯಗಳಿಂದ ಮುಕ್ತವಾ ಗಿದೆ. ಆ ವೇಗವೇ ಈ ಸಿನಿಮಾದ ಪ್ಲಸ್ ಪಾಯಿಂಟ್ ಕೂಡಾ. ಮಾಸ್ ಸಿನಿವಾದರೂ ಅತಿ ಬಿಲ್ಡಪ್‌ನ ಸಂಭಾಷಣೆಗಳಿಲ್ಲ, ಸುಖಾಸುಮ್ಮನೆ ಕಾಮಿಡಿಯಾಗಲೀ, ದೀರ್ಘ ಪಾತ್ರ ಪರಿಚಯವಾಗಲೀ ಇಲ್ಲದೇ ನೇರವಾಗಿ ಕಥೆ ಅಬ್ಬರಿಸುತ್ತಾ ಸಾಗುವುದು “ಮ್ಯಾಕ್ಸ್’ ಓಟಕ್ಕೆ ಸಾಥ್ ನೀಡಿದೆ.
ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಸುದೀಪ್ ಇಲ್ಲಿ ಪೊಲೀಸ್ ಆಫೀಸರ್. ಆದರೆ, ಆ ಕುರುಹು ಸಿನಿಮಾದಲ್ಲಿ ಸಿಗುವುದು ಕೇವಲ ಪೊಲೀಸ್ ಸ್ಟೆಷನ್‌ನಲ್ಲಿ ಮಾತ್ರ. ಏಕೆಂದರೆ ಸುದೀಪ್ ಒಂದೇ ಒಂದು ದೃಶ್ಯದಲ್ಲೂ ಪೊಲೀಸ್ ಕಾಸ್ಟ್ಯೂಮ್, ಮ್ಯಾನರಿಸಂನಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಮರುದಿನ ಬೆಳಗ್ಗೆ ಡ್ನೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕಾದ ಮ್ಯಾಕ್ಸ್ ಮುಂಚಿನ ದಿನ ರಾತ್ರಿಯೇ ಸ್ಟೆಷನ್ ಎಂಟ್ರಿಯಾಗುತ್ತಾನೆ. ಅಲ್ಲಿಂದ ಗೇಮ್ ಶುರು. ದುಷ್ಟರನ್ನು ಮಟ್ಟ ಹಾಕುತ್ತಾ, ಪೊಲೀಸ್ ಖದರ್ ತೋರಿಸುವುದೇ “ಮ್ಯಾಕ್ಸ್’ ಕಥೆ. ಮೊದಲೇ ಹೇಳಿದಂತೆ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದ್ದರಿಂದ ಟೈಮ್ ಟು ಟೈಮ್ ಇಲ್ಲಿ ಗೇಮ್ ಬದಲಾಗುತ್ತಾ ಸಾಗುವ ಮೂಲಕ ಚಿತ್ರ ಪ್ರೇಕ್ಷಕರನ್ನು ತಮ್ಮ ಜೊತೆಗೆ ಹೆಜ್ಜೆ ಹಾಕಿಸುತ್ತದೆ. ಈ ಹಾದಿಯಲ್ಲಿ ಲಾಜಿಕ್ ಹುಡುಕದೇ “ಮ್ಯಾಜಿಕ್’ನ್ನಷ್ಟೇ ಕಣ್ಣಿಗೊತ್ತಿಕೊಂಡರೆ ಆ ಕ್ಷಣದ “ಸುಖ’ ನಿಮ್ಮದು.
ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ಸುದೀಪ್. ಅವರ ಸ್ಟೈಲಿಶ್ ಹಾವ-ಭಾವದ ಜೊತೆಗೆ ಮಾಸ್ ಲುಕ್ ಇಷ್ಟವಾಗುತ್ತದೆ. ತುಂಬಾ ದಿನಗಳ ನಂತರ ಔಟ್ ಅಂಡ್ ಔಟ್ ಮಾಸ್ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಂಡು “ಮಾಸ್’ ಮನ ತಣಿಸಿದಂತಾಗಿದೆ. ಇದರ ಹೊರತಾಗಿ ವರಲಕ್ಷ್ಮೀ ಶರತ್ ಕುಮಾರ್, ಸುನಿಲ್, ಉಗ್ರಂ ಮಂಜು, ಸಂಯುಕ್ತಾ, ಸುಕೃತಾ, ಸುಧಾ ಬೆಳವಾಡಿ… ಹೀಗೆ ಅನೇಕರೂ ನಟಿಸಿದರೂ ಯಾರ ಪಾತ್ರಕ್ಕೂ ದೊಡ್ಡ ಮಟ್ಟದ “ಫೋಕಸ್’ ಸಿಕ್ಕಿಲ್ಲ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಪೂರಕವಾಗಿದೆ.
ರವಿಪ್ರಕಾಶ್ ರೈ