Advertisement

ಗ್ರಾಮಸ್ಥರಿಂದ ಮಾವಿನಕಟ್ಟೆ-ಸಬ್ಬಡ್ಕ ರಸ್ತೆ ದುರಸ್ತಿ

05:24 PM Feb 27, 2017 | |

ಪುತ್ತೂರು : ರಸ್ತೆಯಲ್ಲಿ ಪಾದಚಾರಿ, ವಾಹನ ಸಂಚಾರಕ್ಕೆ ಅಸಾಧ್ಯವಾಗಿದ್ದ ಸ್ಥಿತಿ. ಜನಪ್ರತಿನಿಧಿಗಳಿಗೆ ಅನುದಾನಕ್ಕೆ ಮನವಿ ಕೊಟ್ಟರೂ ಫಂಡ್‌ ಬಾರದ ಸಮಸ್ಯೆ. ಹಾಗಂತ ಗ್ರಾಮಸ್ಥರು ತಲೆ ಮೇಲೆ ಕೈ ಹೊತ್ತು ಅದೇ ರಸ್ತೆಯಲ್ಲಿ ಸಾಗಲಿಲ್ಲ. ಬದಲಿಗೆ ಸ್ವ ಪ್ರಯತ್ನದ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿದರು. ತಡ ಮಾಡದೇ ಕಾರ್ಯಪ್ರವೃತ್ತರಾದರು. 

Advertisement

ಕೊಳ್ತಿಗೆ ಗ್ರಾ.ಪಂ.ನ ಮಾವಿನಕಟ್ಟೆ- ಸಬ್ಬಡ್ಕ ಮೂರು ಕಿ.ಮೀ. ರಸ್ತೆಯನ್ನು ಗ್ರಾಮಸ್ಥರೆ ಕೈಯಾರೇ ಹಣ ಹಾಕಿ, ದಿನವಿಡಿ ಶ್ರಮ ವಹಿಸಿ ರಸ್ತೆ ದುರಸ್ತಿಗೊಳಿಸಿ, ಮಾದರಿ ಆದ ಕಥೆಯಿದು.

ನಾಲ್ಕು ವರ್ಷದ ವ್ಯಥೆ
ಜಿ.ಪಂ. ವ್ಯಾಪ್ತಿಗೆ ಸೇರಿರುವ ಡಾಮರು ರಸ್ತೆ ಕಳೆದ ನಾಲ್ಕು ವರ್ಷದಿಂದ ಸಂಚಾರಕ್ಕೆ ಅಯೋಗ್ಯ ಸ್ಥಿತಿಯಲ್ಲಿತ್ತು. ಕೆಲ ಸಮಯಗಳ ಹಿಂದೆ ಜಿ.ಪಂ.ನ 1 ಲಕ್ಷ ರೂ. ಅನುದಾನದಲ್ಲಿ ಮುಕ್ಕಾಲು ಕಿ.ಮೀ. ಹೊಂಡ ಮುಚ್ಚುವ ಕೆಲಸ ನಡೆದಿತ್ತು. ಮೂರು ಕಿ.ಮೀ. ದೂರ ಹೊಂಡಗಳಿಂದ ತುಂಬಿ ಪಾದಚಾರಿಗಳ ನಡೆದಾಟಕ್ಕೂ ಅಸಾಧ್ಯವಾದ ಸ್ಥಿತಿ ನಿರ್ಮಾವಾಗಿತ್ತು. ಹಾಗಾಗಿ ಇನ್ನೂ ಅನುದಾನಕ್ಕೆ ಕಾಯುವ ಬದಲು ಗ್ರಾಮಸ್ಥರೇ ತಮ್ಮೂರಿನ ಸಂಪರ್ಕ ರಸ್ತೆಗೆ ಸುಧಾರಣೆಯ ಭಾಗ್ಯ ಕಲ್ಪಿಸಿಯೇ ಬಿಟ್ಟರು.

90 ಜನರ ಶ್ರಮ
ಈ ರಸ್ತೆಯನ್ನು ಸಂಪರ್ಕವನ್ನಾಗಿ ಬಳಸುವ 300ಕ್ಕೂ ಅಧಿಕ ಮನೆಗಳಿವೆ. ಕೊರಂಬಡ್ಕ, ಎಕ್ಕಡ್ಕದಲ್ಲಿ ಸರಕಾರಿ ಹಿ.ಪ್ರಾ. ಶಾಲೆಗಳಿವೆ.  ಶೇಡಿಗುರಿಯಲ್ಲಿ ಅಂಗನವಾಡಿ ಕೇಂದ್ರವಿದೆ. ಜತೆಗೆ ಈ ರಸ್ತೆ ಅಮಲ-ಪಾಂಬಾರು ರಸ್ತೆಗೆ ಸಂಪರ್ಕ ರಸ್ತೆಯು ಆಗಿದೆ. ಇಲ್ಲಿನ 90ಕ್ಕೂ ಅಧಿಕ ಗ್ರಾಮಸ್ಥರು ಮೂರು ಕಿ.ಮೀ. ರಸ್ತೆ ದುರಸ್ತಿಗೆ ನಿರ್ಧರಿಸಿ, ದಿನಪೂರ್ತಿ ಶ್ರಮದಾನ ಮಾಡಿದ್ದಾರೆ. ಚರಂಡಿ ದುರಸ್ತಿಗೆ ಜೆಸಿಬಿ ಯಂತ್ರವನ್ನೂ ಬಳಸಿಕೊಂಡಿದ್ದಾರೆ. ಡಾಮರು ರಸ್ತೆಯಲ್ಲಿ ಹೊಂಡ ಮುಚ್ಚಿದ್ದು, ಈಗ ವಾಹನಗಳ ಓಡಾಟಕ್ಕೆ ಒಂದಷ್ಟು ಪರಿಹಾರ ಸಿಕ್ಕಿದೆ.ಹಣ ಹಾಕಿದರು ಜೆಸಿಬಿ ಯಂತ್ರಕ್ಕೆ, ಊಟದ ಖರ್ಚಿಗೆ, ಇತರೆ ಖರ್ಚಿನ ಹಣವನ್ನು ಗ್ರಾಮಸ್ಥರೇ ಭರಿಸಿದ್ದಾರೆ. 47 ಜನರಿಂದ 38,000 ರೂ. ಸಂಗ್ರಹವಾಗಿತ್ತು. ಸಾವಿರ, ಐನೂರು, ಇನ್ನೂರು ಹೀಗೆ ಜನರು ತಮ್ಮಿಂದಾದ ಸಹಾಯ ನೀಡಿದ್ದಾರೆ.

ಶ್ರಮದಾನ, ಹಣದಾನ ಸಹಿತ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿತ್ತು. ಇಲ್ಲಿ ಒಟ್ಟು 33,850 ರೂ. ಖರ್ಚು ತಗಲಿತ್ತು. ಉಳಿಕೆ ಆದ ಮೊತ್ತವನ್ನು ಮಳೆಗಾಲದ ಸಮಯದಲ್ಲಿ ಚರಂಡಿ ದುರಸ್ತಿಗೆ ಬಳಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಸ್ಥಳೀಯರಾದ ಎಸ್‌. ಗಣಪತಿ ಭಟ್‌ ಎಕ್ಕಡ್ಕ, ದುಗ್ಗಳ ತೀರ್ಥಾನಂದ, ಎಕ್ಕಡ್ಕ ವಿಷ್ಣು ಭಟ್‌, ಧನಂಜಯ ಪೂಜಾರಿ, ಹರೀಶ್‌ ಗೌಡ ನೇತೃತ್ವದ ಗ್ರಾಮಸ್ಥರ ತಂಡ ಶ್ರಮದಾನದ ಯೋಜನೆ ರೂಪಿಸಿದ್ದರು. ಊರಿನ ಜನರು ಪಕ್ಷಾತೀತವಾಗಿ ಪಾಲ್ಗೊಂಡು ದಿನಪೂರ್ತಿ ರಸ್ತೆ ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next