ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್ ಥ್ರಿಲ್ಲರ್ ನಲ್ಲಿ ಶಿಖರ್ ಧವನ್ ಪಡೆ ಮೂರು ರನ್ ಅಂತರದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ತಂಡ 305 ರನ್ ಗಳಿಸಲಷ್ಟೇ ಶಕ್ತವಾಯಿತು.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಸಂಜು ಸಾಮ್ಸನ್ ಬ್ಯಾಟಿಂಗ್ ನಲ್ಲಿ ನಿರಾಶೆ ಮೂಡಿಸಿದರು. ಆದರೆ ವಿಕೆಟ್ ಕೀಪರ್ ಆಗಿ ಸಂಜು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಇದನ್ನೂ ಓದಿ:ನಾನೂ ಸಿಎಂ ಆಗ್ಬೇಕು.. .; ಕಾಂಗ್ರೆಸ್ ಗೆ ತುಟ್ಟಿಯಾಗುತ್ತಿದೆಯೇ ಸಿಎಂ ಆಕಾಂಕ್ಷಿಗಳ ಪಟ್ಟಿ
ಕೊನೆಯ ಓವರ್ ನಲ್ಲಿ ಪಂದ್ಯ ಗೆಲುವಿಗೆ ವೆಸ್ಟ್ ಇಂಡೀಸ್ ಗೆ 15 ರನ್ ಬೇಕಿತ್ತು. ಸಿರಾಜ್ ಎಸೆದ ಆ ಓವರ್ ನ ಮೊದಲ ನಾಲ್ಕು ಎಸೆತಗಳಲ್ಲಿ ಏಳು ರನ್ ಬಂದಿತ್ತು. ಐದನೇ ಎಸೆತ ಹಾಕಿದ ಸಿರಾಜ್ ವೈಡ್ ಎಸೆದರು. ತುಂಬಾ ಅಗಲವಾಗಿದ್ದ ಈ ಚೆಂಡನ್ನು ಸಂಜು ಸ್ಯಾಮ್ಸನ್ ಫುಲ್ ಲೆಂತ್ ಡೈವ್ ಹಾಕಿ ತಡೆದರು. ಹೀಗಾಗಿ ಬಹುಮೂಲ್ಯ ನಾಲ್ಕು ರನ್ ಉಳಿಸಿದರು. ನಂತರ ಭಾರತ ತಂಡ ಮೂರು ರನ್ ಅಂತರದ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ ಆ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.