Advertisement

ವಾಡಿಗೆ ಪ್ರವಾಸಿ ಮಂದಿರ ಭಾಗ್ಯ

10:44 AM Mar 02, 2018 | Team Udayavani |

ವಾಡಿ: ಸಿಮೆಂಟ್‌ ನಗರಿ ವಾಡಿ ಪಟ್ಟಣಕ್ಕೆ ಪ್ರವಾಸಿ ಮಂದಿರ ಭಾಗ್ಯ ಒದಗಿ ಬಂದಿದ್ದು, ಕಾಮಗಾರಿ ಭರದಿಂದ ಸಾಗಿದೆ.
ಸರಕಾರಿ ಕಾಲೇಜು ಕಟ್ಟಡ ಕಟ್ಟಲು ಜಾಗವಿಲ್ಲ ಎಂಬ ಆರೋಪದ ಮಧ್ಯೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರವಾಸಿ ಮಂದಿರ ನಿರ್ಮಾಣಕ್ಕೆ ಜಾಗ ಹುಡುಕಿ ತೆಗೆದಿದ್ದು, ಕೇವಲ ಆರೇ ತಿಂಗಳಲ್ಲಿ ಕಟ್ಟಡ ಎದ್ದು ನಿಲ್ಲಲಿದೆ.

Advertisement

ಪಟ್ಟಣದ ರೆಸ್ಟ್‌ ಕ್ಯಾಂಪ್‌ ತಾಂಡಾ ಬಡಾವಣೆಯಲ್ಲಿರುವ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಲೋಕೋಪಯೋಗಿ (ಪಿಡಬ್ಯುಡಿ) ಇಲಾಖೆಗೆ ಸೇರಿದ್ದ 100*100 ಅಡಿ ಜಾಗವನ್ನು ಪ್ರವಾಸಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಅಧಿಕಾರಿಗಳು, ಆ ಜಾಗದಲ್ಲಿದ್ದ ಇಲಾಖೆಗೆ ಸೇರಿದ್ದ ಪಾಳು ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬೆಳೆಯುತ್ತಿರುವ ಪಟ್ಟಣಕ್ಕೆ ಪ್ರವಾಸಿ ಮಂದಿರದ ಅಗತ್ಯತೆ ಅರಿತ ಸಚಿವ ಪ್ರಿಯಾಂಕ್‌ ಖರ್ಗೆ ಅವರು 2016ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎನ್ನಲಾಗಿದ್ದು, ಮಂಜೂರಾಗಿರುವ 2 ಕೋಟಿ ರೂ. ಅನುದಾನದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗುತ್ತಿದೆ.

ಪಟ್ಟಣದಲ್ಲಿ ಸರಕಾರಿ ಕಾಲೇಜು, ಪ್ರವಾಸಿ ಮಂದಿರ, ಕ್ರೀಡಾಂಗಣ, ಗ್ರಂಥಾಲಯ ಹಾಗೂ ಕನ್ಯಾ ಪ್ರೌಢ ಶಾಲೆಯಂತಹ ಪ್ರಮುಖ ಸಾರ್ವಜನಿಕ ಬೇಡಿಕೆಗಳಲ್ಲಿ ಸದ್ಯ ಪ್ರವಾಸಿ ಮಂದಿರ ಬೇಡಿಕೆ ಈಡೇರಿದಂತಾಗಿದೆ. 

ಪಟ್ಟಣಕ್ಕೆ ಭೇಟಿ ನೀಡುವ ಪ್ರವಾಸಿ ಅತಿಥಿಗಳಿಗೆ ಉಳಿದುಕೊಳ್ಳಲು ಅನುಕೂಲತೆಯಿಲ್ಲ ಎಂಬುದು ಗಮನಕ್ಕೆ ಬಂದಿದ್ದರಿಂದ, ಸರಕಾರಕ್ಕೆ ಪ್ರವಾಸಿ ಮಂದಿರ ಕಟ್ಟಡದ ಬೇಡಿಕೆ ಸಲ್ಲಿಸಲಾಗಿತ್ತು. ಈಗ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ದೊರೆತಿದೆ. ವಾಡಿಯಲ್ಲಿ ಸರಕಾರಿ ಕಾಲೇಜು ಕಟ್ಟಡ ನಿರ್ಮಿಸಲು 6 ಎಕರೆ ಜಮೀನು ಖರೀದಿಗೆ ಚಿಂತಿಸಲಾಗಿದೆ. ಭೂಮಿ ಕೊಡಲು ರೈತರು ಮುಂದೆ ಬರುತ್ತಿಲ್ಲ.
 ಪ್ರಿಯಾಂಕ್‌ ಖರ್ಗೆ, ಪ್ರವಾಸೋದ್ಯಮ ಹಾಗೂ ಐಟಿಬಿಟಿ ಖಾತೆ ಸಚಿವರು

ಪಿಡಬ್ಲ್ಯುಡಿ ಸುಮಾರು ಎರಡು ಕೋಟಿ ರೂ. ಅನುದಾನದಡಿ ವಾಡಿಯಲ್ಲಿ ಪ್ರವಾಸಿ ಮಂದಿರ ನಿರ್ಮಿಸಲಾಗುತ್ತಿದೆ. ಎರಡು ವರ್ಷದ ಹಿಂದೆ ಸಚಿವರು ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಸರಕಾರದ ಆದೇಶದಂತೆ ಸುಸಜ್ಜಿತ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ನೂತನ ಪ್ರವಾಸಿ ಮಂದಿರ ಸಾರ್ವಜನಿಕ ಸೇವೆಗೆ ತೆರೆದಿಡಲಾಗುವುದು. 
 ಹಣಮಂತ ರೆಡ್ಡಿ. ಎಇಇ, ಪಿಡಬ್ಲ್ಯುಡಿ ಚಿತ್ತಾಪುರ.

Advertisement

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next