ಇಸ್ಲಾಮಾಬಾದ್: ನೀಲಂ ಝೀಲಂ ನದಿಗೆ ಅಡ್ಡಲಾಗಿ ಚೀನಾ ಕಂಪನಿ ಬೃಹತ್ ಅಣೆಕಟ್ಟು ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಮುಜಾಫರಾಬಾದ್ ನಗರದಲ್ಲಿ ದೊಂದಿ ಹಿಡಿದು ಸೋಮವಾರ ತಡರಾತ್ರಿ ಭಾರೀ ಪ್ರತಿಭಟನೆ ನಡೆಯಿತು.
ದರಿಯಾ ಬಚಾವೋ, ಮುಜಾಫರಾಬಾದ್ ಬಚಾವೊ(ನದಿ ರಕ್ಷಿಸಿ, ಮುಜಾಫರಾಬಾದ್ ಉಳಿಸಿ)ಸಮಿತಿ ಮತ್ತೆ ಆಯೋಜಿಸಿದ್ದ ದೊಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ನೀಲಂ ಝೀಲಂ ಬೇಹಾನೆ ದೊ, ಹಮ್ನೆ ಜಿಂದಾ ರಹಾನೆ ದೊ (ನೀಲಂ, ಝೀಲಂ ನದಿ ಹರಿಯಲು ಬಿಡಿ, ಜತೆಗೆ ನಮ್ಮನ್ನು ಬದುಕಲು ಬಿಡಿ) ಎಂದು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಆಝಾದ್ ಪಟ್ಟಾನ್ ಮತ್ತು ಕೊಹಾಲಾದಲ್ಲಿ ಜಲವಿದ್ಯುತ್ ಯೋಜನೆಗಾಗಿ ಪಾಕಿಸ್ತಾನ ಮತ್ತು ಚೀನಾ ನಡುವೆ ಒಪ್ಪಂದವಾಗಿತ್ತು.
ಚೀನಾ, ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಂಗವಾಗಿ ಆಝಾದ್ ಪಟ್ಟಾನ್ ನಲ್ಲಿ 700.7 ಮೆಗಾ ವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಉಭಯ ದೇಶಗಳು 2020ರ ಜುಲೈ 6ರಂದು ಸಹಿ ಹಾಕಿದ್ದವು.
1.54 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಯ ವೆಚ್ಚದ ಪ್ರಾಯೋಜಕತ್ವವನ್ನು ಚೀನಾದ ಗೆಝ್ ಹೌಬಾ ಗ್ರೂಪ್ ಕಂಪನಿ (ಸಿಜಿಜಿಸಿ) ವಹಿಸಿಕೊಂಡಿದೆ. ಕೋಹಾಲಾ ಜಲವಿದ್ಯುತ್ ಯೋಜನೆಯಂತೆ ಝೀಲಂ ನದಿಯ ಮೇಲ್ಭಾಗದಲ್ಲಿ ಸುಮಾರು 7 ಕಿಲೋ ಮೀಟರ್ ಉದ್ದದವರೆಗೆ ಪಿಒಕೆ ಜಿಲ್ಲೆಯ ಆಝಾದ್ ಪಟ್ಟಾನ್ ಸೇತುವೆ ನಿರ್ಮಿಸಲಾಗುವುದು. ಇದರಿಂದ ಇಸ್ಲಾಮಾಬಾದ್ ನಿಂದ ಪಿಒಕೆ 90 ಕಿಲೋ ಮೀಟರ್ ದೂರದಲ್ಲಿರಲಿದೆ. ಈ ಯೋಜನೆ 2026ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.