ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸಾಹೇಬರು ಮುತುವರ್ಜಿ ವಹಿಸಿ 25 ಎಕರೆ ಭೂಮಿ ಒದಗಿಸಿದರೆ, ನಗರದಲ್ಲಿ ಮುಂದಿನ ವರ್ಷದೊಳಗೆ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ಮತ್ತು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ನಗರೋತ್ಥಾನ ಅಭಿವೃದ್ಧಿ ಯೋಜನೆ ಹಂತ-3ರ ಅಡಿಯಲ್ಲಿ 2 ಕೋಟಿ ರೂ.ದಲ್ಲಿ ನಗರದ ನೆಹರು ವೃತ್ತದಿಂದ ಗೋಳಾ ರೈಲ್ವೆ ಗೇಟ್‌ವರೆಗಿನ ಆರ್‌ಸಿಸಿ ಚರಂಡಿ, ರಸ್ತೆ ನಿರ್ಮಾಣ
ಕಾಮಗಾರಿ ಅಡಿಗಲ್ಲು ಸಮಾರಂಭ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. 50 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ಯಾವುದೇ ವಸತಿ ಶಾಲೆ ಇಲ್ಲ ಎಂದು ನಗರದ ಮುಖಂಡರು ತಿಳಿಸಿದ್ದಾರೆ. ಈಗಾಗಲೇ ವಾಡಿ ಪಟ್ಟಣದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಿದಂತೆ ನಗರದಲ್ಲಿಯೂ ನಿರ್ಮಾಣ ಮಾಡಲಾಗುವುದು.
ಕಲಬುರಗಿ ಗ್ರಾಮೀಣ ಮತಕ್ಷೇತ್ರ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ನಾನು ಒದಗಿಸಿಕೊಡುತ್ತೇನೆ. ಅಲ್ಲದೇ 25 ಕೋಟಿ ರೂ. ಪ್ರಗತಿ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಯಾವುದೇ ವಿಳಾಸ ಇಲ್ಲದ ಅಲೆಮಾರಿ ಜನಾಂಗದ 71 ಜನರಿಗೆ ಸುಮಾರು 2.5 ಕೋಟಿ ರೂ.ಯಲ್ಲಿ ಸೂರನ್ನು ಒದಗಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಇದನ್ನು ಬಿಟ್ಟು ನಿಮ್ಮ ಜೇಬಿಗೆ ಎರಡು-ಮೂರು ಸಾವಿರ ಹಾಕುವ ಕೆಲಸ ಮಾಡಿಲ್ಲ. ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಡುವ ಕೆಲಸ ಮಾಡುತ್ತಿದ್ದೆವೆ ಎಂದರು. ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ, ವಿಜಯಕುಮಾರ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ಮೆಹಮೂದ ಸಾಹೇಬ, ಭೀಮಣ್ಣ ಸಾಲಿ, ಗಿರೀಶ ಕಂಬಾನೂರ, ಸುಭಾಷ ಪವಾರ, ವೈಜನಾಥ ತಡಕಲ್, ನಾಗರಾಜ ಮೇಲಗಿರಿ
ಇದ್ದರು. ಪೀರಪಾಶಾ ಹೊನಗುಂಟಾ ನಿರೂಪಿಸಿದರು, ಸಾಯಿಬಣ್ಣ ಸುಂಗಲಕರ್ ಸ್ವಾಗತಿಸಿದರು, ಈರಣ್ಣ ಇಟಗಿ ವಂದಿಸಿದರು.