Advertisement

ಮಾವಿನಕಾರು: ಹೊಳೆ ದಾಟಲು ಬೇಕು ಕಿರುಸೇತುವೆ

06:00 AM Aug 03, 2018 | Team Udayavani |

ಕೊಲ್ಲೂರು: ಕೊಲ್ಲೂರಿನಿಂದ ಸುಮಾರು 3 ಕಿ.ಮೀ. ದೂರದ ಮಾವಿನಕಾರು ಎಂಬಲ್ಲಿ ಹೊಳೆಗೆ ಸೇತುವೆ ಇಲ್ಲದ್ದರಿಂದ ಮೇಲ್ಮನೆ ಕಂಬಳಗದ್ದೆಯ ನಿವಾಸಿಗಳು ಇಲ್ಲಿನ ವೆಂಟೆಂಡ್‌ ಡ್ಯಾಂ ಮೇಲೆಯೇ ಉಸಿರು ಬಿಗಿಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.  

Advertisement

ಭದ್ರತೆಯಿಲ್ಲ 
ಈ ಭಾಗದ ಗದ್ದೆಗಳಿಗೆ ನೀರುಣಿಸಲು ನಿರ್ಮಿಸಲಾದ ಕಿಂಡಿ ಅಣೆಕಟ್ಟು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇದನ್ನೇ ಇಲ್ಲಿನ ನಿವಾಸಿಗಲು ಹೊಳೆ ದಾಟಲೂ ಬಳಸುತ್ತಾರೆ. ಶಾಲೆಗೆ ತೆರಳವ ವಿದ್ಯಾರ್ಥಿಗಳೂ ಇದರ ಮೇಲೆಯೇ ಸಾಗಬೇಕು. ಆದರೆ ಡ್ಯಾಮ್‌ನ 2 ಕಡೆಯಲ್ಲಿ ರಿವೀಟ್‌ಮೆಂಟ್‌ ಕಟ್ಟದಿರುವುದು ಅನಾಹುತ ಆಹ್ವಾನಿಸುವಂತಿದೆ. ಮಕ್ಕಳು ನಡೆವಾಗ ಸ್ವಲ್ಪ ತಪ್ಪಿದರೂ ನೀರಿಗೆ ಬೀಳುವ ಅಪಾಯವಿದೆ.
  
ಕಿರುಸೇತುವೆ ಅಗತ್ಯ 
ಮೇಲ್ಮನೆ ಭಾಗದಲ್ಲಿ ಸುಮಾರು 15 ರಿಂದ 20 ಕುಟುಂಬಗಳು ಅದರಲ್ಲೂ ಮುಖ್ಯವಾಗಿ ಮರಾಠಿ ಜನಾಂಗದ 130 ಮಂದಿ ಇಲ್ಲಿ ವಾಸವಾಗಿದ್ದಾರೆ. ಪ್ರತಿಯೊಂದು ಕೆಲಸ ಕಾರ್ಯಕ್ಕೂ ಅಗಲ ಕಿರಿದಾದ ವೆಂಟೆಡ್‌ ಡ್ಯಾಮ್‌ನಲ್ಲೇ ಇವರು ಸಾಗಬೇಕು. ಈ ವಿಚಾರದಲ್ಲಿ ಸೇತುವೆಗಾಗಿ ಇಲ್ಲಿನ ನಿವಾಸಿಗಳು ಇಲಾಖೆಗಳಿಗೆ ಮನವಿ ನೀಡಿದ್ದಾರೆ. ಜನಪ್ರತಿನಿಧಿಗಳಿಗೂ ಹೇಳಿದ್ದಾರೆ. ಆದರೆ ಸಕಾರಾತ್ಮಕ ಉತ್ತರ ಬಂದಿಲ್ಲ. ಬಹಳಷ್ಟು ವರುಷಗಳ ಹಿಂದೆ ಹೊಳೆಗೆ ಮರದ ಕಾಲುಸಂಕ ಇತ್ತು. ವೆಂಟೆಡ್‌ ಡ್ಯಾಮ್‌ ನಿರ್ಮಿಸಿದ ಅನಂತರ ಜನರು ಅದನ್ನೇ ಸಾಗುವ ದಾರಿಯಾಗಿ ಉಪಯೋಗಿಸಲು ಆರಂಭಿಸಿದ್ದರು. ವರ್ಷ ಪೂರ್ತಿ ಈ ಹೊಳೆಯಲ್ಲಿ ನೀರು ಇರುವುದರಿಂದ ಸೇತುವೆ ಅಗತ್ಯ ಹೆಚ್ಚಾಗಿದೆ. 

ತುರ್ತು ಸಂದರ್ಭ ದೇವರೇ ಗತಿ
ಅನಾರೋಗ್ಯ ಉಂಟಾದರೆ ತುರ್ತು ಚಿಕಿತ್ಸೆಗೆ ತೆರಳಬೇಕಾದವರ ಪಾಡು ಹೇಳ ತೀರದು. ಏಕೆಂದರೆ ಇಲ್ಲಿ ವಾಹನ ಸೌಲಭ್ಯವಿಲ್ಲ. ಮಣ್ಣಿನ ರಸ್ತೆ ಮಾತ್ರ ಇದೆ. ಇದರಲ್ಲಿ ವಾಹನಗಳು ಸಾಗಲು ಹರಸಾಹಸ ಪಡಬೇಕಾಗುತ್ತದೆ. ಸೌಲಭ್ಯಗಳ ಕೊರತೆಯಿಂದ ನಲುಗುತ್ತಿರುವ ಕಂಬಳಗದ್ದೆ ಮೇಲ್ಮನೆ ನಿವಾಸಿಗಳಿಗೆ ಕಿರು ಸೇತುವೆ ಹಾಗೂ ನೇರ ಸಂಪರ್ಕ ರಸ್ತೆಯ ಕೊರತೆ ಎದ್ದು ಕಾಣುತ್ತಿದೆ .

ಡಾಮರು ಹಾಕಲು ಕಾನೂನು ತೊಡಕು 
ಈ ಭಾಗಕ್ಕೆ ವಿದ್ಯುತ್‌ ಸಂಪರ್ಕ ಆಗಿದೆ. ಆದರೆ ಡಾಮರು ಹಾಕಲು ಕಾನೂನು ತೊಡಕಿದೆ. ವನ್ಯಜೀವಿ ವಲಯ ಆದ್ದರಿಂದ ಕಾನೂನು ತೊಡಕು ಇದ್ದು ಮಾವಿನಕಾರಿನಿಂದ ಮೇಲ್ಮನೆವರೆಗೆ ಡಾಮರೀಕರಣ ಆಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಬೇಕಿದೆ.  

ಸಮಸ್ಯೆ ಬಗೆಹರಿಸಿ
ಮಾವಿನಕಾರಿನ ಮೇಲ್ಮನೆ ಕಂಬಳಗದ್ದೆಯ ನಿವಾಸಿಗಳಿಗೆ ಕಿರು ಸೇತುವೆ ಅತೀ ಅಗತ್ಯ. ಐಪಿಡಿಪಿ ಇಲಾಖೆ ಹೆಚ್ಚಿನ ಆಸಕ್ತಿ ವಹಿಸಿ ಈ ಭಾಗದ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು .
– ಜಯಪ್ರಕಾಶ ಶೆಟ್ಟಿ, ಕೊಲ್ಲೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ

Advertisement

ಸರಕಾರದ ಮೇಲೆ ಒತ್ತಡ ಹಾಕುತ್ತೇನೆ
ಬೈಂದೂರು ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ನದಿಗಳಿರುವಲ್ಲಿ ಸಂಪರ್ಕ ಸೇತುವೆಯ ಕೊರತೆ ಇದೆ. ಅದಕ್ಕೊಂದು ಪರಿಹಾರ ಕಂಡುಕೊಳ್ಳುಲು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. 
– ಬಿ.ಎಮ್‌. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next