Advertisement

ಸಿಇಒ ವರ್ಗಕ್ಕೆ ಜಿಪಂ ಒಕ್ಕೊರಲಿನ ನಿರ್ಣಯ

12:17 PM Jul 08, 2018 | Team Udayavani |

ಕಲಬುರಗಿ: ಜಿಲ್ಲಾ ಪಂಚಾಯತ್‌ನಲ್ಲಿ ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹೆಪ್ಸಿಬಾರಾಣಿ ಕೋರ್ಲಪಾಟಿ ಅವರ ಸೇವೆ ನಮಗೆ ಬೇಡ ಎಂದು ನಿರ್ಣಯ ತೆಗೆದುಕೊಂಡಿದ್ದರೂ ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ನಂತರ ನಡೆದ ಸಭೆಯಲ್ಲೂ ಅವರ ಸೇವೆ ಬೇಡವೇ ಬೇಡ ಎಂದು ಏಕ ಸಾಲಿನ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.

Advertisement

ಕಳೆದ ಮಾರ್ಚ್‌ 3ರಂದು ನಡೆದ 10ನೇ ಸಾಮಾನ್ಯ ಸಭೆಯಲ್ಲೂ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಸೇವೆ ಬೇಡ ಎಂದು ಸಿಇಒ ಹಾಜರಿದ್ದ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವನ್ನು ಸರ್ಕಾರಕ್ಕೆ ಕಳಿಸದ ಹಿನ್ನೆಲೆಯಲ್ಲಿ ಶನಿವಾರ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ 11ನೇ ಸಾಮಾನ್ಯ ಸಭೆಯಲ್ಲೂ ಮತ್ತೂಮ್ಮೆ ನಿರ್ಣಯ ಕೈಗೊಂಡು ಸೋಮವಾರವೇ ಸರ್ಕಾರಕ್ಕೆ ನಿರ್ಣಯ ಕಳುಹಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಶಿವಾನಂದ ಪಾಟೀಲ ಮರತೂರ, ಶಿವರಾಜ ಪಾಟೀಲ ರದ್ದೇವಾಡಗಿ, ಶರಣಗೌಡ ಪಾಟೀಲ, ಶಾಂತಪ್ಪ ಕೂಡಲಗಿ, ಸಂಜೀವನ್‌ ಯಾಕಾಪುರ, ರೇವಣಸಿದ್ದಪ್ಪ ಸಂಕಾಲಿ,  ವಿಜಯಲಕ್ಷ್ಮೀ ಹಾಗರಗಿ ಮಾತನಾಡಿ, ಕೆಲಸ ಮಾಡದೇ ಬರಿ ಸಬೂಬು ಹೇಳುತ್ತಾ ಕಾಲ ಕಳೆಯುತ್ತಿರುವ, ಸರ್ವಾಧಿಕಾರದ ಧೋರಣೆ ತಳೆದಿರುವ, ಸದಸ್ಯರಿಗೆ ಕಿಂಚಿತ್ತೂ ಗೌರವ ಕೊಡದ ಸಿಇಒ ಹೆಪ್ಸಿಬಾ ರಾಣಿ ಅವರ ಸೇವೆ ಬೇಡವೇ ಬೇಡ. ಈ ವಿಷಯದಲ್ಲಿ ರಾಜಿಯೇ ಇಲ್ಲ. ಸಭೆ ಕುರಿತಾಗಿ ಅವರೇ ನೊಟೀಸ್‌ ನೀಡಿ, ಈಗ ಅವರೇ ಇಲ್ಲದಿರುವುದು ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ಇಂತಹ ಅಧಿಕಾರಿಗಳು ಬೇಡ ಎಂದು ಅಭಿಪ್ರಾಯ
ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯರೆಲ್ಲರೂ ಪಕ್ಷ ಬೇಧ ಮರೆತು ಬೆಂಬಲಿಸಿದರು. ಕೊನೆಗೆ ನಿರ್ಣಯ ಕೈಗೊಂಡು ಇಂದೇ ನಡಾವಳಿ ಅಂಗೀಕರಿಸಿ ಸೋಮವಾರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕೆಂದು ಸದಸ್ಯರು ಸಲಹೆ ನೀಡಿದರು. ಇದಕ್ಕೆ ಜಿ.ಪಂ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದಸ್ಯ ಸಿದ್ಧರಾಮ ಪ್ಯಾಟಿ ಮಾತನಾಡಿ, ಸಿಇಒ ವರ್ಗಾವಣೆ ಕುರಿತಾದ ನಿರ್ಣಯದ ಜತೆಗೆ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಹಾಗೂ ಆಗಿರುವ ಅವ್ಯವಹಾರಗಳ ಜತೆಗೆ ಅನುದಾನ ಲ್ಯಾಪ್ಸ್‌ ಆಗಿರುವ ಕುರಿತು ಸಮಗ್ರ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಮತ್ತಿತರರು ಹಾಜರಿದ್ದರು. 

ಸಭೆಗೂ ಮುಂಚೆ ಸದಸ್ಯರ ಸಭೆ: ಸಿಇಒ ಅವರು ಹೇಳದೆ ರಜೆ ಹಾಕಿ ಹೋಗಿದ್ದರಿಂದ ಸಭೆ ನಡೆಸುವ ಕುರಿತಾಗಿ ಹಾಗೂ ಸಭೆಯಲ್ಲಿ ಚರ್ಚಿಸುವ ವಿಷಯ ಕುರಿತಾಗಿ ಆಡಳಿತಾರೂಢ ಹಾಗೂ ವಿಪಕ್ಷ ಸದಸ್ಯರು ಸಭೆ ಸೇರಿ ನಿರ್ಣಯಿಸಿದರು. ಮುಖ್ಯ ಯೋಜನಾಧಿಕಾರಿಗಳಿಗೆ ಸಾಮಾನ್ಯ ಸಭೆ ನಡೆಸುವ ಅಧಿಕಾರವನ್ನು ಇಲಾಖೆ ಕಾರ್ಯದರ್ಶಿಗಳು ನೀಡಿದ್ದಾರೆ. ಆದರೆ ಸಭೆ ನಡೆಸದೇ ಸಿಇಒ ಅವರ ವರ್ಗಾವಣೆಯ ಏಕೈಕ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮಾತ್ರ ಸಭೆ ನಡೆಸೋಣ ಎಂಬುದಾಗಿ ನಿರ್ಧಾರ ಕೈಗೊಂಡು, ಸಭೆಯಲ್ಲಿ ಕಾರ್ಯಗತಗೊಳಿಸಿದರು.

Advertisement

ಮುಂದಿನ ಸಭೆ ಜು. 23ಕ್ಕೆ ನಿಗದಿ ಸಿಇಒ ಅವರ ಸೇವೆ ಬೇಡ ಎನ್ನುವ ನಿರ್ಣಯ ತೆಗೆದುಕೊಂಡನಂತರ ಸಭೆಯನ್ನು ಜುಲೈ 23ಕ್ಕೆ ಮುಂದೂಡಲಾಗಿದೆ ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಪ್ರಕಟಿಸಿದರು. ಮುಂದೂಡಿಕೆಯಾದ ಸಭೆಯ ದಿನಾಂಕವನ್ನು ಈಗಲೇ ಪ್ರಕಟಿಸುವಂತೆ ಸದಸ್ಯರು ಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ದಿನಾಂಕ ಪ್ರಕಟಿಸಿ ಸಭೆಯ ಮುಂದೂಡಿಕೆಯ ದಿನಾಂಕ ಪ್ರಕಟಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next