Advertisement

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

02:49 PM Jun 06, 2023 | Team Udayavani |

ಮಾಸ್ತಿ: ಕನ್ನಡದ ಆಸ್ತಿ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಜನ್ಮ ದಿನವನ್ನು ಪ್ರತಿ ವರ್ಷ ಜೂ. 6 ರಂದು ಮಾಸ್ತಿ ಗ್ರಾಮದಲ್ಲಿ ಆಚರಣೆ ಮಾಡಿ ಕೈತೊಳೆದುಕೊಳ್ಳುವ ಡಾ. ಮಾಸ್ತಿ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಹಿತ್ಯಾಸಕ್ತರನ್ನು ಹಾಗೂ ಕನ್ನಡಾಭಿಮಾನಿಗಳನ್ನು ಆಕರ್ಷಿಸುವಂತಹ ಮತ್ಯಾವುದೇ ಕಾರ್ಯ ಕ್ರವಗಳು ನಡೆಯುತ್ತಿಲ್ಲ. ಅಲ್ಲದೆ, ಪ್ರಸ್ತುತ ಡಾ. ಮಾಸ್ತಿ ಸ್ಮಾರಕ ಭವನವು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಸಾಹಿತ್ಯಾಸಕ್ತರ ನೋವಿನ ಸಂಗತಿಯಾಗಿದೆ.

Advertisement

ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃ ತರು ಹಾಗೂ ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾದ ಸಾಹಿತಿ ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ ಅವರು ಹುಟ್ಟಿದ್ದು ತಾಯಿಯ ತವರೂರಾದ ಹುಂಗೇನಹಳ್ಳಿಯಾದರೂ, ಆಡಿ ಬೆಳೆದಿದ್ದು ಮಾತ್ರ ಮಾಸ್ತಿ. ತಮ್ಮ ಜೀವನವನ್ನು ಬಹುಭಾಗ ಕಳೆದಿದ್ದು ಬೆಂಗಳೂರಿನ ಗವಿಪುರಂ ಮನೆಯಲ್ಲಿ. ಡಾ.ಮಾಸ್ತಿ ಅವರ ತವರೂರಾದ ಮಾಸ್ತಿ ಗ್ರಾಮದಲ್ಲಿ ಅವರ ಮನೆಯನ್ನು ಸರ್ಕಾರ ಪುರಾತನ ಶೈಲಿಯಲ್ಲಿ ನವೀಕರಿಸಿ ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಪೆರಿಯಾತ್‌ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಿತು. ಪ್ರಸ್ತುತ ಸ್ಮಾರಕ ಭವನದಲ್ಲಿ ಸುಮಾರು 28 ಸಾವಿರಕ್ಕೂ ಹೆಚ್ಚು ಕಥೆ, ಕಾದಂಬರಿಗಳು, ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯ ಪುಸ್ತಕಗಳು ಹಾಗೂ ಸ್ಪರ್ಧಾತ್ಮಕ ಪುಸ್ತಕಗಳನ್ನು ಸಂಗ್ರಸಲಾಗಿದೆ. ಸಾಹಿತ್ಯಾಸಕ್ತರು ಬೆರಳೆಣಿಕೆಯಷ್ಟು ಮಾತ್ರ ಆಗಮಿಸಿದರೂ, ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರಯೋಜನ ಪಡೆಯುತ್ತಿದ್ದಾರೆ.

ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಮಾಸ್ತಿಯಲ್ಲಿ ಪುರಾತನ ಶೈಲಿಯಲ್ಲಿರುವ ಡಾ.ಮಾಸ್ತಿ ಸಾಹಿತ್ಯ ಸಂಸ್ಕೃತಿ ಭವನ ನಿರ್ಮಿಸಲು ಪಟ್ಟ ಶ್ರಮಕ್ಕೆ ಅಂದಿನ ಜಿಲ್ಲಾಧಿಕಾರಿ ಗಳಾದ ರೇಣುಕಾ ಚಿದಂಬರಂ ಅವರನ್ನು ಸ್ಮರಿಸಿಕೊಳ್ಳ ಬೇಕಾಗಿದೆ. ಆದರೆ, ಪ್ರಸ್ತುತ ಡಾ.ಮಾಸ್ತಿ ಸಾಹಿತ್ಯ ಸಂಸ್ಕೃತಿ ಭವನದಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದ್ದು, ಗ್ರಂಥಾಲಯದ ಛಾವಣಿಯ ಹೆಂಚುಗಳು ಹಾಳಾ ಗಿದ್ದು, ಮಳೆ ಬಂದರು ನೀರು ಸೊರುತ್ತದೆ. ಕಿಟಕಿಯ ಗಾಜುಗಳು ಹೊಡೆದಿದೆ. ಗ್ರಂಥಾಲಯದ ಆವರಣ ದಲ್ಲಿರುವ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಪ್ರಸ್ತುತ ನಿರ್ವಹಣೆ ಕೊರತೆಯಿಂದ ಡಾ. ಮಾಸ್ತಿ ಪೆರಿಯಾತ್‌ ಗ್ರಂಥಾಲಯವು ಕಳೆಗುಂದಿದೆ.

ಕವಿಶೈಲ ಮಾದರಿಯಲ್ಲಿ ಅಭಿವೃದ್ಧಿಪಡಿಸಿ: ಸಿದ್ದ ರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ದಲ್ಲಿ 2015-16ನೇ ಸಾಲಿನಲ್ಲಿ ಮಂಡಿಸಿದ್ದ ಬಜೆಟ್‌ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿವೃದ್ಧಿಗೆ ಆದ್ಯತೆ ನೀಡಿ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಅನುದಾನ ನೀಡಿದ್ದರು. ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಜನ್ಮ ಸ್ಥಳ ಅಥವಾ ಅವರ ಮನೆಯನ್ನು ಕವಿಶೈಲ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು 1 ಕೋಟಿ ರೂ. ಮೀಸಲಿರಿಸಿ ಬಜೆಟ್‌ ಮಂಡಿಸಿದ್ದರು. ಆದರೆ, ಅದು ಬಿಡುಗಡೆಯಾಗಿಲ್ಲ. ಡಾ.ಮಾಸ್ತಿ ಜನ್ಮ ಸ್ಥಳ ತಾಲೂಕಿನ ಶಿವಾರಪಟ್ಟಣವಾದರೂ, ಅವರ ತವರೂರು ಮಾತ್ರ ಮಾಸ್ತಿಯಾಗಿದ್ದು, ಮಾಸ್ತಿಯವರ ಮನೆ ಚಿಕ್ಕದಾಗಿದ್ದು, ಅಲ್ಲಿ ಕವಿಶೈಲ ಮಾದರಿ ಅಭಿವೃದ್ದಿ ಮಾಡುವುದು ಅಸಾಧ್ಯವಾಗಿದ್ದು, 2ನೇ ಬಾರಿ ಆಯ್ಕೆಯಾಗಿರುವ ಶಾಸಕ ಕೆ.ವೈ.ನಂಜೇಗೌಡ ಸರ್ಕಾರದ ಮೇಲೆ ಒತ್ತಡ ತಂದು ಜಮೀನು ಮಂಜೂರು ಮಾಡಿಸಿ, ಮಾಸ್ತಿ ಯಲ್ಲೇ ಕವಿಶೈಲ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆಸಕ್ತಿ ವಹಿಸಿ ಯಾತ್ರಸ್ಥಳವನ್ನಾಗಿ ಅಭಿವದ್ಧಿ ಮಾಡಲಿ ಎನ್ನುವುದು ಸಾಹಿತ್ಯಾಸಕ್ತರ ಆಶಯವಾಗಿದೆ.

ಬೆಂಗಳೂರಿನಲ್ಲಿ ಭವನ ನಿರ್ಮಾಣ: ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಶಿಷ್ಯರಾದ ಮಾವಿನಕೆರೆ ರಂಗನಾಥನ್‌ ವಯೋಸಹಜ ಕಾರಣ ದಿಂದಾಗಿ ಕಳೆದ 6 ತಿಂಗಳ ಹಿಂದೆ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಬೆಂಗಳೂರಿನಲ್ಲಿ ಮಾಸ್ತಿ ಭವನ ನಿರ್ಮಾಣಕ್ಕಾಗಿ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದ್ದರು. ಅವರ ಪ್ರಯತ್ನದಿಂದಾಗಿ ಬೆಂಗಳೂರಿನ ಜ್ಞಾನಭಾರತಿ ಬಡಾವಣೆಯಲ್ಲಿ ಮಾಸ್ತಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸವು ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ನೆರವೇರಿಸಲಾಗಿತ್ತು. ಮಾವಿನಕೆರೆ ರಂಗನಾಥನ್‌ ರಾಜೀನಾಮೆ ನೀಡಿರುವುದರಿಂದ ನಿರ್ವಹಣೆ ಕೊರತೆ ಎದ್ದು ಕಾಣಿಸುತ್ತಿದೆ ಎಂಬುದು ಕೇಳಿ ಬರುತ್ತಿದೆ.

Advertisement

ಮಾಸ್ತಿಯಲ್ಲಿ ಆಗಬೇಕಾಗಿರುವುದು?: ಸರ್ಕಾರ ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಪೆರಿಯಾತ್‌ ಗ್ರಂಥಾಲಯ ಅಧ್ಯಯನ ಕೇಂದ್ರವಾಗಿ ರೂಪುಗೊಳ್ಳುವ ಮೂಲಕ ಸಾಹಿತ್ಯಾಸಕ್ತರನ್ನು ಆಕರ್ಷಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಡಾ.ಮಾಸ್ತಿ ಅವರು ಬಳಸುತ್ತಿದ್ದ ವಸ್ತುಗಳನ್ನು ಸ್ಮಾರಕ ಭವನದಲ್ಲಿ ಪ್ರದರ್ಶನಕ್ಕೆ ಇಡಬೇಕು. ಮಾಸ್ತಿಯಲ್ಲಿ ಹೆಚ್ಚಾಗಿ ಕನ್ನಡದ ಕಾರ್ಯಕ್ರಮಗಳು ನಡೆಯಲು ಹೆಚ್ಚಿನ ಆದ್ಯತೆ ನೀಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನೀಯರು ಹಾಗೂ ನಾಡು ನುಡಿಗಾಗಿ ಶ್ರಮಿಸಿದ ಮಹಾನೀಯರ ಹೆಸರಿನಲ್ಲಿ ಕಾರ್ಯ ಕ್ರಮ ನಡೆಸಬೇಕಾಗಿದೆ.

ಕೇವಲ ಬೆಂಗಳೂರಿಗೆ ಸೀಮಿತಗೊಳಿಸಿಕೊಂಡಿರುವ ಡಾ.ಮಾಸ್ತಿ ಟ್ರಸ್ಟ್‌ ವತಿಯಿಂದ ಮಾಸ್ತಿ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರತಿ ವರ್ಷ ಮಾಸ್ತಿ ಗ್ರಾಮದಲ್ಲಿ ಹುಮ್ಮಿಕೊಳ್ಳಬೇಕಾಗಿದೆ. ಮಾಸ್ತಿ ಸ್ಮಾರಕ ಭವನವನ್ನು ಕನ್ನಡೋಪಯೋಗಿಯಾಗಿ ಮಾರ್ಪಪಡಿಸುವುದು ಅಗತ್ಯವಾಗಿದೆ. ಮಾಸ್ತಿ ಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜತೆಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಸಾಹಿತ್ಯಾಸಕ್ತರ ಕನಸು ನನಸಾಗಲಿದೆ.

2019ರಲ್ಲಿ ಮಾಸ್ತಿ ಪೆರಿಯಾತ್‌ ಗ್ರಂಥಾ ಲಯ ಸ್ಮಾರಕ ಭವನ ಪ್ರಾರಂಭವಾಗಿ ಸ್ಥಳೀಯವಾಗಿ ಖುಷಿ ಪಡೆಯವ ವಿಷಯ. ಆದರೆ ಪ್ರಶಸ್ತಿ ಪ್ರದಾನ ಸೇರಿದಂತೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಬೆಂಗಳೂರಿನ ಪಂಚತಾರಾ ಹೋಟೆಲ್‌ ಗಳಿಗೆ ಸೀಮಿತವಾಗಿರುವುದು ಬದಲಾಗಿ, ಮಾಸ್ತಿ ಟ್ರಸ್ಟ್‌ನ ಅಧಿಕಾರ ಒಬ್ಬರದಾಗದೆ, ವಿಕೇಂದ್ರೀಕೃತವಾಗಬೇಕು. ಮಾಸ್ತಿ ಟ್ರಸ್ಟ್‌ಗೆ ಬರುವ ಅನುದಾನ ಕೇವಲ ರಾಜಧಾನಿ ಬೆಂಗಳೂರಿಗೆ ಹೊಗದೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಹುಟ್ಟೂರು ಮಾಸ್ತಿ ಗ್ರಾಮದ ಅಭಿವೃದ್ಧಿ ಕಾಣಬೇಕು. ಇದು ಮಾಸ್ತಿ ಅವರ ಅಶಯವು ಆಗಿತ್ತು. -ಎ.ಅಶ್ವತ್ಥರೆಡ್ಡಿ, ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ, ಕಸಾಪ

ಗ್ರಂಥಾಲಯಕ್ಕೆ ಪ್ರತಿ ದಿನ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭ್ಯಾಸ ಮಾಡಿ, ಪ್ರಯೋಜನ ಪಡೆಯು ತ್ತಿದ್ದಾರೆ. ಕಳೆದ 6 ತಿಂಗಳಿಂದ ಕೆಲಸಗಾರರಿಗೆ ಇಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡು ತ್ತಿರುವ ನನಗೂ ವೇತನ ನೀಡಿಲ್ಲ. ಇದ ರಿಂದ ಕೆಲಸಗಾರರು ಬರುತ್ತಿಲ್ಲ. ಜನ್ಮ ದಿನಾಚರಣೆ ಮುಗಿದ ಬಳಿಕ ವೇತನ ಮಾಡಿಸಿಕೊಡುವುದಾಗಿ ಇಲಾಖೆ ತಿಳಿಸಿದೆ. -ಶ್ರೀನಾಥ್‌, ಗ್ರಂಥಾಲಯ ಮೇಲ್ವಿಚಾರಕರು

-ಎಂ.ಮೂರ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next