ಇಸ್ಲಾಮಾಬಾದ್: ಆರ್ಥಿಕ ಹಾಗೂ ಆಹಾರ ಕೊರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲೀಗ ಭಾರೀ ಪ್ರಮಾಣದ ವಿದ್ಯುತ್ ಸಮಸ್ಯೆ ತಲೆದೋರಿದೆ. ವಿದ್ಯುತ್ ಗ್ರಿಡ್ ನ ವೈಫಲ್ಯದಿಂದಾಗಿ ಇಡೀ ಪಾಕ್ ನಾದ್ಯಂತ ಸೋಮವಾರ (ಜನವರಿ 23)ವಿದ್ಯುತ್ ಸರಬರಾಜು ಸ್ಥಗಿತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವನಿತಾ ಅಂಡರ್ 19 ವಿಶ್ವಕಪ್: ವೆಸ್ಟ್ ವಿಂಡೀಸ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ ರವಾಂಡ
ವಿದ್ಯುತ್ ಸರಬರಾಜು ಯಥಾಸ್ಥಿತಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿರುವುದಾಗಿ ವರದಿ ವಿವರಿಸಿದೆ. ರಾಷ್ಟ್ರೀಯ ಗ್ರಿಡ್ ನಲ್ಲಿನ ವೈಫಲ್ಯದಿಂದಾಗಿ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ ಎಂದು ಪಾಕಿಸ್ತಾನದ ಇಂಧನ ಸಚಿವಾಲಯ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ.
ಪಾಕಿಸ್ತಾನದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿರುವ ಬಗ್ಗೆ ವಿವಿಧ ವಿದ್ಯುತ್ ಹಂಚಿಕೆ ಕಂಪನಿಗಳು ಖಚಿತಪಡಿಸಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. ವಿದ್ಯುತ್ ಸರಬರಾಜಿನ ಎರಡು ಪ್ರಮುಖ ಲೈನ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಕ್ವೆಟ್ಟಾ ಹಾಗೂ ಬಲೂಚಿಸ್ತಾನದ 22 ಜಿಲ್ಲೆಗಳಲ್ಲಿ ವಿದ್ಯುತ್ ಇಲ್ಲದಂತಾಗಿದೆ. ಅದೇ ರೀತಿ ಲಾಹೋರ್ ಮತ್ತು ಕರಾಚಿಯಲ್ಲಿಯೂ ಕರೆಂಟ್ ಸ್ಥಗಿತಗೊಂಡಿರುವುದಾಗಿ ವರದಿ ಹೇಳಿದೆ.
ಇಸ್ಲಾಮಾಬಾದ್ ನಲ್ಲಿರುವ ಸುಮಾರು 117 ಗ್ರಿಡ್ ಸ್ಟೇಷನ್ ನಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಪೇಶಾವರದಲ್ಲಿಯೂ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಆರ್ಥಿಕ, ಆಹಾರದ ಕೊರತೆ ಜೊತೆಗೆ ವಿದ್ಯುತ್ ಸಮಸ್ಯೆಯಿಂದ ಪಾಕ್ ಇನ್ನಷ್ಟು ಬಿಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ ಎಂದು ವರದಿ ತಿಳಿಸಿದೆ.