ಕಟಪಾಡಿ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ದುಗ್ಗುಪಾಡಿಯಲ್ಲಿ ವನಜ ಎನ್.ಕೆ ಎಂಬವರ ಮನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆಯು ಬುಧವಾರ ರಾತ್ರಿಯ ವೇಳೆಯಲ್ಲಿ ಘಟಿಸಿದ್ದು, ಸುಮಾರು 3 ಲಕ್ಷ ರೂ. ಗೂ ಅಧಿಕ ಹಾನಿ ಸಂಭವಿಸಿದೆ.
ಮನೆಯ ಪಾರ್ಶ್ವಕ್ಕೆ ಹಾಗೂ ದನದ ಹಟ್ಟಿಗೂ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ಮನೆಯ ಮೇಲ್ಛಾವಣಿ, ಮನೆ ರಿಪೇರಿ ಮತ್ತು ದೈವದ ಮನೆ ಕಟ್ಟಲು ತಂದು ಇರಿಸಲಾಗಿದ್ದ ಮರದ ದಾರಂದಗಳು, ಕಿಟಕಿಗಳು, ಬೈಹುಲ್ಲು ಹಾಗೂ ವಿದ್ಯುತ್ ಸಂಪರ್ಕ, ಸಲಕರಣೆಗಳೂ ಅಗ್ನಿಗೆ ಆಹುತಿಯಾಗಿದೆ ಎಂದು ವನಜ ಎನ್.ಕೆ ಅವರ ಪುತ್ರ ನಾಗೇಶ್ ಕೋಟ್ಯಾನ್ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಸ್ಥಳೀಯರು ಮತ್ತು ಜಿಲ್ಲಾ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿ ಸಂಭಾವ್ಯ ಹೆಚ್ಚಿನ ಅವಘಡವು ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ಉಮಾ ಬಿ., ಎಎಸ್‌ಐ ದಯಾನಂದ್, ಎಚ್‌ಸಿ ರುಕ್ಮಯ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಇದನ್ನೂ ಓದಿ: ಕೃಷ್ಣಾ ಕಣಿವೆ ಯೋಜನೆಗಳ ರಾಷ್ಟ್ರೀಕರಣ : ಬಜೆಟ್ ಕುರಿತು ಶಾಸಕ ಬಯ್ಯಾಪೂರ ಬೇಸರ