Advertisement

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

06:32 AM Feb 22, 2019 | Team Udayavani |

ಕಲಬುರಗಿ: ಮಹಾನಗರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ ಬಹೃತ್‌ 114.69 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನೆರವೇರಿಸಿದರು.

Advertisement

ನಗರದ ರಾಜಾಪುರ ರಸ್ತೆಯ ಡಾ| ಬಿ.ಆರ್‌. ಅಂಬೇಡ್ಕರ ವಸತಿ ನಿಲಯ ಆವರಣದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಒಟ್ಟು 26 ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ನಡೆಯಿತು.

ಮೈತ್ರಿ ಸರ್ಕಾರದ ರಚನೆಯಾಗಿ ಕೇವಲ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 115 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಐತಿಹಾಸಿಕವಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರ, ಅಧಿಕಾರಿಗಳ ಹಾಗೂ ಜನಪ್ರತಿನಿ ಗಳ ಸಹಕಾರದಿಂದ ಸಾಧ್ಯವಾಗಿದೆ. ಸ್ನಾತಕೋತ್ತರ, ಮೆಟ್ರಿಕ್‌ ನಂತರದ, ಮಹಿಳೆಯರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಸಮಾರಂಭದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.

ಈ ಹಿಂದೆ ತಾವು ಕಂದಾಯ ಖಾತೆ ಸಚಿವರಿದ್ದಾಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ನಿಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಅವುಗಳು 35 ವರ್ಷ ಹಳೆಯದಾಗಿವೆ. ನಿರ್ವಹಣೆಯಿಲ್ಲದೇ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಹೊಸ ವಿದ್ಯಾರ್ಥಿ ನಿಲಯಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು. ವಿದ್ಯಾರ್ಥಿಗಳು ಸಹ ಒಳ್ಳೆಯ ರೀತಿಯಿಂದ ಕಾಪಾಡಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಈಗಾಗಲೇ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ ಅವರಿಗೆ ಪತ್ರ ಬರೆದು ಚರ್ಚಿಸಲಾಗಿದೆ ಎಂದು ಸಂಸದರು ಹೇಳಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ, ಜಿಲ್ಲೆಯಲ್ಲಿ ಅತ್ಯಾಧುನಿಕ ಸವಲತ್ತು ಹೊಂದಿರುವ 5 ವಸತಿ ನಿಲಯಗಳು ನಿರ್ಮಾಣಗೊಳ್ಳುತ್ತಿದೆ. ಇದರಿಂದ 1,200 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಶಾಸಕರಾದ ಎಂ.ವೈ. ಪಾಟೀಲ, ಖನೀಜ್‌ ಫಾತೀಮಾ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮೇಯರ್‌ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಉಪ ಮೇಯರ್‌ ಆಲಿಯಾ ಶಿರೀನ್‌, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ, ಜಿಪಂ ಸಿಇಒ ಡಾ| ಪಿ.ರಾಜಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ಆಲಂ ಖಾನ್‌, ಬಸವರಾಜ ಭೀಮಳ್ಳಿ, ನೀಲಕಂಠರಾವ ಮೂಲಗೆ ಹಾಗೂ ಜಿಪಂ ಮತ್ತು ಮಹಾನಗರ ಪಾಲಿಕೆ ಸದಸ್ಯರು, ಮತ್ತಿತರರು ಪಾಲ್ಗೊಂಡಿದ್ದರು.

ಬಿಜೆಪಿ ಪಕ್ಷದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಗ್ರಾಮೀಣ ಕ್ಷೇತ್ರದ ಬಸವರಾಜ ಮತ್ತಿಮೂಡ, ಎಂಎಲ್‌ಸಿ ಬಿ.ಜಿ.ಪಾಟೀಲ ಸಮಾರಂಭಕ್ಕೆ ಗೈರಾಗಿದ್ದರು.

ಹೈ-ಕ ಭಾಗಕ್ಕೆ ಧರ್ಮಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರಗಳಿಂದ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಿದ್ದರು. ಕಲಬುರಗಿಯಲ್ಲಿ ಈಗ ಸಮಾಜ ಕಲ್ಯಾಣ ಇಲಾಖೆ ಪ್ರಿಯಾಂಕ್‌ ಖರ್ಗೆ 114.69 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತಂದು ಇತಿಹಾಸ ಸೃಷ್ಠಿಸಿದ್ದಾರೆ.
 ಎಂ.ವೈ. ಪಾಟೀಲ, ಶಾಸಕರು, ಅಫಜಲಪುರ

Advertisement

Udayavani is now on Telegram. Click here to join our channel and stay updated with the latest news.

Next