ಕಲಬುರಗಿ: ಉಡುಪಿ ಮತ್ತು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕ್ರಮ ಖಂಡಿಸಿ ನಗರದಲ್ಲಿ ಶನಿವಾರ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಹಿಜಾಬ್ ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಸರ್ಕಾರಿ ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಖಂಡಿಸಿ ಘೋಷಣೆ ಕೂಗಿದರು. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣು ಮಕ್ಕಳ ಮೂಲಭೂತ ಹಕ್ಕು. ಅದು ನಮ್ಮ ಸಂಸ್ಕೃತಿ, ಸಂಪ್ರದಾಯವಾಗಿದೆ. ದಶಕಗಳಿಂದ ಮಹಿಳೆಯರು ಹಿಜಾಬ್ ಧರಿಸುತ್ತಿದ್ದಾರೆ. ಇಲ್ಲಿಯವರೆಗೆ ಇಲ್ಲದ ನಿರ್ಬಂಧ ಈಗೇಕೆ? ಹಿಜಾಬ್ ಮುಸ್ಲಿಂ ಮಹಿಳೆಯರ ಗೌರವ, ಘನತೆ, ನಂಬಿಕೆ ಪ್ರಶ್ನೆಯಾಗಿದೆ ಎಂದು ಘೋಷಣೆ ಕೂಗಿ, “ಹಿಜಾಬ್ ನಮ್ಮ ಹಕ್ಕು’ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು.
ಕಾಲೇಜು ವಿದ್ಯಾರ್ಥಿಯನಿರನ್ನು ಹೊರಗೆ ನಿಲ್ಲಿಸಿರುವ ಕ್ರಮ ಸರಿಯಲ್ಲ. ಇದು ಸಂಪೂರ್ಣ ಸಂವಿಧಾನ ಮತ್ತು ಕಾನೂನು ಬಾಹಿರವಾಗಿದೆ. ಕಾಲೇಜು ಆಡಳಿತ ಮಂಡಳಿಯವರು ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನ ಹೊರಗೆ ನಿಲ್ಲಿಸಿದ್ದು ಕ್ರೌರ್ಯದ ಪರಮಾವಧಿ. ಇಂತಹ ಘಟನೆ ಭವಿಷ್ಯದಲ್ಲಿ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಹಿಜಾಬ್ ಧರಿಸುವುದು ಅವರವರ ಇಚ್ಛೆ. ಇದರಿಂದ ಬೇರೆಯವರಿಗೆ ಏನು ಮಾಡಬೇಕಿದೆ. ಶಾಸಕಿಯಾಗಿ ನಾನು ಹಿಜಾಬ್ ಧರಿಸಿಕೊಂಡೇ ವಿಧಾನಸೌಧದ ಕಲಾಪಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಕ್ಷೇತ್ರದ ಜನರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಮುಂದೆಯೂ ಹಿಜಾಬ್ ಧರಿಸಿಯೇ ಸದನಕ್ಕೆ ಬರುತ್ತೇನೆ. ಹಾಗಿದ್ದರೆ ನನ್ನನ್ನು ತಡೆಯುತ್ತೀರಾ ಎಂದು ಶಾಸಕಿ ಖನೀಜ್ ಫಾತಿಮಾ ಸವಾಲೆಸೆದರು.
ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯರೊಂದಿಗೆ ಈ ರೀತಿ ವರ್ತಿಸುವುದು ಅಸಂವಿಧಾನಿಕವಾಗಿದೆ. ಹೀಗಾಗಿ ಪೂರಕವಾಗಿ ಸೂಚನೆಗಳನ್ನು ಹೊರಡಿಸುವ ಮೂಲಕ ಕೋಮು ಸೌಹಾರ್ದ ಕಾಪಾಡಬೇಕು ಮತ್ತು ರಾಷ್ಟ್ರೀಯ ಏಕತೆಗೆ ಭಂಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಬೆಂಬಲಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲತಾ ರಾಠೊಡ, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಶಿವಾನಂದ ಪಾಟೀಲ, ಅದಿಲ್ ಸೇಠ್, ಶಿವಾನಂದ ಹೊನಗುಂಟಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.