ದಾವಣಗೆರೆ: ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬದ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ತಾಕತ್ತು ಇದ್ದರೆ ಅವರೆಲ್ಲ ಬಹಿರಂಗವಾಗಿ ಬಂದು ದೇವಸ್ಥಾನದ ಘಂಟೆ ಹೊಡೆದು ಹೇಳಲಿ” ಎಂದು ಬಿಜೆಪಿ ನಾಯಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬುಧವಾರ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಖಾಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ. ನಾವು ಯಾವತ್ತೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಮೋದಿ- ಅಮಿತ್ ಶಾ, ಯಡಿಯೂರಪ್ಪ ವಿರುದ್ಧವೂ ಮಾತನಾಡಿಲ್ಲ. ಯಡಿಯೂರಪ್ಪನವರು ನಮಗೆ ಯಾವುದೇ ಎಚ್ಚರಿಕೆಯೂ ನೀಡಿಲ್ಲ’ ಎಂದರು.
‘ನಾವು ರೆಡಿಮೇಡ್ ಫುಡ್ ಅಲ್ಲ. ನಮ್ಮ ಸಾಮರ್ಥ್ಯ ದಿಂದ ಬೆಳೆದು ಬಂದಿದ್ದೇವೆ. ಜನ ಸಾಮಾನ್ಯರ ಭಾವನೆಗಳನ್ನು ನಾವು ಬಹಿರಂಗವಾಗಿ ಹೇಳಿದ್ದೇವೆ. ಪಕ್ಷ ವಿರೋಧ ಚಟುವಟಿಕೆ ಮಾಡಿದರೆ ಪಕ್ಷದಿಂದ ಹೊರ ಹಾಕಲಿ.ಲೋಕಸಭೆ ಟಿಕೆಟ್ ಬದಲಾವಣೆ ಮಾಡಿ ಎಂದು ಮೊದಲಿನಿಂದಲೂ ಹೇಳಿದ್ದೇವೆ. ಯಾವ ಸರ್ವೆಯಲ್ಲಿಯೂ ಗಾಯತ್ರಿ ಸಿದ್ದೇಶ್ವರ ಅವರ ಹೆಸರು ಬಂದಿಲ್ಲ. ಆದರೂ ಕೂಡ ಅವರಿಗೇ ಟಿಕೆಟ್ ನೀಡಲಾಗಿದೆ. ಇದನ್ನು ವಿರೋಧ ಮಾಡಿದ್ದೇವೆ’ ಎಂದರು.
‘ಪ್ರಧಾನಿ ಮೋದಿ ಅವರ ಶಿವಮೊಗ್ಗದ ಕಾರ್ಯಕ್ರಮಕ್ಕೆ ಯಡಿಯೂರಪ್ಪ ನವರು ಸೌಜನ್ಯಕ್ಕಾಗಿಯೂ ಆಹ್ವಾನ ನೀಡಿಲ್ಲ. ಅದು ದುರಂತ. ನಮ್ಮ ಅವಶ್ಯಕತೆ ಇಲ್ಲ ಎಂದರೆ ನಮ್ಮನ್ನು ಬಿಡಲಿ. ನಾವು ಮಾತ್ರ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿ ಎಂದು ಬಯಸುತ್ತೇವೆ’ ಎಂದರು.
‘ಕೆ.ಎಸ್. ಈಶ್ವರಪ್ಪನವರಿಗೂ ಕೂಡ ಟಿಕೆಟ್ ಕೊಡಬೇಕಿತ್ತು, ಅದು ಯಾವ ಕಾರಣಕ್ಕೆ ಎನ್ನುವುದು ಗೊತ್ತಿಲ್ಲ. ಹಾಗೆಂದು ನಾವು ಅವರ ಪರವಾಗಿ ಇದ್ದೇವೆ ಎಂದಲ್ಲ’ ಎಂದರು.