Advertisement

ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

12:32 PM Feb 10, 2022 | Team Udayavani |

ಆನೇಕಲ್‌ : ಅತ್ತಿಬೆಲೆ ಟಿವಿಎಸ್‌ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಗುಂಡಿ ಗಳಲ್ಲಿ ಬಿದ್ದು ಸಾಕಷ್ಟು ಜನ ಪ್ರಾಣ ಕಳೆದುಕೊಂಡ ಹಿನ್ನೆಲೆ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಹಾಗೂ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಅತ್ತಿಬೆಲೆ ಹಾಗೂ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ಟಿವಿಎಸ್‌ ಮುಖ್ಯರಸ್ತೆಯ ಬಳ್ಳೂರು ಕ್ರಾಸ್‌ ರಸ್ತೆಯಲ್ಲಿ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಒಂದು ಗಂಟೆ ಕಾಲ ರಸ್ತೆ ತಡೆ: ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಾಕಷ್ಟು ಟ್ರಾಫಿಕ್‌ ಜಾಮ್‌ ಉಂಟಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಜಾ ವಿಮೋಚನಾ ಚಳುವಳಿಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್‌ ಕೃಷ್ಣಪ್ಪ,ಕಳೆದ ಎರಡು ವರ್ಷದಿಂದ ಅತ್ತಿಬೆಲೆ ಹಾಗೂಟಿವಿಎಸ್‌ ನಡುವಿನ ರಸ್ತೆಯಲ್ಲಿ ಸಾಕಷ್ಟು ಜನ ದ್ವಿಚಕ್ರವಾಹನ ಸವಾರರು ಬಿದ್ದು ಪ್ರಾಣ ಕಳೆದು ಕೊಂಡಿದ್ದಾರೆ. ಟಿಪ್ಪರ್‌ ಲಾರಿಗಳ ಹಾವಳಿಯಿಂದಾಗಿ ಸಂಪೂರ್ಣ ರಸ್ತೆ ಹದಗಟ್ಟಿದೆ. ಹಲವಾರು ಬಾರಿ ಹೋರಾಟ ನಡೆದಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯುದ್ದಕ್ಕೂ ಗುಂಡಿಗಳಿದ್ದು ಸಣ್ಣ  ಪುಟ್ಟ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡಲು ದುಸ್ತರವಾಗಿದೆ. ಮಳೆ ಬಂದ ಸಂದರ್ಭದಲ್ಲಿ ರಸ್ತೆ ಕೆಸರು ರಾಡಿಯಾಗಿ ಮಾರ್ಪಾಡಾಗುತ್ತದೆ.

ರಸ್ತೆಯುದ್ದಕ್ಕೂ ಧೂಳು: ಈಗ ಬಿಸಿಲು ಕಾರಣದಿಂದ ರಸ್ತೆಯಲ್ಲಿ ಒಂದು ವಾಹನ ಮುಂದೆ ಹೋಗುತ್ತಿದ್ದರೆ ಧೂಳು ಆವರಿಸಿ ಮುಂದಿನ ವಾಹನ ಕಾಣದ ಪರಿಸ್ಥಿತಿಇದೆ. ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಅಕ್ಕಪಕ್ಕದ ಅಂಗಡಿಗಳ ಮಾಲಿಕರು ಧೂಳಿನಹಾವಳಿಯಿಂದ ವ್ಯಾಪಾರವಿಲ್ಲದೆ ಅಂಗಡಿಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ರಾಜ್ಯ ಸರ್ಕಾರ ಹಾಗೂಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆ ದುರಸ್ತಿಗೆ ಆಗ್ರಹ: ಹಿರಿಯ ಕಾಂಗ್ರೆಸ್‌ ಮುಖಂಡ ಬಳ್ಳೂರು ಮುನಿವೀರಪ್ಪ ಮಾತನಾಡಿ, ಆನೇಕಲ್‌ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದೆ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಹಲವಾರು ಬಾರಿ ಈರಸ್ತೆಯಲ್ಲಿ ಸ್ಥಳೀಯರು ಬಿದ್ದು ಕೈಕಾಲು ಮುರಿದುಕೊಂಡ ಆಸ್ಪತ್ರೆ ಸೇರಿದ್ದಾರೆ. ಇನ್ನು ಕೆಲವರುಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಸಮಸ್ಯೆಯ ನಡುವೆ ರಸ್ತೆಯಲ್ಲಿ ಪ್ರತಿ ದಿನ ಕಾರ್ಖಾನೆಗಳಿಗೆಹಾಗೂ ಕೈಗಾರಿಕಾ ಪ್ರದೇಶಗಳಿಗೆ ಕೆಲಸಕ್ಕೆ ಹೋಗಬೇಕೆಂದು ಶಾಲಾ- ಕಾಲೇಜುಗಳಿಗೆ ಹೋಗುವ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ಸರಿಪಡಿಸಲು ಗಮನಹರಿಸಬೇಕು. ಇಲ್ಲವಾದರೆ ಬಡವರು ಹಾಗೂ ಸುತ್ತಮುತ್ತಲ ಗ್ರಾಮದವರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Advertisement

ಧೂಳಿನಿಂದ ಅಂಗಡಿ ಬಂದ್‌: ಸ್ಥಳೀಯ ಅಂಗಡಿ ಮಾಲಕಿ ತ್ರಿಪುರಸುಂದರಿ ಮಾತನಾಡಿ, ಎರಡು ವರ್ಷದಿಂದ ನಾವು ಕೊರೊನಾ ಕಾರಣದಿಂದ ಕಾಯಿಲೆ ಅನುಭವಿಸಿಲ್ಲ, ಬದಲಾಗಿ ಪ್ರತಿದಿನ ಧೂಳು ಕೂಡಿದು ಸಾಕಷ್ಟು ಜನ ಅಂಗಡಿಯ ಮಾಲಿಕರು ಆಸ್ಪತ್ರೆಗಳಿಗೆ ದಾಖಲಾಗಿ ಅಂಗಡಿಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ. ನಾನು ಎರಡು ವರ್ಷದಿಂದ ಅಂಗಡಿ ನಡೆಸಲು ಸಾಧ್ಯ ಆಗದೆ ಸಾಕಷ್ಟು ನಷ್ಟ ಅನುಭಸಿದ್ದೇನೆ. ರಸ್ತೆ ಅಭಿವೃದ್ಧಿ ಮಾಡದೇ ಇದ್ದರೆ ಹಲವಾರು ಜನ ಬೀದಿಗೆ ಬರುವ ಸಾಧ್ಯತೆ ಇದೆ ಎಂದರು.

ಕಚೇರಿಗೆ ಮುತ್ತಿಗೆ ಎಚ್ಚರಿಕೆ: ಹೋರಾಟಗಾರ ಯಡವನಹಳ್ಳಿ ಕೃಷ್ಣಪ್ಪ ಮಾತನಾಡಿ ಲೋಕೋಪಯೋಗಿ ಅಧಿಕಾರಿಗಳಿಗೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಮನವಿ ಪತ್ರಸಲ್ಲಿಸಿದ್ದೇವೆ. ಆದರೆ ಕೆಲವು ಅಧಿಕಾರಿಗಳು ಬೇಜವಾಬ್ದಾರಿ ನಡೆ ತೋರುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಅನುದಾನ ಬಿಡುಗಡೆ ಬಳಿಕ ರಸ್ತೆ ದುರಸ್ತಿ: ಪ್ರಮುಖ ರಸ್ತೆ ಬಳ್ಳೂರು ಕ್ರಾಸ್‌ ಬಳಿ ಅಂತರರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆ ಭಾರಿ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿತು. ಈ ಹಿನ್ನೆಲೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದ್ದ ಅತ್ತಿಬೆಲೆ ಪೊಲೀಸ್‌ ಠಾಣೆಯ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿ ಜಯರಾಮಯ್ಯ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮನವಿ ಸ್ವೀಕರಿಸಿದರು. ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಎಇ ಜಯರಾಮಯ್ಯ ಸರ್ಕಾರದಿಂದ ಯಾವುದೇ ಅನುದಾನ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ರಸ್ತೆ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಹಣ ಬಿಡುಗಡೆಯಾದ ನಂತರ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಬಳ್ಳೂರು ರಮೇಶ್‌, ಪ್ರಜಾ ವಿಮೋಚನಾ ಚಳುವಳಿಯ ಜಿಲ್ಲಾ ಉಪಾಧ್ಯಕ್ಷ ಅರೆಹಳ್ಳಿ ಅಶ್ವಥ್‌, ತಾಲೂಕು ಅಧ್ಯಕ್ಷ ಹಳೆಹಳ್ಳಿ ರವಿ, ತಾಲೂಕು ಉಪಾಧ್ಯಕ್ಷ ಮುನಿರಾಜು , ಗ್ರಾಪಂ ಮಾಜಿ ಸದಸ್ಯ ಚನ್ನೆನ ಅಗ್ರಹಾರ ವೆಂಕಟೇಶ್‌, ಅತ್ತಿಬೆಲೆ ರಾಮಕೃಷ್ಣ, ಆದರೂ ಮದ್ದೂರಪ್ಪ, ಚಿಕ್ಕಹಾಗಡೆ ಶ್ರೀನಿವಾಸ್‌, ಪರಷುರಾಮ್‌, ಆಟೋ ಚಾಲಕರಾದ ಮಂಜುನಾಥ್‌, ಶ್ರೀನಿವಾಸ್‌, ಶಿವಕುಮಾರ್‌, ವಿನೋದ್‌ ಕುಮಾರ್‌, ಮುನಿಸ್ವಾಮಿ, ಸ್ಥಳೀಯ ಮಹಿಳೆಯರಾದ ನಾಗರತ್ನ, ಜಯಂತಿ, ಸರಸ್ವತಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next