Advertisement

ಸಾರ್ವಜನಿಕರಿಗೆ ಕೈಗೆಟುಕದ ಮಟ್ಟು ಸೇತುವೆ : ಕಾಮಗಾರಿ ಬಹುತೇಕ ಮುಗಿದರೂ ರಸ್ತೆ ಸಂಪರ್ಕ ರಹಿತ

01:09 PM Feb 23, 2022 | Team Udayavani |

ಕಟಪಾಡಿ : ಮಟ್ಟು ಗ್ರಾಮದ ರಾಜಪಥವಾಗಿ ತೆರೆದುಕೊಳ್ಳಬೇಕಿದ್ದ, ಬೃಹತ್‌ ಯೋಜನೆಯಡಿ ನಿರ್ಮಾಣಗೊಂಡ ನೂತನ ಸೇತುವೆಯು ರಸ್ತೆಯ ಸಂಪರ್ಕ ಪಡೆಯುವಲ್ಲಿ ವಿಫಲವಾಗಿ ಹರಿಯುತ್ತಿರುವ ಮಟ್ಟು ಹೊಳೆಯಲ್ಲಿ ತೇಲುವಂತೆ ಭಾಸವಾಗುತ್ತಿದೆ.

Advertisement

ಕರ್ನಾಟಕ ರೋಡ್‌ ಡೆವಲಪ್‌ಮೆಂಟ್‌ ಕಾರ್ಪೋ ರೇಶನ್‌ ಲಿ. ಯೋಜನೆಯಡಿ 9,12,07,158 ರೂ. ಅನುದಾನದಲ್ಲಿ 145.88 ಮೀ. ಉದ್ದ, 10.50 ಮೀ. ಅಗಲದ ಸೇತುವೆಯ ನಿರ್ಮಾಣ ಕೆಲಸ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ ಸೇತುವೆಯ ಇಕ್ಕೆಲಗಳಲ್ಲಿ ರಸ್ತೆಯ ಸಂಪರ್ಕ ಇಲ್ಲದೆ ಬೃಹತ್‌ ಯೋಜನೆಯೊಂದು ನಿಷ್ಪ್ರಯೋಜಕವಾಗುವ ಭೀತಿ ವ್ಯಕ್ತವಾಗುತ್ತಿದೆ.

ಈಗಾಗಲೇ ಡಿಜಿಟಲ್‌ ಇಂಡಿಯಾದತ್ತ ಹೊರಳಿರುವ ಉಡುಪಿ ಜಿಲ್ಲೆಯ ಕೋಟೆ-ಮಟ್ಟು ಗ್ರಾಮವು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸೇತುವಾಗಿ ನೂತನ ಸೇತುವೆಯು ಸಿಂಹಪಾಲು ಪಡೆದುಕೊಳ್ಳಲಿದೆ ಎಂಬ ಕನಸು ಹುಸಿಯಾಗಿದೆ. ಆ ಮೂಲಕ ಸರಕಾರದ ಬೃಹತ್‌ ಯೋಜನೆಯೊಂದು ಹಳ್ಳ ಹಿಡಿಯುವುದೇ ಎಂಬ ಆತಂಕ ನಾಗರಿಕರದ್ದು.

ಪಾದಚಾರಿ ಮಾರ್ಗವನ್ನೂ ಹೊಂದಿರುವ ಈ ಸೇತುವೆಯ ನಿರ್ಮಾಣದ ಕಾಮಗಾರಿಯನ್ನು 2019ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. “2020ರ ಮೇ ತಿಂಗಳ ಅಂತ್ಯದೊಳಗಡೆ ಪೂರ್ಣಗೊಳಿಸಲಾಗುತ್ತದೆ. ಅನಂತರದಲ್ಲಿ ಸುಸಜ್ಜಿತ ಸೇತುವೆಯು ಸೂಕ್ತ ಸಂಪರ್ಕ ರಸ್ತೆಯೊಂದಿಗೆ ಸುರಕ್ಷಿತ ಸಂಚಾರಕ್ಕೆ ತೆರೆದುಕೊಳ್ಳಲಿದೆ’ ಎಂದು ಅಂದಿನ ದಿನಗಳಲ್ಲಿ ಕರ್ತವ್ಯ ನಿರತರಾಗಿದ್ದ ಕೆ.ಆರ್‌.ಡಿ.ಸಿ.ಎಲ್‌. ಇದರ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸಂಗಮೇಶ್‌ ಜಿ. ಆರ್‌. ಉದಯವಾಣಿಗೆ ತಿಳಿಸಿದ್ದರು.

ಬಳಿಕ ಭರದಿಂದ ಸಾಗುತ್ತಿದ್ದ ಸೇತುವೆಯ ಕಾಮಗಾರಿಯು ಕೊರೊನಾ ಕೋವಿಡ್‌ ಸಂದರ್ಭ ಆಮೆಗತಿಯಲ್ಲಿ ಸಾಗುತ್ತಾ ಬಂದಿತ್ತು. ಕಳೆದ ಸಾಲಿನ ಮಳೆಗಾಲಕ್ಕೂ ಮುನ್ನವೇ ಈ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸುವ ಇಂಗಿತವನ್ನು ಎಂಜಿನಿಯರಿಂಗ್‌ ವಿಭಾಗದವರು ವ್ಯಕ್ತಪಡಿಸಿದ್ದರು.

Advertisement

ಇದನ್ನೂ ಓದಿ :  ಬಜರಂಗದಳ ಕಾರ್ಯಕರ್ತನ ಹತ್ಯೆ ಖಂಡಿಸಿ ಚಿಂಚೋಳಿಯಲ್ಲಿ ಭುಗಿಲೆದ್ದ ಆಕ್ರೋಶ

ರಿಂಗ್‌ ಮಾದರಿಯ ಸಂಪರ್ಕ ರಸ್ತೆಗೆ ಸುಸಜ್ಜಿತ ನೂತನ ಸೇತುವೆ
ಕಟಪಾಡಿಯಿಂದ ಮಟ್ಟು ಸಂಪರ್ಕ ಸೇತುವೆ ತನಕ ಸುಮಾರು 2 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡಿರುವ ದ್ವಿಪಥ ರಸ್ತೆ ಹಾಗೂ ಹಾಗೂ ಈ ಬೃಹತ್‌ ಸೇತುವೆಯು ಗ್ರಾಮದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದ್ದು, ಆ ಬಳಿಕ ರಾಷ್ಟ್ರೀಯ ಹೆದ್ದಾರಿ 66ರಿಂದ ಕಟಪಾಡಿ-ಕೋಟೆಯಿಂದ ನೇರವಾಗಿ ಮಟ್ಟು ಭಾಗಕ್ಕೆ ಸಂಪರ್ಕವನ್ನು ಕಲ್ಪಿಸ ಲಿದೆ. ಪ್ರಮುಖವಾಗಿ ಮೀನುಗಾರರು, ಕೃಷಿಕರು, ಪ್ರವಾಸಿಗರೇ ಹೆಚ್ಚು ಅವಲಂಬಿತವಾಗಿರುವ ಉಳಿಯಾರಗೋಳಿ- ಕೈಪುಂಜಾಲು- ಮಟ್ಟು, ಪಾಂಗಾಳ- ಆರ್ಯಾಡಿ- ಪಾಂಗಾಳ ಮಟ್ಟು- ಮಟ್ಟು, ಕಟಪಾಡಿ- ಕೋಟೆ- ಮಟ್ಟು ಹಾಗೂ ಮಟ್ಟು- ಉದ್ಯಾವರ ಕೊಪ್ಲ- ಕಡೆತೋಟ- ಕನಕೋಡ- ಪಡುಕರೆ-ಮಲ್ಪೆ ಸಂಪರ್ಕಕ್ಕೆ ಈ ಭಾಗದ ಪ್ರಮುಖ ರಿಂಗ್‌ ಮಾದರಿಯ ಸಂಪರ್ಕ ರಸ್ತೆಯಾಗಿದೆ.

ಹಳೆಯ ಸೇತುವೆ
ಅಗಲ ಕಿರಿದಾದ ಹಳೆಯ ಸೇತುವೆಯಿಂದಾಗಿ ಮಟ್ಟು ಸೇತುವೆಯ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಲಘುವಾಹನ ಸಂಚಾರ ಮಾತ್ರ ಸಾಧ್ಯವಾಗುತ್ತಿತ್ತು. ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ನಿತ್ಯ 7 ಬಸ್‌ಗಳು ನಿಗದಿತ ವೇಳಾಪಟ್ಟಿಯಂತೆ ಮಟ್ಟು ಅಗಲ ಕಿರಿದಾದ ಸೇತುವೆಯ ವರೆಗೆ ಬಂದು ಮತ್ತೆ ಹಿಂದಿರುಗುತ್ತಿದೆ.

ಪ್ರಕೃತಿ ಪ್ರೇಮಿಗಳನ್ನೂ ಸೆಳೆಯಲಿದೆ
ಪ್ರಮುಖವಾಗಿ ಮಟ್ಟು ಗ್ರಾಮವು ಭೌಗೋಳಿಕ ವಾಗಿ ಮಟ್ಟುಗುಳ್ಳದೊಂದಿಗೆ ಪ್ರಾಪಂಚಿಕವಾಗಿ ಗುರುತಿಸಿಕೊಂಡಿದ್ದು, ಪ್ರವಾಸಿಗರ ಹೆಚ್ಚು ಆಕರ್ಷಣೆ ಯುಳ್ಳ ಮಟ್ಟು ಬೀಚ್‌ ಹಾಗೂ ಮಟ್ಟು ಸೇತುವೆಯ ಪ್ರದೇಶವೂ ಮತ್ತಷ್ಟು ಪ್ರಕೃತಿ ಪ್ರೇಮಿಗಳನ್ನು ತನ್ನತ್ತ ಸೆಳೆಯಲಿದೆ. ಆ ಮೂಲಕ ಕೋಟೆ ಗ್ರಾ. ಪಂ. ವ್ಯಾಪ್ತಿಯ ಮಟ್ಟು ಪ್ರದೇಶವು ಉತ್ತಮ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುವ ಕನಸು ನನಸಾಗಬಲ್ಲುದೇ ಎಂಬುದು ಯಕ್ಷ ಪ್ರಶ್ನೆಯಾಗುಳಿದಿದೆ.

ರಾ.ಹೆ. ನೇರ ಸಂಪರ್ಕ
ಮಲ್ಪೆ -ಪಾಂಗಾಳ ಮಟ್ಟು -ಮಟ್ಟು ಭಾಗದ ಜನತೆಗೆ ತುರ್ತು ಸಂದರ್ಭದಲ್ಲಿ ಮಲ್ಪೆ ಬಳಿಯ ಸಂಪರ್ಕ ಸೇತುವೆ ಬಿಟ್ಟರೆ ಮತ್ತೆ ಪಾಂಗಾಳ ಮತ್ತು ಕೈಪುಂಜಾಲು ಮೂಲಕವೇ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಧಿಸುವಂತಾಗಿತ್ತು. ಇದೀಗ ನಿರ್ಮಾಣಗೊಳ್ಳಲಿರುವ ಈ ಮಟ್ಟು ಸೇತುವೆಯು ಘನ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿರುವುದು ಮಾತ್ರವಲ್ಲದೆ ತುರ್ತು ಸಂದರ್ಭಗಳ ಸುರಕ್ಷತೆಯ ದೃಷ್ಟಿಯಿಂದಲೂ ಮಹತ್ತರ ಪಾತ್ರ ವಹಿಸಲಿದೆ. ಏಕೆಂದರೆ ಮಟ್ಟು ಪ್ರದೇಶದಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನೇರ ಸಂಪರ್ಕ ಪಡೆಯಲಿದೆ. ಈ ಭಾಗದ ಜನ ಜೀವನ ಮಟ್ಟವು ಸುಧಾರಿಸಲಿದ್ದು, ವ್ಯಾಪಾರೋದ್ಯಮಕ್ಕೂ ವಿಫುಲವಾದ ಅವಕಾಶಕ್ಕೆ ತೆರೆದುಕೊಳ್ಳಲಿದೆ. ವಾಣಿಜ್ಯ, ಪ್ರವಾಸೋದ್ಯಮ, ಶೈಕ್ಷಣಿಕ, ವ್ಯಾವಹಾರಿಕ, ಕೃಷಿಕರ, ಮೀನುಗಾರರ ಪಾಲಿಗೂ ಈ ನೂತನ ಸಂಪರ್ಕ ಸೇತುವೆಯು ಅನುಕೂಲತೆ ಕಲ್ಪಿಸಲಿದೆ.

30 ದಿನದೊಳಗೆ ಸಂಪೂರ್ಣ
ಸೇತುವೆಗೆ ಸಂಪರ್ಕ ರಸ್ತೆಯ ನಿರ್ಮಾಣಕ್ಕಾಗಿ ಭೂ ಸಂತ್ರಸ್ತರಿಗೆ ಉತ್ತಮ ಭೂ ಧಾರಣೆಯನ್ನು ನೀಡಿ ಭೂಸ್ವಾಧೀನ ಪ್ರಕ್ರಿಯೆಯ ಕೆಲಸ ಕಾರ್ಯ ನಡೆಯಲಿದೆ. ಹಣಕಾಸಿನ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಪ್ರಕ್ರಿಯೆಗಳು ಮುಗಿದ ಬಳಿಕ 150 ಮೀ ಪೂರ್ವ ಪಾರ್ಶ್ವ ಮತ್ತು 150 ಮೀ ಪಶ್ಚಿಮ ಪಾರ್ಶ್ವದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಯೋಜನೆಯನ್ನು ಲೋಕಾರ್ಪಣೆಗೊಳಿಸ ಲಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಪೂರೈಸಿದ ಬಳಿಕದ 30 ದಿನಗಳೊಳಗಾಗಿ ಈ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳ್ಳಲಿದೆ.
– ಎಲ್‌. ರಘು, ಕಾರ್ಯಪಾಲಕ ಅಭಿಯಂತರು, ಕೆ.ಆರ್‌.ಡಿ.ಸಿ.ಎಲ್‌. ಮೈಸೂರು

ರಾ.ಹೆ. ನೇರ ಸಂಪರ್ಕ
ಮಲ್ಪೆ -ಪಾಂಗಾಳ ಮಟ್ಟು -ಮಟ್ಟು ಭಾಗದ ಜನತೆಗೆ ತುರ್ತು ಸಂದರ್ಭದಲ್ಲಿ ಮಲ್ಪೆ ಬಳಿಯ ಸಂಪರ್ಕ ಸೇತುವೆ ಬಿಟ್ಟರೆ ಮತ್ತೆ ಪಾಂಗಾಳ ಮತ್ತು ಕೈಪುಂಜಾಲು ಮೂಲಕವೇ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಧಿಸುವಂತಾಗಿತ್ತು. ಇದೀಗ ನಿರ್ಮಾಣಗೊಳ್ಳಲಿರುವ ಈ ಮಟ್ಟು ಸೇತುವೆಯು ಘನ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿರುವುದು ಮಾತ್ರವಲ್ಲದೆ ತುರ್ತು ಸಂದರ್ಭಗಳ ಸುರಕ್ಷತೆಯ ದೃಷ್ಟಿಯಿಂದಲೂ ಮಹತ್ತರ ಪಾತ್ರ ವಹಿಸಲಿದೆ. ಏಕೆಂದರೆ ಮಟ್ಟು ಪ್ರದೇಶದಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನೇರ ಸಂಪರ್ಕ ಪಡೆಯಲಿದೆ. ಈ ಭಾಗದ ಜನ ಜೀವನ ಮಟ್ಟವು ಸುಧಾರಿಸಲಿದ್ದು, ವ್ಯಾಪಾರೋದ್ಯಮಕ್ಕೂ ವಿಫುಲವಾದ ಅವಕಾಶಕ್ಕೆ ತೆರೆದುಕೊಳ್ಳಲಿದೆ. ವಾಣಿಜ್ಯ, ಪ್ರವಾಸೋದ್ಯಮ, ಶೈಕ್ಷಣಿಕ, ವ್ಯಾವಹಾರಿಕ, ಕೃಷಿಕರ, ಮೀನುಗಾರರ ಪಾಲಿಗೂ ಈ ನೂತನ ಸಂಪರ್ಕ ಸೇತುವೆಯು ಅನುಕೂಲತೆ ಕಲ್ಪಿಸಲಿದೆ.

– ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next