ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2019ರ ಆವೃತ್ತಿಯ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ಎಂಬಾತನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ನೇತೃತ್ವದ ತನಿಖಾ ತಂಡ, ಕಳೆದ ಎರಡು ದಿನಗಳಿಂದ ಬುಕ್ಕಿ ಜತಿನ್‌ನನ್ನು ತೀವ್ರ ವಿಚಾರಣೆ ನಡೆಸಿ ಇಡೀ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದೆ.
ಸಿಸಿಬಿ ಕಚೇರಿಯಲ್ಲಿ ತನಿಖಾ ತಂಡ ಸೋಮವಾರ ಎಂಟು ಗಂಟೆಗಳ ಕಾಲ ಜತೀನ್‌ನನ್ನು ತೀವ್ರ ವಿಚಾರಣೆ ನಡೆಸಿದ್ದು ಹೇಳಿಕೆ ದಾಖಲಿಸಿಕೊಂಡಿದೆ. ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಪಿಎಲ್ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಜತಿನ್ ಪ್ರಮುಖ ಪಾತ್ರ ವಹಿಸಿದ್ದ. ಇತರೆ ಬುಕ್ಕಿಗಳ ಸಂಪರ್ಕ ಇಟ್ಟುಕೊಂಡು ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಡೆಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ. ಆತನ ವಿಚಾರಣೆ ಪೂರ್ಣಗೊಂಡ ಬಳಿಕ ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಲೆಮರೆಸಿಕೊಂಡು ವಿದೇಶಕ್ಕೆ ಹಾರಿದ್ದ ದಿಲ್ಲಿ ಮೂಲದ ಬುಕ್ಕಿ ಜತಿನ್ ವಿರುದ್ಧ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು. ರವಿ ವಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಮಾಹಿತಿ ಗೊತ್ತಾದ ಬಳಿಕ ಸಿಸಿಬಿ ಪೊಲೀಸರು ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.