ಕರ್ಮಫಲ ಎಂಬುದು ಯಾರನ್ನೂ ಬಿಡುವುದಿಲ್ಲ. ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗೆ ಶೇಕಡ ತೊಂಬತ್ತರಷ್ಟು ಕರ್ಮಫಲ ತಕ್ಷಣವೇ ಸಿಗುತ್ತದೆ. ಹೀಗಾದಾಗ ಮನುಷ್ಯನಿಗೆ ಅಲ್ಲೇ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಆದ್ರೆ ಬಾಕಿಯಿರುವ ಶೇಕಡ ಹತ್ತರಷ್ಟು ಕರ್ಮಫಲ ಸಮಯ ನೋಡಿ, ಹುಡುಕಿಕೊಂಡು ಬಂದು ಫಲ ಕೊಡುತ್ತದೆ. ಅದರ ಪರಿಣಾಮ ಊಹಿಸಲೂ ಅಸಾಧ್ಯ… ಇಂಥ ಬೇರೆ ಬೇರೆ ಹಿನ್ನೆಲೆಯ ನಾಲ್ಕೈದು ಕಥೆಯನ್ನು ಜೋಡಿಸಿ, ಅದನ್ನು ತೆರೆಮೇಲೆ ತಂದಿರುವ ಸಿನಿಮಾ “ಮೆಟಡೊರ್’.
ಮನುಷ್ಯನ ಜೀವನ ಒಂದು ಪ್ರಯಾಣದಂತೆ. ಆ ಪ್ರಯಾಣವನ್ನು ಪ್ರಯಾಸವಾಗದಂತೆ ನಡೆಸಬೇಕು ಎಂಬ ಆಶಯವವನ್ನು “ಮೆಟಡೊರ್’ನಲ್ಲಿ ಕೂರಿಸಿ, ತೆರೆಮೇಲೆ ಓಡಾಡಿಸಿದ್ದಾರೆ ನಿರ್ದೇಶಕ ಸುದರ್ಶನ್.
ಒಂದಷ್ಟು ವೇದಾಂತ-ಸಿದ್ಧಾಂತ, ತತ್ವ ಎಲ್ಲವನ್ನೂ ಹಿಡಿದಿಟ್ಟು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಹೇಳಿರುವ ಚಿತ್ರತಂಡ ಪ್ರಯತ್ನ ಪ್ರಶಂಸನಾರ್ಹ. ಆದರೆ ಏಕಕಾಲಕ್ಕೆ ಸಾಗುವ ನಾಲ್ಕೈದು ಕಥೆಗಳು ತೆರೆಮೇಲೆ, ಅವುಗಳ ನಿರೂಪಣೆ ನೋಡುಗರಿಗೆ ಅಲ್ಲಲ್ಲಿ ಸಣ್ಣ ಗೊಂದಲಕ್ಕೆ ಕಾರಣವಾಗುವಂತಿದೆ.
ಇದನ್ನೂ ಓದಿ:‘777 ಚಾರ್ಲಿ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್: ಪ್ರೀಮಿಯರ್ ಶೋ ನೋಡಿದವರಿಂದ ಬಹುಪರಾಕ್
ಇನ್ನು ಈ ಕಥೆಗಳ ಪೈಕಿ, ಕೆಲವು ಕಥೆಗಳಲ್ಲಿ ಬರುವ ಹೊಸ ಕಲಾವಿದರ ಪಾತ್ರ ಪೋಷಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು. ಇನ್ನು ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಸಂಕಲನ, ಕಲರಿಂಗ್, ಹಿನ್ನೆಲೆ ಸಂಗೀತ ಮೊದಲಾದ ತಾಂತ್ರಿಕ ಕಾರ್ಯಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಬಹುತೇಕ ಹೊಸಬರೇ “ಮೆಟಡೊರ್’ನಲ್ಲಿ ಜರ್ನಿ ಮಾಡುತ್ತಿರುವ ಕಾರಣ, ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು, ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ಮೆಟಡೊರ್’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಹೊಸಪ್ರಯತ್ನದ ಸಿನಿಮಾಗಳನ್ನು ಬೆಂಬಲಿಸುವ ಮನಸ್ಸಿರುವವರು ಒಮ್ಮೆ “ಮೆಟಡೊರ್’ ನೋಡಿ ಬರಲು ಅಡ್ಡಿಯಿಲ್ಲ.
ಕಾರ್ತಿಕ್