ಮಂಗಳೂರು: ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಕಳೆದ ಹತ್ತು ತಿಂಗಳಿಂದ ಸರಕಾರದಿಂದ ಒಂದೇ ಒಂದು ಲೀಟರ್ ಸೀಮೆ ಎಣ್ಣೆ ಬಿಡುಗಡೆಯಾಗಿಲ್ಲ. ಇನ್ನು 10 ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಮೀನುಗಾರರ ಪರವಾಗಿ ಬೃಹತ್ ಹೋರಾಟ, ಹಕ್ಕೊತ್ತಾಯ ನಡೆಸುವುದಾಗಿ ಶಾಸಕ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಮಂಗಳೂರಿನಿನಲ್ಲಿ ಮೀನುಗಾರ ಮುಖಂಡರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ತಿಂಗಳಿಗೆ ಉಚಿತವಾಗಿ 300 ಲೀ.ಸೀಮೆ ಎಣ್ಣೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಮೀನುಗಾರರಿಗೆ ಸೀಮೆ ಎಣ್ಣೆ ವಿತರಿಸುವ ವಿಚಾರವಾಗಿ ನಿರ್ಲಕ್ಷé ವಹಿಸಲಾಗುತ್ತಿದೆ ಎಂದವರು ಆರೋಪಿಸಿದರು.
ಸೀಮೆ ಎಣ್ಣೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೀನುಗಾರ ಮುಖಂಡರು ಇತ್ತೀಚೆಗೆ ಪ್ರತಿಭಟನೆಗೆ ಮುಂದಾದಾಗ ಪ್ರತಿಭಟನೆ ಮಾಡದಂತೆ ತಡೆಯಲಾಗಿತ್ತು. ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದಾಗಲೂ ಬಿಜೆಪಿ ಮುಖಂಡರು ಮೀನುಗಾರರ ಸಮಸ್ಯೆಯನ್ನು ಅವರ ಮುಂದಿಟ್ಟಿಲ್ಲ. ಪ್ರಸ್ತುತ ಸಮುದ್ರದಲ್ಲಿ ಮೀನು ಯಥೇತ್ಛವಾಗಿ ಬಲೆಗೆ ಬೀಳುತ್ತಿದ್ದು, ಸೀಮೆ ಎಣ್ಣೆ ಸಿಗದೆ, ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಸಣ್ಣ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಒಂದು ದಿನದಲ್ಲಿ ಬಗೆಹರಿಸಬಹುದಾಗ ಸಮಸ್ಯೆಯಾದರೂ, ಸರಕಾರದಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಮುಹಮ್ಮದ್ ಮೋನು, ಶುಭೋದಯ ಆಳ್ವ, ಟ್ರಾಲ್‌ಬೋಟ್ ಮೀನುಗಾರರ ಸಂಘಟನೆ ಅಧ್ಯಕ್ಷ ಚೇತನ್ ಬೆಂಗ್ರೆ, ಸತೀಶ್ ಕೋಟ್ಯಾನ್ ಮತ್ತಿತರರು ಇದ್ದರು.
ಮೀನುಗಾರರಿಗೆ ಮನೆ ಕಟ್ಟಲು ನೀಡುವ ಅನುದಾನವನ್ನೂ ಸರಕಾರ ನಿಲ್ಲಿಸಿದೆ. ಇಲ್ಲಿಯ ವರೆಗೆ ಒಂದೇ ಒಂದು ಮನೆಯನ್ನೂ ಕಟ್ಟಿ ಕೊಟ್ಟಿಲ್ಲ. ಇತ್ತೀಚೆಗೆ ಬಿಡುಗಡೆ ಮಾಡಿದ ಮನೆ ಫಲಾನುಭವಿಗಳ ಪಟ್ಟಿಯಲ್ಲಿ ಸಮುದ್ರವೇ ಇಲ್ಲದ ಸುಳ್ಯಕ್ಕೆ 60, ಬಂಟ್ವಾಳಕ್ಕೆ 50, ಮಂಗಳೂರು ದಕ್ಷಿಣಕ್ಕೆ 25 ಮನೆ ಹಂಚಿಕೆ ಮಾಡಲಾಗಿದೆ. ಆದರೆ ಮೀನುಗಾರರು ಹೆಚ್ಚಿರುವ ಉಳ್ಳಾಲ ಕ್ಷೇತ್ರಕ್ಕೆ ಕೇವಲ 10 ಮನೆ ಹಂಚಿಕೆ ಮಾಡಲಾಗಿದೆ.
-ಯು.ಟಿ.ಖಾದರ್
ಶಾಸಕ