ಕೊಲ್ಲೂರು: ಇದು ಕೊಲ್ಲೂರು ಭಾಗದ ಎರಡು ಕಾಲು ಸಂಕಗಳ ಕಥೆ. ಮಾವಿನಕಾರು ಗ್ರಾಮದ ಕಂಬಳಗದ್ದೆ ಕಾಲುಸಂಕ ಹಾಗೂ ಹಳ್ಳಿಬೇರಿನ ಕುಮ್ ಗೋಡು ಹಾಗೂ ಸೇವಳೆ ಹೊಳೆಗೆ ಕಟ್ಟಬೇಕಾಗಿರುವ ಕಾಲು ಸಂಕಕ್ಕೆ ಎದುರಾಗಿರುವ ಅಡೆತಡೆ ಮತ್ತು ಅದರಿಂದ ಆ ಭಾಗದ ಸುಮಾರು 33ಕ್ಕೂ ಅಧಿಕ ಕುಟುಂಬಗಳು ಮಳೆಗಾಲದಲ್ಲಿ ಎದುರಿಸುತ್ತಿರುವ ಸಾಲು ಸಾಲು ಸಮಸ್ಯೆಗಳ ಚಿತ್ರಣ. ನಿಜವೆಂದರೆ, ಇಲ್ಲಿನ ಜನರ ಸಂಕಷ್ಟಗಳಿಗೆ ಸರಕಾರ, ಆಡಳಿತ ವ್ಯವಸ್ಥೆ ಸ್ಪಂದಿಸಿದೆ. ಆದರೆ ಕಷ್ಟದಲ್ಲಿರುವ ಜನರ ನೋವನ್ನು ಆ ಭಾಗದ ಜನರು ಅರ್ಥ ಮಾಡಿಕೊಳ್ಳುವುದಕ್ಕೆ ಬಾಕಿ ಇದೆ. ಒಂದು ಕಾಲು ಸಂಕ ನಿರ್ಮಾಣಕ್ಕೆ ರಸ್ತೆ ಸಂಪರ್ಕದ ಸಮಸ್ಯೆ ಇದ್ದರೆ, ಇನ್ನೊಂದಕ್ಕೆ ಜಾಗದ ತಕರಾರೇ ತಡೆ ಯಾಗಿದೆ. ಇದೆಲ್ಲವೂ ನಿವಾರಣೆಗೊಂಡು ಮಕ್ಕಳು, ಹಿರಿಯರ ಸಂಚಾರಕ್ಕೂ ಅನುಕೂಲವಾಗುವ ಕಾಲು ಸಂಕ ನಿರ್ಮಾಣಗೊಳ್ಳಲಿ ಎನ್ನುವುದು ಈ ಭಾಗದ ಜನರ ಆಶಯ.
ಕಾಮಗಾರಿಗೆ ಸಮಸ್ಯೆ ಕುಮ್‌ಗೊàಡು, ಸೇವಳೆ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಆ ಮಾರ್ಗವಾಗಿ ಘನ ವಾಹನ ಸಂಚಾರಕ್ಕೆ ಎದುರಾದ ತೊಡಕಿ ನಿಂದಾಗಿ ಕಾಮಗಾರಿ ಆರಂಭಗೊಳ್ಳದೇ ಸ್ಥಗಿತಗೊಂಡಿದೆ ಎನ್ನುತ್ತಾರೆ ಕೊಲ್ಲೂರು ಪಂಚಾಯತ್‌ನ ಪಿಡಿಒ ರುಕ್ಕನ ಗೌಡ.
ಕಂಬಳಗದ್ದೆ ಸಂಕಕ್ಕೆ ಜಾಗದ ತಕರಾರು
ಮಾವಿನಕಾರು ಬಳಿಯ ಕಂಬಳಗದ್ದೆಗೆ ಸಾಗುವ ದಾರಿಯಲ್ಲಿ ನದಿಗೆ ಮರದ ಕಾಲುಸಂಕ ನಿರ್ಮಿಸಲಾಗಿದೆ. ಆದರೆ, ಮಳೆಗಾಲದಲ್ಲಿ ರಭಸದಿಂದ ಹರಿಯುವ ನದಿಯ ವೇಗಕ್ಕೆ ಕಾಲುಸಂಕ ಕೊಚ್ಚಿ ಹೋಗುವ ಭೀತಿ ಇದೆ. ಆ ಮಾರ್ಗವಾಗಿ ಸಾಗುವ ಗ್ರಾಮಸ್ಥರು, ಶಾಲಾ ಮಕ್ಕಳು ಭಯದಿಂದ ಸಾಗಬೇಕಾದ ಪರಿಸ್ಥಿತಿ ಇದೆ. ಸೇತುವೆ ನಿರ್ಮಾಣಕ್ಕೆ ಭಾರೀ ಅನುದಾನದ ಬೇಡಿಕೆ ಇರುವುದರಿಂದ ಗ್ರಾಮಸ್ಥರ ಮನವಿ ಬೆಂಗಳೂರಿನ ಇಲಾಖೆಯ ಕಚೇರಿಯಲ್ಲಿ ಧೂಳು ಹಿಡಿದು ಕೂತಿದೆ. ಇಲ್ಲಿ 25 ಮನೆಗಳಿದ್ದು, ಬಂಟರು ಹಾಗೂ ಮಾರಾಠಿ ಸಮುದಾಯದವರು ವಾಸವಾಗಿದ್ದಾರೆ.
ಮಾವಿನಕಾರಿನ ಕಂಬಳಗದ್ದೆಯಲ್ಲಿ ಸೇತುವೆ ನಿರ್ಮಾಣಕ್ಕೆ ಎದುರಾದ ಜಾಗದ ತಕರಾರಿನಿಂದ ಯೋಜನೆ ಅನುಷ್ಠಾನಗೊಳ್ಳಲು ವಿಳಂಬವಾಗಿದೆ. ಹಾಗಾಗಿ ಮಳೆಗಾಲದಲ್ಲಿ ನಿರ್ಮಿಸಲಾಗಿರುವ ಮರದ ದಿಣ್ಣೆಯ ಕಾಲುಸಂಕವನ್ನೇ ಅಲ್ಲಿನ ನಿವಾಸಿಗಳು ಅವಲಂಬಿಸಬೇಕಾಗಿದೆ. ಮಾವಿನಕಾರಿನ ಕಂಬಳಗದ್ದೆ ಹಾಗೂ ಹಳ್ಳಿಬೇರಿನ ಕುಮ್‌ಗೊàಡು ಸೇವಳೆಯಲ್ಲಿನ ನದಿ ನಡುವಿನ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿಭಾಯಿಸಿ, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಕೊಲ್ಲೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಅವರು ಹೇಳಿದ್ದಾರೆ.
ಹಳ್ಳಿಬೇರಿಗೆ ಲಾರಿ ಪ್ರಯಾಣಕ್ಕೆ ಹಿಂದೇಟು!
ಹಳ್ಳಿಬೇರಿನ ಕುಮ್‌ಗೋಡು ಹಾಗೂ ಸೇವಳೆ ಹೊಳೆಗೆ ಅರ್ಜೆಂಟಾಗಿ ಸೇತುವೆ ಇಲ್ಲವೇ ಕನಿಷ್ಠ ಕಾಲು ಸಂಕ ಬೇಕಾಗಿದೆ. ದಟ್ಟ ಕಾನನದ ನಡುವೆ ಇರುವ ಎಂಟು ಕುಟುಂಬಗಳಿಗೆ ಮನೆ ತಲುಪಲು ಇರುವ ದಾರಿ ಇದೊಂದೇ. ಒಂದು ವೇಳೆ ಹೊಳೆ ದಾಟಲಾಗದೆ ಇದ್ದರೆ ಕಾಲ್ನಡಿಗೆಯಲ್ಲಿ ಸುತ್ತಿ ಬಳಸಿ ಕಾಡಿನ ನಡುವೆ ಸಾಗಿ ಕೊಲ್ಲೂರು ತಲುಪಬೇಕು. ಶಾಲೆಗೆ ತೆರಳುವ ಮಕ್ಕಳು, ಕಾರ್ಮಿಕರ ನಿತ್ಯ ಪಾಡು ಹೇಳತೀರದು.
ಇಲ್ಲಿ ಊರಿನವರೇ ನಿರ್ಮಿಸಿಕೊಂಡ ಮರದ ದಿಣ್ಣೆಯ ಕಾಲು ಸಂಕ ಭಾರಿ ಮಳೆಯಿಂದಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಹಳ್ಳಿಬೇರಿನಿಂದ ಕೊಲ್ಲೂರಿಗೆ ಏಳು ಕಿ.ಮೀ. ನಡಿಗೆಯೇ ಖಾಯಂ ಆಗಿದೆ.
ಕೊಲ್ಲೂರಿನಿಂದ ಹಳ್ಳಿಬೇರಿಗೆ ಸಂಪರ್ಕ ಕಲ್ಪಿಸುವ ಕಾಡು ಹಾದಿ ಅತ್ಯಂತ ಕಡಿದಾಗಿದೆ. ಇಲ್ಲಿನ ಮಣ್ಣಿನ ರಸ್ತೆಯಲ್ಲಿ ಜೀಪು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳು ಬಹಳ ಕಷ್ಟಪಟ್ಟು ಹತ್ತುತ್ತವೆ. ಅರಣ್ಯ ಇಲಾಖೆಯ ನಿಯಮದ ಪ್ರಕಾರ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸುವಂತೆಯೂ ಇಲ್ಲ. ನಿಜವೆಂದರೆ, ಸೇವಳೆ ಸೇತುವೆಗೆ ಅನುದಾನ ಮಂಜೂರಾಗಿದೆ. ಆದರೆ, ಅದರ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಸ್ಥಳಕ್ಕೆ ಒಯ್ಯಲು ಸಾಧ್ಯವಾಗುತ್ತಿಲ್ಲ. ಲಾರಿಗಳು ಈ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿವೆ! ಹೀಗಾಗಿ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರು ಅಂದು ಅನುದಾನ ಬಿಡುಗಡೆ ಮಾಡಿದ್ದರೂ ಸಾಗುವ ದಾರಿಯ ಸಮಸ್ಯೆಯಿಂದಾಗಿ ಯೋಜನೆ ಅನುಷ್ಠಾನಗೊಂಡಿಲ್ಲ.
– ಡಾ| ಸುಧಾಕರ ನಂಬಿಯಾರ್