ಅನಂತ್‌ನಾಗ್ ಅಭಿನಯದ “ಉದ್ಭವ’ ಚಿತ್ರ ನಿರ್ದೇಶಿಸಿದ್ದ ಕೂಡ್ಲು ರಾಮಕೃಷ್ಣ, “ಮತ್ತೆ ಉದ್ಭವ’ ಸಿನಿಮಾ ಮೂಲಕ ಸುದ್ದಿಯಾಗಿರುವುದು ಗೊತ್ತೇ ಇದೆ. ಈಬಾರಿ ಅನಂತ್‌ನಾಗ್ ಬದಲಾಗಿ ರಂಗಾಯಣ ರಘು ಜೊತೆ ಕೆಲಸ ಮಾಡಿರುವ ಕೂಡ್ಲು ರಾಮಕೃಷ್ಣ ಚಿತ್ರವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. 1990 ರಲ್ಲಿ ಬಂದ “ಉದ್ಭವ’ ಯಶಸ್ವಿಯಾಗಿತ್ತು. ಈಗ “ಮತ್ತೆ ಉದ್ಭವ’ ಕೂಡ ಅದೇ ಹಾದಿಯಲ್ಲಿ ಸಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಇದೂ ಕೂಡ ಹಾಸ್ಯಮಯವಾಗಿಯೇ ಸಾಗುವ ಕಥೆ ಹೊಂದಿದೆ. ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ಎಲ್ಲೇ ಹೋದರೂ, “ಉದ್ಭವ’ ರೀತಿಯ ಚಿತ್ರ ಮಾಡಿ ಅಂತಾನೇ ಕೇಳುತ್ತಿದ್ದರಂತೆ. ಕೊನೆಗೆ ಎಲ್ಲರ ಬೇಡಿಕೆಗೆ ಸ್ಪಂದಿಸಿ, ಕಥೆ ಬರೆದು “ಮತ್ತೆ ಉದ್ಭವ’ ಮಾಡಿದ್ದಾರಂತೆ. ಅನಂತ್‌ನಾಗ್ ಅವರ ಡೇಟ್ಸ್ ಸಮಸ್ಯೆ ಆಗಿದ್ದರಿಂದ ರಂಗಾಯಣ ರಘು ಅವರನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ. “ಉದ್ಭವ’ ಒಂದು ಕ್ಲಾಸ್ ಸಿನಿಮಾ ಆಗಿತ್ತು.
ಇಲ್ಲಿ ಡ್ಯಾನ್ಸ್, ಫೈಟ್ಸ್, ಕಾಮಿಡಿ ಎಲ್ಲವನ್ನೂ ಒಳಗೊಂಡು ಮಾಸ್ ಸಿನಿಮಾ ಎಂಬುದು ಅವರ ಮಾತು. ಪಾತ್ರಗಳೆಲ್ಲವೂ ಹಾಗೆಯೇ ಇದೆಯಾದರೂ, ಕಲಾವಿದರು ಮಾತ್ರ ಬದಲಾಗಿದ್ದಾರೆ. “ಉದ್ಭವ’ದಲ್ಲಿ ದೇವರು ಸುದ್ದಿಯಾಗಿದ್ದರೆ, ಇಲ್ಲಿ ಅದಕ್ಕಿಂತಲೂ ದೊಡ್ಡದು ಇರಲಿದೆ. ಅದರಲ್ಲೂ ಪ್ರಸ್ತುತ ರಾಜಕೀಯ ವ್ಯವಸ್ಥೆ ಕುರಿತಂತೆ ಇಲ್ಲಿ ಹೇಳಲಾಗಿದೆಯಂತೆ. ಅಪ್ಪ ಕಾರ್ಪೋರೇಷನ್ ಲೆವೆಲ್‌ನಲ್ಲಿದ್ದರೆ, ಮಗ ವಿಧಾನಸೌಧ ಸಂಪರ್ಕ ಹೊಂದಿದ ಕಿಲಾಡಿ.
ಇಲ್ಲಿ ಪ್ರಮೋದ್ ಹಿರಿಯ ಮಗನಾಗಿ ಕಾಣಿಸಿಕೊಂಡರೆ, ಮಂಡ್ಯ ರವಿ ಎರಡನೇ ಮಗ. ಮಿಲನ ನಾಗರಾಜ್ ಅವರು ಪರಿಸರಪ್ರೇಮಿಯಾಗಿಯೂ, ರಾಜಕಾರಣಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಮೋಹನ್ ಶೃಂಗಾರ ಸ್ವಾಮಿಯಾಗಿದ್ದು, ಚಿತ್ರಕ್ಕೆ ಮಾತುಗಳನ್ನೂ ಪೋಣಿಸಿದ್ದಾರೆ. ಮೋಹನ್ ಅವರ ಭಕ್ತೆಯಾಗಿ ಶುಭರಕ್ಷಾ ನಟಿಸಿದ್ದಾರೆ. ಚಿತ್ರದಲ್ಲಿ ಸುಧಾಬೆಳವಾಡಿ, ಅವಿನಾಶ್, ಗಿರೀಶ್‌ಭಟ್, ಚೇತನ್, ನರೇಶ್, ಶಂಕರ್ ಅಶ್ವಥ್ ಇತರರು ನಟಿಸಿದ್ದಾರೆ. ಜಯಂತ್ ಕಾಯ್ಕಿಣಿ ಹಾಗು ಪ್ರಹ್ಲಾದ್ ಗೀತೆ ರಚಿಸಿದ್ದು, ವಿ. ಮನೋಹರ್ ಸಂಗೀತವಿದೆ.
ಮೋಹನ್ ಛಾಯಾಗ್ರಹಣ ಮಾಡಿದರೆ, ಕೆಂಪರಾಜು ಸಂಕಲನವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ತ್ರಿಭುವನ್ ನೃತ್ಯ ಸಂಯೋಜಿಸಿದ್ದಾರೆ. ಇತ್ತೀಚೆಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗು ರಿಷಭ್‌ಶೆಟ್ಟಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿತ್ಯಾನಂದಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿಯಲ್ಲಿ “ಮತ್ತೆ ಉದ್ಭವ’ ಪ್ರೇಕ್ಷಕರ ಮುಂದೆ ಬರಲಿದೆ.