Advertisement

ಸದ್ದಿಲ್ಲದೇ ಇಹಲೋಕ ತ್ಯಜಿಸಿದ ಮಟ್ಕಾ ಕಿಂಗ್ ರತನ್ ಲಾಲ್ ಖತ್ರಿ, ಏನಿದು ಮಟ್ಕಾ?

05:17 PM May 15, 2020 | Nagendra Trasi |

ಮುಂಬೈ: ಮಟ್ಕಾ, ಓಸಿ ಕಳೆದ ಐದಾರು ದಶಕಗಳ ಕಾಲ ಇದು ಅತ್ಯಂತ ಜನಪ್ರಿಯವಾಗಿತ್ತು. ಆದರೆ ಮಟ್ಕಾ ಸಾಮ್ರಾಜ್ಯದ ದೊರೆ ಯಾರು? ಈ ದಂಧೆಯ ಹಿಂದೆ ಇದ್ದವರು ಯಾರು, ಓಪನ್, ಕ್ಲೋಸ್ ಅಂಕಗಳ ಈ ಆಟದಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ ಮಟ್ಕಾ ಕಿಂಗ್ ರತನ್ ಲಾಲ್ ಖತ್ರಿ ಇತ್ತೀಚೆಗೆ (ಮೇ9) ಸದ್ದಿಲ್ಲದೇ ಇಹಲೋಕ ತ್ಯಜಿಸಿದ್ದಾರೆ. ಹಳ್ಳಿ, ಹಳ್ಳಿಯಲ್ಲಿಯೂ ಮಟ್ಕಾ ಜನಪ್ರಿಯವಾಗಿತ್ತು. ಹೀಗೆ ಒಂದು ಕಾಲದ ಅನಭಿಷಕ್ತ ದೊರೆಯಾಗಿ ಬೆಳೆದ ರತನ್ ಲಾಲ್ ಖತ್ರಿ ಬಗ್ಗೆ ಪತ್ರಕರ್ತ, ಲೇಖಕ ವಿವೇಕ್ ಅಗರ್ವಾಲ್ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

Advertisement

ಬ್ರೈನ್ ಸ್ಟ್ರೋಕ್ ನಿಂದ ಹಾಸಿಗೆ ಹಿಡಿದಿದ್ದ ರತನ್ ಲಾಲ್ ಖತ್ರಿ ಮುಂಬೈನ ಮಟಕಾ ಕಿಂಗ್ ಎಂದೇ ಹೆಸರಾಗಿದ್ದರು. ಮೇ 9ರಂದು ದಕ್ಷಿಣ ಮುಂಬೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.

1962ರಲ್ಲಿ ಪತ್ರಕರ್ತರನ್ನು ಮುಂಬೈನ ಝವೇರಿ ಬಝಾರ್ ಗೆ ಕರೆಯಿಸಿಕೊಂಡು ಮೊದಲಿಗೆ ಸ್ನ್ಯಾಕ್ ಶಾಪ್ ಗೆ ಕರೆದೊಯ್ದು ಉಪಚರಿಸಿದ್ದರು. ನಂತರ ಮತ್ತೊಂದು ಅಂಗಡಿಗೆ ಕರೆದೊಯ್ದಿದ್ದರು. ಅಲ್ಲಿ ಟೇಬಲ್ ಮೇಲೆ ಮಡಕೆಯೊಂದನ್ನು ಇಡಲಾಗಿತ್ತು. ಅದರ ನಂತರ ಇಸ್ಪೀಟ್ ಕಾರ್ಡ್ಸ್ ಕೂಡ ಇರಿಸಿದ್ದರು.

ರತನ್ ಖತ್ರಿ ಡೆಕ್ ಮೇಲೆ ಇದ್ದ ಜಾಕ್, ಕಿಂಗ್ ಮತ್ತು ಕ್ವೀನ್ ಕಾರ್ಡ್ಸ್ ಅನ್ನು ಹೊರತೆಗೆದು, ಉಳಿದ ಎಲ್ಲಾ ಕಾರ್ಡ್ಸ್ ಅನ್ನು ಮಡಕೆಯೊಳಗೆ ಹಾಕಿದ್ದರು. ನಂತರ ಪತ್ರಕರ್ತರ ಬಳಿ ನಿಮ್ಮ ಕೈಯನ್ನು ಮಡಕೆಯೊಳಗೆ ಹಾಕಿ ಒಂದೊಂದು ಕಾರ್ಡ್ ಹೊರ ತೆಗೆಯಿರಿ ಎಂದು ಹೇಳಿದ್ದರಂತೆ!

ಈ ಕಾರ್ಡ್ ನಂಬರ್ ಗಳನ್ನು ಆ ದಿನದ ಅದೃಷ್ಟ ಸಂಖ್ಯೆ ಎಂದು ಘೋಷಿಸಲಾಯಿತು. ನಂತರ ಖತ್ರಿ, ಇವತ್ತಿನಿಂದ ಇದರ ಹೊಸ ಹೆಸರು “ಮಟಕಾ” ಆಗಿದೆ ಎಂದು ಹೇಳಿರುವುದಾಗಿ ಅಗರ್ವಾಲ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸುಮಾರು 60 ವರ್ಷದ ಹಿಂದೆ ಖತ್ರಿ ಜತೆ ಝೇರಿ ಬಝಾರ್ ಗೆ ತೆರಳಿದ್ದ ಪತ್ರಕರ್ತರೊಬ್ಬರು ಮಟಕಾ ದಂಧೆಯ ರೋಚಕ ವಿಷಯಗಳನ್ನು ಹೊರಹಾಕಿರುವುದನ್ನು ಕೇಳಿದ್ದೇನೆ. ಜನರು ಯಾವ ನಂಬರ್ ಗೆಲ್ಲಬಹುದು ಎಂದು ಬೆಟ್ ಕಟ್ಟುತ್ತಿದ್ದರೋ ಅಂದು ಮಡಕೆಯಿಂದ ಜಯಶಾಲಿ ನಂಬರ್ ಅನ್ನು ತೆಗೆದು ಬುಕ್ ನಲ್ಲಿ ಬರೆದಿಟ್ಟುಕೊಳ್ಳುವ ಮೂಲಕ ಆ ದಿನದ ಮಟ್ಕಾ ಮುಕ್ತಾಯವಾಗುತ್ತಿತ್ತು ಎಂದು ತಿಳಿಸಿದ್ದಾರೆ.

Advertisement

ಎರಡಂಕಿಯಲ್ಲಿ ಓಪನ್ ಅಥವಾ ಕ್ಲೋಸ್ ನಂಬರ್ ಬಂದರೆ, ಕಟ್ಟಿದ ಒಂದು ರೂಪಾಯಿಗೆ 7 ರೂಪಾಯಿ, ಡಬಲ್ ಡಿಜಿಟ್ ನಂಬರ್ ಹೊಂದಾಣಿಕೆಯಾದರೆ 70 ರೂಪಾಯಿ, ನಂತರ ಒಂದು ರೂಪಾಯಿಗೆ 70 ರೂಪಾಯಿ, ನೂರು ರೂಪಾಯಿಗೆ 700 ರೂಪಾಯಿ ಜಾಕ್ ಪಾಟ್ ಹೊಡೆಯುತ್ತಿದ್ದರು. ಮಟಕಾ ದಂಧೆಯ ಮೂಲಕವೇ ಸಾವಿರಾರ ಜನರ ಹಣದ ಭವಿಷ್ಯ ನಿರ್ಧರಿಸುತ್ತಿದ್ದ ಖತ್ರಿ ಅಜ್ಞಾತರಾಗಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಝವೇರಿ ಬಜಾರ್ ನಲ್ಲಿ ಬಿಳಿ ಕುರ್ತಾ, ಫೈಜಾಮಾ ಹಾಕಿಕೊಂಡು ಕುತ್ತಿಗೆಗೆ ಕಪ್ಪು ನೂಲನ್ನು ಕಟ್ಟಿಕೊಳ್ಳುತ್ತಿದ್ದ ರತನ್ ಲಾಲ್ ಸ್ಫುರದ್ರೂಪಿ ವ್ಯಕ್ತಿಯಾಗಿದ್ದರು. ಅಂದಿನ ಬಾಂಬೆಯಲ್ಲಿ ಮಟ್ಕಾ ನಡೆಸುತ್ತಿದ್ದ ದಿನಗಳಲ್ಲಿ ಆ ದಿನ ಯಾವ ಅದೃಷ್ಟ ಸಂಖ್ಯೆ ಬಂದಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಲು ಬುಕ್ಕಿಗಳು 9ಗಂಟೆ ರಾತ್ರಿಗೆ ಟ್ರಂಕ್ ಕಾಲ್ ಮಾಡಿ ತಿಳಿದುಕೊಳ್ಳುತ್ತಿದ್ದರು.

ಮಟಕಾ ಎಂಬ ಕಾನೂನು ಬಾಹಿರ ಜುಗಾರಿಯನ್ನು ಹುಟ್ಟುಹಾಕಿದ್ದು ಇಬ್ಬರು. ಖತ್ರಿ ಮೂಲತಃ ಕರಾಚಿಯಿಂದ ಆಗಮಿಸಿದ್ದರು. ಕಲ್ಯಾಣ್ ಜೀ ಗಾಲಾ ಗುಜರಾತ್ ನ ಕಛ್ ಪ್ರದೇಶದಿಂದ ಬಾಂಬೆಗೆ ಬಂದವರು. ಕಲ್ಯಾಣ್ ಜೀ ಗಾಲಾ ನಂತರ ತಮ್ಮ ಸರ್ ನೇಮ್ ಅನ್ನು ಭಗತ್ (ಭಕ್ತ್) ಎಂದು ಬದಲಾಯಿಸಿಕೊಂಡಿದ್ದರು. ಬಾಂಬೆಯಲ್ಲಿ ಮೊತ್ತ ಮೊದಲಿಗೆ ಮಟ್ಕಾ ಜೂಜು ಆರಂಭಿಸಿದ್ದು ರತನ್ ಲಾಲ್ ಖತ್ರಿ, ನಂತರ 1962ರಲ್ಲಿ ಕಲ್ಯಾಣ್ ಜೀ ಭಗತ್ ವರ್ಲಿ ಮಟ್ಕಾ ಆರಂಭಿಸಿದ್ದರು. 1964ರಲ್ಲಿ ಖತ್ರಿ ನ್ಯೂ ವರ್ಲಿ ಮಟ್ಕಾ ಶುರು ಮಾಡಿದ್ದರು. ಕಲ್ಯಾಣ್ ಭಗತ್ ಮಟ್ಕಾ ವಾರದ ಏಳು ದಿನಗಳಲ್ಲಿಯೂ ನಡೆಯುತ್ತಿದ್ದರೆ, ಖತ್ರಿ ಮಟ್ಕಾ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ನಡೆಯುತ್ತಿತ್ತು.

1980-90ರ ದಶಕದಲ್ಲಿ ಮಟ್ಕಾ ವ್ಯವಹಾರ ಅತ್ಯಂತ ಬಿರುಸಿನ ವಹಿವಾಟಿಗೆ ಸಾಕ್ಷಿಯಾಗಿತ್ತು. ಪ್ರತಿ ತಿಂಗಳು ಬರೋಬ್ಬರಿ 500 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಮುಂಬೈ ಪೊಲೀಸರು ಮಟ್ಕಾ ದಂಧೆ ನಿಲ್ಲಿಸಲು ದಾಳಿ ನಡೆಸಿದ್ದರು. ಆದರೆ ಮಟ್ಕಾ ದಂಧೆಯವರು ಅದನ್ನು ಮುಂಬೈಯ ಹೊರಭಾಗಕ್ಕೆ ಸ್ಥಳಾಂತರಿಸಿದ್ದರು. ಹೀಗೆ ರತನ್ ಮಟ್ಕಾ ದಿನಂಪ್ರತಿ ವಹಿವಾಟು ಒಂದು ಕೋಟಿ ರೂಪಾಯಿ ಆಗಿತ್ತಂತೆ.

Advertisement

Udayavani is now on Telegram. Click here to join our channel and stay updated with the latest news.

Next