Advertisement

ಹೊಸ ರಂಗಪ್ರಕಾರ ಸೃಷ್ಟಿಸಿದ “ಮಾತಿನ ಮಾಸ್ಟರ್‌’ಹಿರಣ್ಣಯ್ಯ

02:00 AM Mar 27, 2018 | |

“”ಎಲ್ಲಿಯವರೆಗೆ ತಂದೆಯ ಬೂಟಿನಲ್ಲಿ ಕಾಲಿಟ್ಟು ನಡೆಯುತ್ತೀಯ? ನಿನ್ನದೇ ಭಾಷೆ, ಶೈಲಿ ಬೇಕಲ್ಲವೆ?” ಎಂದು ಕೆಣಕಿದರು ಅನಕೃ, ಬೀಚಿ ಹಾಗೂ ಬಳ್ಳಾರಿಯ ಭೀಮಪ್ಪ ಶೆಟ್ರಾ. “”ಲಂಚ ಎನ್ನುವುದು ವಿಶ್ವವ್ಯಾಪಿ, ಅದು ಸರ್ವಾಂತರ್ಯಾಮಿ. ಅದಕ್ಕೆ ಸಾವಿಲ್ಲ. ಲಂಚದ ಕುರಿತು ನೀನೇ ಯಾಕೆ ನಾಟಕ ರಚಿಸಿ ಆಡಬಾರದು?” ಎಂದೂ ಶೆಟ್ರಾ ಪ್ರಶ್ನಿಸಿದರು. ಫ‌ಲವಾಗಿ ಮೂಡಿಬಂದದ್ದೇ ವೃತ್ತಿರಂಗಭೂಮಿ ಚರಿತ್ರೆಯಲ್ಲಿ ಮೈಲುಗಲ್ಲು ಸ್ಥಾಪಿಸಿದ “ಲಂಚಾವತಾರ’ ಎಂಬ ನಾಟಕ. 

Advertisement

ಮಾತು… ಮಾತು… ಮಾತು… ಮಾತಿನ ಅರಮನೆ ಕಟ್ಟುತ್ತಲೇ ಅದರಿಂದ ಹೊಸ ರಂಗಪ್ರಕಾರ ಸೃಷ್ಟಿಸಿದ ಕನ್ನಡ ರಂಗಭೂಮಿಯ ಪ್ರತಿಭಾವಂತ, ಮಾಸ್ಟರ್‌ ಹಿರಣ್ಣಯ್ಯ ಅವರು. ಹತ್ತು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡ ಅವರ “ಲಂಚಾವತಾರ’ ನಾಟಕ ಕನ್ನಡ ವೃತ್ತಿರಂಗಭೂಮಿಯ ಕೆಲವೇ ದಾಖಲೆಗಳಲ್ಲಿ ಒಂದು. “ಭ್ರಷ್ಟಾಚಾರ’, “ಅತ್ಯಾಚಾರ’, “ಕಪಿಮುಷ್ಟಿ’, “ನಡುಬೀದಿ ನಾರಾಯಣ’-ಮುಂತಾದ ಅವರು ರಚಿಸಿ, ನಟಿಸಿದ ನಾಟಕದ ಶೀರ್ಷಿಕೆಗಳೇ ಸಮಾಜದ ಭ್ರಷ್ಟಾಚಾರ ಎಂಬ ಕೊಳೆ ತೊಳೆಯುವ ನಾಟಕದ ಉದ್ದೇಶವನ್ನು ಢಾಳಾಗಿ ಹೇಳಿಬಿಡುತ್ತವೆ. 

ತಂದೆ ಸ್ಥಾಪಿಸಿದ “ಹಿರಣ್ಣಯ್ಯ ಮಿತ್ರಮಂಡಳಿ’ಯನ್ನು ಮಾಸ್ಟರ್‌ ಮುಂದುವರಿಸಿದರಷ್ಟೇ ಅಲ್ಲ; ಕನ್ನಡ ರಂಗಭೂಮಿಯಲ್ಲಿ ಅದಾಗಲೇ ಇದ್ದ “ಮಾತಿನ ನಾಟಕ’ ಎಂಬ ಪ್ರಕಾರವನ್ನು ಬಲಪಡಿಸುವ ಮೂಲಕ ರಂಗಭೂಮಿ ಆಯಾಮ ಹೆಚ್ಚಿಸಿದರು. “ದೇವದಾಸಿ’, “ಎಚ್ಚಮ ನಾಯಕ’ ಎಂಬ ಮಹತ್ತರ ನಾಟಕಗಳನ್ನು ಕನ್ನಡ ರಂಗಭೂಮಿಗೆ ಕೊಟ್ಟ ನಟ, ನಾಟಕಕಾರ ಕೆ.ಹಿರಣ್ಣಯ್ಯ ಅವರ ಪುತ್ರರೇ ನಮ್ಮ ಈ ಮಾಸ್ಟರ್‌ ಹಿರಣ್ಣಯ್ಯ. ದೇವದಾಸಿ ನಾಟಕದ “ನಾಜೂಕಯ್ಯ’ ಪಾತ್ರದ ಮೂಲಕ ಕೆ.ಹಿರಣ್ಣಯ್ಯನವರು ಒಂದು ಆಧುನಿಕ ಐತಿಹ್ಯವನ್ನು ಸೃಷ್ಟಿಸಿದರು ಎಂದು ಕೆ.ವಿ.ಸುಬ್ಬಣ್ಣ ಹೇಳುತ್ತಾರೆ. ಚಾಪ್ಲಿನ್‌ ಮಾದರಿಯ ಅಂಶಗಳನ್ನು ಹೆಕ್ಕಿಕೊಂಡ ಈ ಐತಿಹ್ಯ ಒಂದು ಪರಂಪರೆಯಾಗಿ ಅವರ ಪುತ್ರ ಮಾಸ್ಟರ್‌ ಹಿರಣ್ಣಯ್ಯನವರಿಂದ ಬೆಳೆಯಿತು ಎಂದೂ ಅವರನ್ನುತ್ತಾರೆ. ಮಾಸ್ಟರ್‌ ಹಿರಣ್ಣಯ್ಯ ಅವರ ರಂಗಭೂಮಿಯ ಒಂದು ಅಂಗವಷ್ಟೇ ಅಲ್ಲ, ಅವರದೇ ಒಂದು ರಂಗಭೂಮಿ. ಅವರ ನಾಟಕಗಳಿಗೆ ವಸ್ತು ಸಿದ್ಧವಾಗಬೇಕಿಲ್ಲ. ಇದ್ದ ವಸ್ತುವಿಗೇ ಮಾತಿನ ಒಡವೆ ತೊಡಿಸಿ ಪ್ರೇಕ್ಷಕರನ್ನು ರಂಜಿಸಿಬಿಡುತ್ತಾರೆ ಎಂದು ಗೊ.ರು.ಚನ್ನಬಸಪ್ಪಹೇಳುತ್ತಾರೆ.

1934ರ ಫೆಬ್ರವರಿ 15ರಂದು ಮೈಸೂರಲ್ಲಿ ಕೆ.ಹಿರಣ್ಣಯ್ಯ ಹಾಗೂ ಶಾರದಮ್ಮ ದಂಪತಿಗೆ ಮಾಸ್ಟರ್‌ ಹಿರಣ್ಣಯ್ಯ ಜನಿಸಿದರು. ಅಪ್ಪ ತಾವು ಗಳಿಸಿದ ಹೆಸರನ್ನಷ್ಟೇ ಮಗನಿಗೆ ಬಿಟ್ಟು ತೆರಳಿದ್ದರು. ಅವರು ರಚಿಸಿದ್ದ ನಾಲ್ಕು ನಾಟಕಗಳ ಹಸ್ತಪ್ರತಿ, ಕೆ.ಹಿರಣ್ಣಯ್ಯ ಮಿತ್ರಮಂಡಳಿ ಎಂಬ ನಾಟಕದ ಬೋರ್ಡ್‌- ಅಷ್ಟೇ ತಂದೆಯಿಂದ ಬಂದ ಆಸ್ತಿ. ಕೊಡಗಿನಲ್ಲಿ ಧೋ ಎಂದು ಮಳೆ ಸುರಿಯುತ್ತಿತ್ತು. ಹಿರಣ್ಣಯ್ಯನವರಿಗೆ ಬೆಂಗಳೂರಲ್ಲಾಗಲಿ, ಮೈಸೂರಲ್ಲಾಗಲಿ ಸ್ವಂತದ ಮನೆ ಇರಲಿಲ್ಲ. ಹಾಗಾಗಿ ಕೆ.ಹಿರಣ್ಣಯ್ಯನವರ ತಾರಾಪತ್ನಿ ಹೆಸರಾಂತ ನಟಿ ಬಳ್ಳಾರಿ ಲಲಿತಮ್ಮನವರು ನಾಟಕದ ಸಾಮಾನು ಸರಂಜಾಮುಗಳನ್ನು ಬಳ್ಳಾರಿಗೆ ಸಾಗಿಸಿದರು. “ನರಸಿಂಹಮೂರ್ತಿ ಅಲಿಯಾಸ್‌ ಮಾಸ್ಟರ್‌ ಹಿರಣ್ಣಯ್ಯ’ ಅಕ್ಷರಶಃ ಬೀದಿಗೆ ಬಿದ್ದಿದ್ದರು.

“”ನೀನು ಓದಿರುವುದು ಪಿಯುಸಿವರೆಗೆ ಮಾತ್ರ. ಅದಕ್ಕೆ ಸಣ್ಣದಾದ ಸರ್ಕಾರಿ ನೌಕರಿ ಮಾಡಬೇಕಾಗುತ್ತದೆ. ಅದು ಬೇಡ. ತಂದೆಯ ರಂಗಶ್ರೀಮಂತಿಕೆಯನ್ನೇ ನೀನು ಮುಂದುವರಿಸು” ಎಂದು ಅನಕೃ ಸಲಹೆ ನೀಡಿದರು. ಸ್ನೇಹಿತರೊಂದಿಗೆ ಹಣ ಕೂಡಿಸಿ ನಾಲ್ಕುಸಾವಿರ ರೂ. ಬಂಡವಾಳವನ್ನೂ ಒದಗಿಸಿಕೊಟ್ಟರು. ತಂದೆ ಆಡುತ್ತಿದ್ದ “ದೇವದಾಸಿ’, “ಮಕ್ಮಲ್‌ ಟೋಪಿ’, “ಸುಭದ್ರಾ’, “ಎಚ್ಚಮ ನಾಯಕ’, “ಸದಾರಮೆ’ ನಾಟಕಗಳನ್ನೇ ಸಿದ್ಧಪಡಿಸಿಕೊಂಡು ಕಾನಕಾನಹಳ್ಳಿಯಲ್ಲಿ ಮೊದಲ ಕ್ಯಾಂಪ್‌ ಮಾಡಿದರು. ನಂತರ ಮಳವಳ್ಳಿ, ಕಿನಕಳ್ಳಿ, ಸೋಸಲೆ ಹೀಗೆ ಮುಂದುವರಿಸಿದರು. ಸೋಸಲೆ ಸ್ವಾಮೀಜಿಯವರು 500 ರೂಪಾಯಿ ಕೊಟ್ಟು ಹರಸಿದರು. 

Advertisement

ಏಳುಬೀಳಿನೊಂದಿಗೆ “ಮಿತ್ರಮಂಡಳಿ’ ಯಾತ್ರೆ ಆರಂಭಿಸಿತ್ತು. ಮದ್ರಾಸ್‌ನಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಬಿ.ಆರ್‌.ಪಂತುಲು ಅವರು ಸಹಾಯಕನಾಗಿರುವಂತೆ ಮಾಸ್ಟರ್‌ ಹಿರಣ್ಣಯ್ಯನವರನ್ನು ಆಹ್ವಾನಿಸಿದರು. ಮಿತ್ರಮಂಡಳಿ ಆಗ ಬೆಂಗಳೂರು ಕ್ಯಾಂಪ್‌ ಮಾಡಿತ್ತು. ನಾಟಕಗಳನ್ನು ಅರ್ಧಕ್ಕೆ ನಿಲ್ಲಿಸಿ ಮದ್ರಾಸ್‌ಗೆ ಪಯಣ ಬೆಳೆಸಿದರು ಮಾಸ್ಟರ್‌ ಹಿರಣ್ಣಯ್ಯ. 1954ರಿಂದ 56ರವರೆಗೆ ಮದ್ರಾಸ್‌ನಲ್ಲಿ ಪಂತುಲುರೊಂದಿಗೆ ಸಿನಿಮಾಗಳ ಸಹಾಯಕನಾಗಿ ಕೆಲಸ ಮಾಡಿದರು. 

ಈ ಮಧ್ಯೆ ಮುನಿರಂಗಪ್ಪ ಎಂಬ ವೃತ್ತಿರಂಗಭೂಮಿಯ ದೈತ್ಯ ಸಂಘಟಕ ಮಾಸ್ಟರ್‌ಗೆ ಪತ್ರ ಬರೆದರು. “”ಈಗ ಬಳ್ಳಾರಿಯಲ್ಲಿ ಲಲಿತಮ್ಮ ಹಾಗೂ ಅವರ ಅಣ್ಣ ವೆಂಕಪ್ಪ ಹಣಕಾಸಿನ ದೃಷ್ಟಿಯಿಂದ ಸುಸ್ಥಿತಿಯಲ್ಲಿದ್ದಾರೆ. ನೀವು ಅವರೊಂದಿಗೆ ಸೇರಿ ಅದ್ದೂರಿಯಾಗಿ ನಾಟಕ ಕಂಪನಿ ಪುನರಾರಂಭ ಮಾಡಬಹುದು” ಎಂದು ಪತ್ರದಲ್ಲಿ ವಿವರಿಸಿದ್ದರು. ಮಾಸ್ಟರ್‌ಗೆ ಸರಿ ಎನಿಸಿತು. ಬಳ್ಳಾರಿಗೆ ಬಂದು ಲಲಿತಮ್ಮ ಹಾಗೂ ಅವರ ಅಣ್ಣ ವೆಂಕಪ್ಪ ಅವರೊಂದಿಗೆ ಸೇರಿ ರಾಘವ ಕಲಾಮಂದಿರದಲ್ಲಿ “ದೇವದಾಸಿ’ ನಾಟಕನೊಂದಿಗೆ ಅದ್ದೂರಿ ಆರಂಭ ಮಾಡಿದರು. 

ವಿಶ್ವವ್ಯಾಪಿ ಲಂಚ!
ನಾಟಕ ಚೆನ್ನಾಗಿ ನಡೆಯುತ್ತಿದ್ದವು. “”ವೆಂಕಪ್ಪನವರೊಂದಿಗೆ ಜಂಟಿ ಮಾಲೀಕತ್ವ ಸಾಕು. ನಾಟಕಕ್ಕೆ ನಿಮ್ಮ ಮಾತೇ ಬಂಡವಾಳ. ಸ್ವತಂತ್ರವಾಗಿ ಮುಂದುವರಿಯಿರಿ” ಎಂದು ಮುನಿರಂಗಪ್ಪ ಮತ್ತೂಂದು ಸಲಹೆ ನೀಡಿದರು. ಚಿತ್ರದುರ್ಗದ ಕ್ಯಾಂಪಿನಲ್ಲಿ ಮಾಸ್ಟರ್‌ ಹಿರಣ್ಣಯ್ಯ “ಮಿತ್ರಮಂಡಳಿ’ಯ ಸಂಪೂರ್ಣ ಒಡೆಯರಾದರು. ಹೊಸದುರ್ಗ, ಶಿವಮೊಗ್ಗ, ದಾವಣಗೆರೆ ಹೀಗೇ ಮುಂದುವರಿಯಿತು. ನಾಟಕವೇನೋ ಯಶಸ್ವಿಯಾಗುತ್ತಿದ್ದವು. ಆದರೆ ಹೊಸತನ ಬೇಕೆನ್ನಿಸಿತು ಮಾಸ್ಟರ್‌ಗೆ. 

“”ಎಲ್ಲಿಯವರೆಗೆ ತಂದೆಯ ಬೂಟಿನಲ್ಲಿ ಕಾಲಿಟ್ಟು ನಡೆಯುತ್ತೀಯ? ನಿನ್ನದೇ ಭಾಷೆ, ಶೈಲಿ ಬೇಕಲ್ಲವೆ?” ಎಂದು ಕೆಣಕಿದರು ಅನಕೃ, ಬೀಚಿ ಹಾಗೂ ಬಳ್ಳಾರಿಯ ಭೀಮಪ್ಪ ಶೆಟ್ರಾ. “”ಲಂಚ ಎನ್ನುವುದು ವಿಶ್ವವ್ಯಾಪಿ, ಅದು ಸರ್ವಾಂತರ್ಯಾಮಿ. ಅದಕ್ಕೆ ಸಾವಿಲ್ಲ. ಲಂಚದ ಕುರಿತು ನೀನೇ ಯಾಕೆ ನಾಟಕ ರಚಿಸಿ ಆಡಬಾರದು?” ಎಂದೂ ಶೆಟ್ರಾ ಪ್ರಶ್ನಿಸಿದರು. ಫ‌ಲವಾಗಿ ಮೂಡಿಬಂದದ್ದೇ ವೃತ್ತಿರಂಗಭೂಮಿ ಚರಿತ್ರೆಯಲ್ಲಿ ಮೈಲುಗಲ್ಲು ಸ್ಥಾಪಿಸಿದ “ಲಂಚಾವತಾರ’ ಎಂಬ ನಾಟಕ. ಅಲ್ಲಿಂದ ಮುಂದಿನ ಅವತಾರವೆಲ್ಲ ಲಂಚಾವತಾರ! ನಭೂತೋ ನಭವಿಷ್ಯತಿ ಯಶಸ್ಸು ಅದಕ್ಕೆ.

ನಿಜಲಿಂಗಪ್ಪ, ಇಂದಿರಾಗಾಂಧಿ ಬೆದರಿಕೆ
1962ರ ಒಂದು ದಿನ ಮಿತ್ರಮಂಡಳಿಯ ಮೈಸೂರು ಕ್ಯಾಂಪ್‌. ಅಂದಿನ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ನಾಟಕ ನೋಡಲು ಆಗಮಿಸಿದ್ದರು. ಪ್ರಜಾವಾಣಿ ಸಂಪಾದಕ ಟಿ.ಎಸ್‌.ರಾಮಚಂದ್ರರಾಯರು, ಸಾಹಿತಿಗಳಾದ ತರಾಸು, ಅನಕೃ ಆ ದಿನದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಭ್ರಷ್ಟ ರಾಜಕಾರಣಿಗಳು ಹಾಗೂ ಆಡಳಿತ ಪಕ್ಷ ಕಾಂಗ್ರೆಸ್‌ನ ಜನ್ಮ ಜಾಲಾಡುತ್ತಿದ್ದ ಹಿರಣ್ಣಯ್ಯನವರನ್ನು ನೋಡಿ ನಿಜಲಿಂಗಪ್ಪನವರಿಗೆ ಏನನ್ನಿಸಿತೋ, “ನಾಟಕ ಹೇಗೆ ಮುಂದುವರಿಸುತ್ತೀಯೋ ನೋಡುತ್ತೇನೆ…’ ಎಂದು ಬೆದರಿಕೆ ಹಾಕಿದರು. ಮಿತ್ರಮಂಡಳಿ ಬೆಂಗಳೂರು ಕ್ಯಾಂಪ್‌ಗೆ ಬರುವ ಹೊತ್ತಿಗೆ ಮುಖ್ಯಮಂತ್ರಿಗಳಿಂದ ನಾಟಕಕ್ಕೆ ತಡೆಯಾಜ್ಞೆ ಬಂದುಬಿಡಬಹುದು ಎಂದು ನಿರೀಕ್ಷಿಸಿದ ಮಾಸ್ಟರ್‌ ಮೈಂಡ್‌- ಕೋರ್ಟಿನಿಂದ ಕೇವಿಯಟ್‌ ತಂದುಬಿಟ್ಟಿತು. ನಾಟಕ ಪ್ರಯೋಗ ನಿರಾತಂಕವಾಯಿತು. ಕೋರ್ಟಿನಲ್ಲಿ ಎರಡು ತಿಂಗಳು ವಾದ ವಿವಾದ ನಡೆದ ನಂತರ ಮತೀಯ ಭಾವನೆಗಳನ್ನು ಕೆರಳಿಸುವಂತಹದೇನೂ ನಾಟಕದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿತು. ಅಭಿವ್ಯಕ್ತಿ ಸ್ವಾತಂತ್ರÂಕ್ಕೆ ಸಿಕ್ಕ ಜಯ ಅದಾಗಿತ್ತು. ಮುಂದೆ ಅದೇ ನಿಜಲಿಂಗಪ್ಪನವರು ಹಿರಣ್ಣಯ್ಯನವರ ನಾಟಕಗಳನ್ನು ಮನಸಾರೆ ಮೆಚ್ಚಿಕೊಂಡಿದ್ದು ಈ ಕುರಿತು ಒಂದು ಲೇಖನ ಬರೆದದ್ದು ಒಂದು ಸ್ವಾಗತಾರ್ಹ ಬೆಳವಣಿಗೆ.

“ಕಪಿಮುಷ್ಟಿ’ ನಾಟಕಕ್ಕೂ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಂದ ಇಂತಹದೇ ಬೆದರಿಕೆ ಬಂತು. ನಾಟಕ ಬಂದ್‌ ಮಾಡುವಂತೆ ನಿಷೇಧಾಜ್ಞೆ ವಿಧಿಸಿದರು. ಕಂಪನಿಯ ಹೊರಗಡೆ ಇಡುತ್ತಿದ್ದ ಬ್ಯಾನರ್‌ಗಳಲ್ಲಿ ಇಂದು “ದೇವದಾಸಿ’, “ಎಚ್ಚಮ ನಾಯಕ’ ಎಂದೆಲ್ಲಾ ಬರೆದು ಒಳಗೆ “ಕಪಿಮುಷ್ಟಿ’ ನಾಟಕ ಪ್ರದರ್ಶಿಸುತ್ತಿದ್ದರು ಹಿರಣ್ಣಯ್ಯ. ಆ ದಿನಗಳಲ್ಲಿ ಸರ್ಕಾರಕ್ಕೆ ಹೀಗೆ ಚಳ್ಳೆಹಣ್ಣು ತಿನ್ನಿಸಲು ಜನಬೆಂಬಲವೇ ಅವರಿಗಿದ್ದ ನೈತಿಕ ಶಕ್ತಿ. ಹಿರಣ್ಣಯನವರದು ಸುಖೀ ಕುಟುಂಬ. ಪತ್ನಿ ಶಾಂತಾ ಅವರ ಪಾಲಿಗೆ ದೇವತೆಯಾಗಿಯೇ ಬಂದವರು. ಹಿರಣ್ಣಯ್ಯನವರಿಗೆ ಕಲಾಯಾತ್ರೆಯ ಜತೆಗೆ ಕುಡಿತ, ಜೂಜಿನಂತಹ ವ್ಯಸನಗಳು ಕೆಲಕಾಲ ಅಂಟಿಕೊಂಡಿದ್ದವು. ಆದರೆ ಶಾಂತಮ್ಮ ಮಕ್ಕಳ ಮುಂದೆ ಅವನ್ನೆಂದೂ ದೊಡ್ಡದು ಮಾಡಲಿಲ್ಲ. ಗಂಡನ ವ್ಯಸನಗಳನ್ನು ಗೌಣಗೊಳಿಸಿದರು, ಅಷ್ಟೇ ಅಲ್ಲ, ಮಕ್ಕಳಿಗೆ “”ನಿಮ್ಮ ತಂದೆ ಕನ್ನಡ ರಂಗಭೂಮಿಯಲ್ಲಿ ಎಷ್ಟು ಎತ್ತರದ ವ್ಯಕ್ತಿ” ಎಂದು ಬಣ್ಣಿಸುತ್ತಾ ತಂದೆಯ ಬಗ್ಗೆ ಅಪಾರ ಗೌರವ ಅಭಿಮಾನ ಮೂಡುವಂತೆ ಮಾಡಿದರು. ಹಾಗಾಗಿ ಐದೂ ಜನ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಕಾಲಮೇಲೆ ತಾವು ನಿಂತುಕೊಂಡಿದ್ದಾರೆ. ಎರಡನೆಯ ಪುತ್ರ ಬಾಬು ಹಿರಣ್ಣಯ್ಯ ಮಾತ್ರ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದರೂ ನಾಟಕ, ಕಿರುತೆರೆ, ಸಿನಿಮಾಗಳ ಪ್ರಖ್ಯಾತ ನಟನಾಗಿದ್ದು ತಂದೆಯ ಮಿತ್ರಮಂಡಳಿ ಯಾತ್ರೆಗೆ ಆಗಾಗ ಜೀವ ಕೊಡುತ್ತಾರೆ. 

ಹಿರಣ್ಣಯ್ಯ ಮತ್ತು ಜನಪ್ರಿಯತೆ
ಬೆಂಗಳೂರು ನಗರಸಾರಿಗೆ ಬಸ್‌ನಲ್ಲಿ ಪಯಣಿಸುವಾಗ “ಗಿರೀಶ್‌ ಕಾರ್ನಾಡ್‌ ಮನೆ ಎಲ್ಲಿದೆ?’ ಎಂದರೆ ಯಾರೂ ಹೇಳುವುದಿಲ್ಲ. ಆದರೆ “ಮಾಸ್ಟರ್‌ ಹಿರಣ್ಣಯ್ಯ ಮನೆ ಎಲ್ಲಿದೆ?’ ಎಂದರೆ ನಾಲ್ಕಾರು ಮಂದಿಯಾದರೂ ಹಿರಣ್ಣಯ್ಯನವರ ಮನೆ ಇಂಥಲ್ಲೇ ಇದೆ ಎಂದು ವಿವರಿಸುತ್ತಾರೆ. ಅಂತಹ ಜನಪ್ರಿಯತೆ ಅವರದು.  ನಾಟಕವಷ್ಟೇ ಅಲ್ಲ, ಸಿನಿಮಾ, ಧಾರಾವಾಹಿಯಲ್ಲೂ ಅವರ ಹೆಸರಿದೆ. 

ಪ್ರಶಸ್ತಿ ವಂಚಿತರು!
ಹಿರಣ್ಣಯ್ಯನವರು ಬಿಜೆಪಿ ಎಂದವರಿದ್ದಾರೆ. ಹಾಗಾದರೆ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಕೂಡಲೇ ಅವರಿಗೆ ಪದ್ಮ ಒಲಿಯಲೇಬೇಕಿತ್ತಲ್ಲ ಎಂದು ಮರುಪ್ರಶ್ನಿಸುವವರೂ ಇದ್ದಾರೆ. ಅಂತಹ ಉನ್ನತ ಪ್ರಶಸ್ತಿಗಳಿಗೆ ಬೇಕಾದ ಎಲ್ಲ ಅರ್ಹತೆ ಹಿರಣ್ಣಯ್ಯ ಅವರಿಗಿದೆ. ವಯಸ್ಸು ಈಗ 84. (ನಟನೆ ನಿಲ್ಲಿಸಿ ನಾಲ್ಕು ವರ್ಷವಾಯಿತು) ಪದ್ಮಶ್ರೀ ಹೋಗಲಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಬಂದಿಲ್ಲ.

ಗುಡಿಹಳ್ಳಿ ನಾಗರಾಜ

Advertisement

Udayavani is now on Telegram. Click here to join our channel and stay updated with the latest news.

Next